RNI NO. KARKAN/2006/27779|Thursday, July 31, 2025
You are here: Home » breaking news » ಗೋಕಾಕ: ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಬಾಲಚಂದ್ರ ಚಾಲನೆ

ಗೋಕಾಕ: ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಬಾಲಚಂದ್ರ ಚಾಲನೆ 

ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಬಾಲಚಂದ್ರ ಚಾಲನೆ

 

 

ಗೋಕಾಕ ಮೇ 30: ನಿಗದಿತ ಪ್ರಮಾಣದಲ್ಲಿ ಮಳೆ ಆಗದೇ ಇರುವದರಿಂದ ಕೃಷಿ ಚಟುವಟಿಕೆಗಳು ವಿಳಂಬವಾಗಿವೆ. ಮುಂಗಾರು ಹಂಗಾಮು ಆರಂಭವಾಗಿರುವದರಿಂದ ಎಲ್ಲರೂ ವರುಣ ದೇವನ ಆಗಮನಕ್ಕೆ ಪ್ರಾರ್ಥನೆ ಮಾಡಿಕೊಳ್ಳುವಂತೆ ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದ ಆವರಣದಲ್ಲಿ ಮಂಗಳವಾರ ಸಂಜೆ ಜರುಗಿದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ವರ್ಷವೂ ಸಹ ಭೀಕರ ಬರಗಾಲ ಆವರಿಸಿದೆ. ಇದರಿಂದ ರೈತಾಪಿ ವರ್ಗಕ್ಕೆ ಅಪಾರ ಹಾನಿಯಾಗಿದೆ. ಮಳೆ ಬಂದರೆ ಕೃಷಿ ಚಟುವಟಿಕೆಗಳು ಆರಂಭಗೊಳ್ಳುತ್ತವೆ. ಆದ್ದರಿಂದ ಮಳೆಗಾಗಿ ಎಲ್ಲರೂ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ. ದೇವರ ದಯೆಯಿಂದ ಮಳೆಯಾಗಿ ಮುಂಗಾರು ಹಂಗಾಮಿನ ಬೆಳೆಗಳು ಚೆನ್ನಾಗಿ ಬೆಳೆಯಲಿ. ರೈತರ ಮೊಗದಲ್ಲಿ ಮಂದಹಾಸ ಮೂಡಲಿ ಎಂದು ಹೇಳಿದರು.
ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ಗೊಬ್ಬರ, ಲಘು ಪೋಷಕಾಂಶಗಳು ಲಭ್ಯವಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಕೋರಿದರು. ಅಂತರಾಷ್ಟ್ರೀಯ ಜಲವರ್ಷ ಇರುವದರಿಂದ ನೀರಿನ ಸದ್ಬಳಕೆ ಮತ್ತು ವಿಫಲ ಕೊಳವೆ ಬಾವಿಗಳ ಮುಚ್ಚುವ ಬಗ್ಗೆ ರೈತರಿಗೆ ಅಧಿಕಾರಿಗಳು ತಿಳುವಳಿಕೆ ಮೂಡಿಸುವಂತೆ ಸೂಚನೆ ನೀಡಿದರು.
ಸಾವಯವ ಕೃಷಿ ಯೋಜನೆ, ಕೃಷಿ ಭಾಗ್ಯ ಯೋಜನೆ, ಸೂಕ್ಷ್ಮ ನೀರಾವರಿ ಯೋಜನೆ, ಕೃಷಿ ಯಾಂತ್ರೀಕರಣ ಯೋಜನೆ, ಪಾರಂಪರಿಕ ಕೃಷಿ ವಿಕಾಸ ಯೋಜನೆ, ನೀರಿನ ಸದ್ಬಳಕೆ ಅರಿವು, ಸಿರಿ ಧಾನ್ಯ ಬೆಳೆಗಳ ಕುರಿತು ಮಾಹಿತಿ, ಮಣ್ಣು ಆರೋಗ್ಯ ಅಭಿಯಾನ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ, ಹನಿ ನೀರಾವರಿ, ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಬೆಳೆ ವಿಸ್ತರಣೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ನಿಖರ ಬೇಸಾಯ ಯೋಜನೆಗಳ ಬಗ್ಗೆ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಪ್ರಸಕ್ತ ಸಾಲಿನಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ಮತ್ತು ಅರಣ್ಯ ಇಲಾಖೆ ಆಶ್ರಯದಲ್ಲಿ ಸಮಗ್ರ ಕೃಷಿ ಅಭಿಯಾನ ಹಮ್ಮಿಕೊಂಡಿದ್ದು, ಇಲಾಖೆಗಳ ನಡಿಗೆ, ರೈತರ ಮನೆ ಬಾಗಿಲಿಗೆ ಎನ್ನುವ ವಿಶಿಷ್ಟ ಅಭಿಯಾನವನ್ನು ಕೃಷಿ ಇಲಾಖೆ ಹಮ್ಮಿಕೊಂಡಿದೆ. ಅರಭಾವಿ ಹಾಗೂ ಕೌಜಲಗಿ ಹೋಬಳಿಗಳ ಎಲ್ಲ ಗ್ರಾಮಗಳಲ್ಲಿ ಸಂಚರಿಸಿ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದ ಮಾಹಿತಿಯನ್ನು ಈ ಕೃಷಿ ಜಾಥಾ ನೀಡಲಿದೆ.
ಕೌಜಲಗಿ ಎಂಇಎಸ್ ಅಧ್ಯಕ್ಷ ಅಶೋಕ ಪರುಶೆಟ್ಟಿ, ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ, ತಾಪಂ ಮಾಜಿ ಉಪಾಧ್ಯಕ್ಷ ಸುಭಾಸ ಕೌಜಲಗಿ, ಪ್ರಭಾಶುಗರ ನಿರ್ದೇಶಕ ಗಿರೀಶ ಹಳ್ಳೂರ, ಸಹಾಯಕ ಕೃಷಿ ನಿರ್ದೇಶಕ ಎ.ಡಿ. ಸವದತ್ತಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಎಂ.ಎಲ್. ಜನಮಟ್ಟಿ, ಅರಭಾವಿ ಕೃಷಿ ಅಧಿಕಾರಿ ಜರಿನಾ ಪಿರಜಾದೆ, ಕೌಜಲಗಿ ಕೃಷಿ ಅಧಿಕಾರಿ ಎಸ್.ಬಿ. ಕರಗಣ್ಣಿ, ಸಹಾಯಕ ಕೃಷಿ ಅಧಿಕಾರಿಗಳಾದ ವ್ಹಿ.ಪಿ. ಹಿರೇಮಠ, ಎಚ್.ಕೆ. ಜಮಾದಾರ, ನ್ಯಾಯವಾದಿ ಕೆಂಪಣ್ಣಾ ಚೌಕಾಶಿ, ಸಾಬಪ್ಪ ಬಂಡ್ರೊಳ್ಳಿ, ಸಂಗಣ್ಣಾ ಕಂಟಿಕಾರ, ಮುಂತಾದವರು ಉಪಸ್ಥಿತರಿದ್ದರು.

Related posts: