RNI NO. KARKAN/2006/27779|Monday, June 16, 2025
You are here: Home » breaking news » ಕೌಜಲಗಿ:ಅದ್ಧೂರಿಯಾಗಿ ಜರುಗಿದ ಕೌಜಲಗಿ ಬಸವೇಶ್ವರ ಜಾತ್ರೆ

ಕೌಜಲಗಿ:ಅದ್ಧೂರಿಯಾಗಿ ಜರುಗಿದ ಕೌಜಲಗಿ ಬಸವೇಶ್ವರ ಜಾತ್ರೆ 

ಅದ್ಧೂರಿಯಾಗಿ ಜರುಗಿದ ಕೌಜಲಗಿ ಬಸವೇಶ್ವರ ಜಾತ್ರೆ

 

ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಏ 7 :

 
ಪಟ್ಟಣದ ಪ್ರಸಿದ್ಧ ಶ್ರೀ ಬಸವೇಶ್ರ ಜಾತ್ರೆಯು ಭಕ್ತರ ಹರ್ಷೋದ್ಘಾರದ ಮಧ್ಯೆ ಅದ್ದೂರಿಯಿಂದ ಜರುಗಿತು.
ಪ್ರತಿ ವರ್ಷ ಯುಗಾದಿ ಪ್ರತಿಪದ ಪಾಡ್ಯದಂದು ಜರುಗುವ ರಥೋತ್ಸವಕ್ಕೆ ಕೌಜಲಗಿ, ಗೋಸಬಾಳ, ಮನ್ನಿಕೇರಿ, ಕಳ್ಳಿಗುದ್ದಿ, ಬಿಲಕುಂದಿ ಹೊನಕುಪ್ಪಿ, ಕುಲಗೋಡ, ರಡ್ಡೇರಹಟ್ಟಿ ಮುಂತಾದ ಸುತ್ತಲಿನ ಗ್ರಾಮಸ್ಥರು ಸಾಗರೋಪಾದಿಯಲ್ಲಿ ಬಂದು ಸೇರುತ್ತಾರೆ. ಮುಂಜಾನೆ ಬಸವೇಶ್ವರ ಕರ್ತೃ ಗದ್ದುಗೆಗೆ ಮಹಾಅಭಿಷೇಕ ನೆರವೇರಿತು. 9:00 ಗಂಟೆಗೆ ಗೋವು ಪೂಜೆ ಹಾಗೂ ಚಂದ್ರಯ್ಯ ನೀಲಕಂಠಯ್ಯ ಹಿರೇಮಠ ಅವರ ಮನೆಯಿಂದ ರಥದ ಕಳಸವನ್ನು ಭವ್ಯ ಮೆರವಣಿಗೆಯ ಮೂಲಕ ಪಲ್ಲಕ್ಕಿಯಲ್ಲಿ ತರಲಾಯಿತು. ಪೂಜೆಯೊಂದಿಗೆ ಕಳಸವನ್ನು ಕುಶಲಕರ್ಮಿಗಳು ರಥದ ತುದಿಯಲ್ಲಿ ಜೋಡಿಸಿದರು. ಮಾಲೆ, ಬಾಳೆಗಡ, ಬಣ್ಣ ಬಣ್ಣದ ಬಟ್ಟೆ, ಛತ್ರ ಚಾಮರಗಳಿಂದ ಐದು ಅಂಕದ ಕಂಬದ ತೇರನ್ನು ಅಲಂಕರಿಸಿ ಸಾಯಂಕಾಲ 5:00 ಗಂಟೆಗೆ ಹರಹರ ಮಹಾದೇವ ಎಂಬ ಜನರ ಹರ್ಷೋದ್ಘಾರದೊಂದಿಗೆ ಎಳೆಯಲಾಯಿತು.
ಪೇಟೆಯಲ್ಲಿರುವ ಬಸವೇಶ್ವರ ದೇವಸ್ಥಾನದಿಂದ ಪೇಟೆಯ ಪ್ರಮುಖ ರಸ್ತೆ, ಶಿವನಮಾರಿ ಹೊಟೇಲ್, ಜಂಗ್ಲಿಸಾಬ ದರ್ಗಾ, ಶಿವಪ್ಪ ಯಲಿಗಾರ ಮನೆಗಳ ರಸ್ತೆಯ ಮೂಲಕ ಜಾಂಬೋಟಿ-ರಬಕವಿ ರಾಜ್ಯ ಹೆದ್ದಾರಿ 54 ರ ಹತ್ತಿರವಿರುವ ಪಾದಗಟ್ಟೆಯವರೆಗೆ ರಥ ನಿರಾತಂಕ ಚಲಿಸಿತು. ಇದರ ಮದ್ಯೆ ಭಕ್ತರು ಹುರುಪಿನಿಂದ ಬಾಳೆಹಣ್ಣು, ಕಾರಿಕು, ಬೆಂಡು-ಬೆತ್ತಾಸ, ನಾಣ್ಯಗಳನ್ನು ರಥಕ್ಕೆ ಭಕ್ತಿಯಿಂದ ಹಾರಿಸಿದರು. ರಥದ ಕಳಸಕ್ಕೆ ಯಾವುದೇ ದಕ್ಕೆಯಾಗದಂತೆ ಮುಂಚಿತವಾಗಿ ವಿದ್ಯುತ್ ತಂತಿಗಳನ್ನು ತುಂಡರಿಸಲಾಗಿದ್ದು, ಕುಶಲಕರ್ಮಿಗಳು ತಮ್ಮ ಪ್ರಾಣದ ಹಂಗು ತೊರೆದು ರಥದ ಕಳಸದ ರಕ್ಷೆಗೆ ಟೊಂಕಕಟ್ಟಿ ನಿಂತ ದೃಶ್ಯಗಳು ಕಂಡು ಬಂದವು. ನಂದಿಕೋಲು ಉತ್ಸವ ಮೂರ್ತಿಯನ್ನು ವಾದ್ಯಮೇಳಗಳೊಂದಿಗೆ ಮತ್ತೆ ಗೊಡಚನಮಲ್ಕಿ-ಬದಾಮಿ ರಾಜ್ಯ ಹೆದ್ದಾರಿ 134 ರಸ್ತೆಯ ಹತ್ತಿರವಿರುವ ಹಳೆಯ ಬಸವೇಶ್ವರ ಪಾದಗಟ್ಟೆಗೆ ತೆರಳಿ ಪೂಜೆ ಸಲ್ಲಿಸಿ ಮತ್ತೆ ರಥವನ್ನು ಸ್ವಸ್ಥಾನಕ್ಕೆ ತಂದು ನಿಲ್ಲಿಸಲಾಯಿತು. ಭಕ್ತರು ರಥ ಯಶಸ್ವಿಯಾಗಿ ಚಲಿಸಿದಕ್ಕೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ರಾತ್ರಿ ಭಜನಾ ಕಾರ್ಯಕ್ರಮಗಳು ಜರುಗಿದವು.

Related posts: