ಗೋಕಾಕ:ಭಂಡಾರದಲ್ಲಿ ಮಿಂದೆದ್ದ ಬೆಟಗೇರಿ ಗ್ರಾಮ
ಭಂಡಾರದಲ್ಲಿ ಮಿಂದೆದ್ದ ಬೆಟಗೇರಿ ಗ್ರಾಮ
*ರಂಗೇರಿದ ಶ್ರೀದೇವಿಯ ಹೊನ್ನಾಟ*ಗ್ರಾಮದಲ್ಲಿಗ ಹಬ್ಬದ ಸಂಭ್ರಮ*ಗ್ರಾಮದೇವಿಗೆ ಉಡಿ ತುಂಬಿ, ನೈವೇಧ್ಯ ಅರ್ಪಣೆ
*ಅಡಿವೇಶ ಮುಧೋಳ. ಬೆಟಗೇರಿ
ಐದು ವರ್ಷಕ್ಕೂಮ್ಮೆ ನಡೆಯುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ದೇವತೆ ದ್ಯಾಮವ್ವ ದೇವಿಯ ಜಾತ್ರೆಯ ಪ್ರಯುಕ್ತ ಗ್ರಾಮದಲ್ಲಿಗ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಲ್ಲಿಯ ದೇವಾಲಯಗಳು ನವವಧುವಿನಂತೆ ಸಿಂಗಾರಗೊಂಡು ಭಕ್ತರನ್ನು ತನ್ನತ್ತ ಸೆಳೆಯುತ್ತಿವೆ. ಗ್ರಾಮದಲ್ಲೆಡೆ ಭಕ್ತಿ-ಭಾವದ ಹೊಳೆ ಹರಿಯುತ್ತಿದೆ.
ಸುಮಾರು ನಾಲ್ಕೈದು ಶತಮಾನಗಳ ನಂತರ ಗ್ರಾಮದೇವತೆ ದ್ಯಾಮವ್ವದೇವಿಯ 2ನೇ ವರ್ಷದ ಜಾತ್ರಾಮಹೋತ್ಸವ ಐದು ದಿನಗಳ ಕಾಲ ಇದೇ ಸೋಮವಾರ ಆಗಸ್ಟ್.6 ರಿಂದ ಆರಂಭವಾಗಿದ್ದು, ಪರಸ್ಥಳದಲ್ಲಿರುವ ಸ್ಥಳೀಯರು ತವರಿಗೆ ಲಗ್ಗೆ ಇಟ್ಟಿದ್ದಾರೆ. ಮದುವೆಯಾಗಿ ಹೋದ ಹೆಣ್ಣು ಮಕ್ಕಳು, ನೆಂಟರಿಂದ ಮನೆಗಳೆಲ್ಲ ತುಂಬಿ ತುಳುಕುತ್ತಿದ್ದು, ಜಾತ್ರೆಯ ಸಂಭ್ರಮ ಇಮ್ಮಡಿಗೊಂಡಿದೆ. ಐತಿಹಾಸಿಕ ಹಿನ್ನಲೆ ಹೊಂದಿರುವ ಗ್ರಾಮದೇವತೆ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವವನ್ನು ಕಳೆದ ಎರಡು ವರ್ಷಗಳಿಂದ ಹಮ್ಮಿಕೊಂಡು ಅದ್ಧೂರಿಯಾಗಿ ಆಚರಿಸುತ್ತಿರುವ ಸ್ಥಳೀಯರು ಧಾರ್ಮಿಕ ಪರಂಪರೆ ಸಾರುತ್ತಿದ್ದಾರೆ.
ಎರಡನೇಯ ದಿನವಾದ ಮಂಗಳವಾರದಂದು ಮುಂಜಾನೆ 8ಗಂಟೆಗೆ ಪುರದೇವರ ಪಲ್ಲಕ್ಕಿ, ಸುಮಂಗಲೆಯರ ಆರತಿ, ಕುಂಭ ಮತ್ತು ವಾಧ್ಯಮೇಳಗಳೊಂದಿಗೆ ಸ್ಥಳೀಯ ಅಡವಿಸಿದ್ಧೇಶ್ವರ ದೇಗುಲದಿಂದ ಬಸ್ ನಿಲ್ದಾಣದ ಮೂಲಕ ಗ್ರಾಮದೇವತೆ ಮೂರ್ತಿಯನ್ನು ಗ್ರಾಮದ ಗೌಡರ ಕಟ್ಟೆಗೆ ಸಡಗರ, ಸಂಭ್ರಮದಿಂದ ತಂದು ಕೂಡ್ರಿಸಿಲಾಯಿತು. ಯುವಕರು, ಮಕ್ಕಳು ಒಬ್ಬರಿಗೊಬ್ಬರು ಭಂಡಾರ ಎರಚಿ ಸಂಭ್ರಮಿಸಿದರು. ಪುರ ಜನರಿಂದ ಶ್ರೀದೇವಿಯ ಉಡಿ ತುಂಬುವ, ನೈವೇಧ್ಯ ಅರ್ಪಣೆ ನಡೆದು, ಮದ್ಯಾಹ್ನ 2 ಗಂಟೆಗೆ ಓಪನ್ ಮತ್ತು 3 ಗಂಟೆಗೆ ನಾಲ್ಕು ಹಲ್ಲಿನ ಟಗರಿನ ಕಾಳಗ ಸ್ಪರ್ಧೆ ನಡೆದವು.
ಹೊನ್ನಾಟದ ಸಂಭ್ರಮ: ಜಾತ್ರಾ ಮಹೋತ್ಸವ ನಿಮಿತ್ತ ಗ್ರಾಮದಲ್ಲಿಂದು ರಾತ್ರಿ ಹೊತ್ತು ಶ್ರೀದೇವಿಯ ಹೊನ್ನಾಟದ ಸಂಭ್ರಮ ರಂಗೇರಿತ್ತು, ಇಡೀ ಗ್ರಾಮವೇ ಭಂಡಾರದಲ್ಲಿ ಮಿಂದೆದ್ದಿದೆ. ಮಕ್ಕಳು, ಯುವಕರು, ಮಹಿಳೆಯರು ಉತ್ಸಾಹದಿಂದ ಜಾತ್ರೆಯಲ್ಲಿ ಪಾಲ್ಗೊಂಡಿರುವುದು ಜಾತ್ರೆಗೆ ಇನ್ನಷ್ಟು ಮೆರಗು ಹೆಚ್ಚಿಸಿದೆ. ಗ್ರಾಮದ ಪ್ರಮುಖ ಬೀದಿಯಲ್ಲಿ ಶ್ರೀ ದೇವಿಯ ಹೊನ್ನಾಟ ಜರುಗಿದ ಬಳಿಕ ಇಲ್ಲಿಯ ಉದ್ದಮ್ಮಾ ಗುಡಿಗೆ ಗ್ರಾಮದೇವತೆ ಮೂರ್ತಿ ತಂದು ಕೂಡ್ರಿಸಲಾಯಿತು. ಆ.10ರಂದು ಜಾತ್ರೆಗೆ ತೆರೆ ಬೀಳಲಿದೆ.
ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ರಾಮಣ್ಣ ಬಳಿಗಾರ, ಶಿವಾಜಿ ನೀಲಣ್ಣವರ, ಲಕ್ಷ್ಮಣ ಸೋಮನಗೌಡರ, ವಿಠಲ ಕೋಣಿ, ಬಸವರಾಜ ಪಣದಿ, ಕಲ್ಲಪ್ಪ ಚಂದರಗಿ, ಸುರೇಶ ಬಡಿಗೇರ, ವೀರನಾಯ್ಕ ನಾಯ್ಕರ, ಗ್ರಾಮದೇವಿ ದೇವಾಲಯ ಅರ್ಚಕ ಬಾಳಪ್ಪ ಬಡಿಗೇರ, ಮುತ್ತೆಪ್ಪ ವಡೇರ ಸೇರಿದಂತೆ ಇಲ್ಲಿಯ ಎಲ್ಲ ಸಮುದಾಯದ ಹಿರಿಯರು, ಮಹಿಳೆಯರು, ಯುವಕ- ಯುವತಿಯರು, ಮಕ್ಕಳು, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಅಪಾರ ಸಂಖ್ಯೆಯಲ್ಲಿ ಭಕ್ತರು, ಗ್ರಾಮಸ್ಥರು ಇಂದು ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
“ಸುಮಾರು ನಾಲ್ಕೈದು ಶತಮಾನಗಳ ಬಳಿಕ ಗ್ರಾಮದಲ್ಲಿ ಗ್ರಾಮದೇವತೆಯ 2ನೇ ವರ್ಷದ ಜಾತ್ರೆ ನಡೆಯುತ್ತಿರುವದು ಸ್ಥಳೀಯರಲ್ಲಿ ಸಂಭ್ರಮ ಇಮ್ಮಡಿಗೊಳಿಸಿದೆ. ಧರ್ಮ, ಜಾತಿ, ಭೇದಭಾವ ಇಲ್ಲದೆ ಎಲ್ಲರೂ ಜಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಭಾವೈಕ್ಯತೆ ಮೆರೆಯುತ್ತಿದ್ದಾರೆ. * ಎಮ್.ಐ.ನೀಲಣ್ಣವರ ಗ್ರಾಮದ ಮುಖಂಡ. ಬೆಟಗೇರಿ, ತಾ.ಗೋಕಾಕ.
ಇಂದೇನು ಕಾರ್ಯಕ್ರಮ : ಬುಧವಾರ ಆ.8 ರಂದು ಮುಂಜಾನೆ 7 ಗಂಟೆಗೆ ದೇವಿಗೆ ಉಡಿ ತುಂಬುವ, ನೈವೇಧ್ಯ ಅರ್ಪಣೆ ನಡೆದ ಬಳಿಕ 8 ಗಂಟೆಗೆ ಟ್ಯಾಕ್ಟರ್ ರಿವರ್ಸ ಸ್ಪರ್ಧೆ, 11 ಗಂಟೆಗೆ ತೆರೆಬಂಡಿ ಸ್ಪರ್ಧೆ ನಡೆಯಲಿದ್ದು, ಸಾಯಂಕಾಲ 6 ಗಂಟೆಗೆ ದೇವಿಯ ಮೂರ್ತಿಯನ್ನು ಉದ್ದಮ್ಮಾ ಗುಡಿಯಿಂದ ಅಂಬೇಡ್ಕರ ವೃತ್ತಕ್ಕೆ ತಂದು ಕೂಡ್ರಿಸುವದು. ರಾತ್ರಿ 10 ಗಂಟೆಗೆ ದ್ಯಾಮವ್ವದೇವಿ ನಾಟ್ಯ ಸಂಘದವರಿಂದ ಪ್ರಾಣ ಹೋದರೂ ಮಾನಬೇಕು ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.