ಗೋಕಾಕ:ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ : ಡಾ.ನಯನಾ ಭಸ್ಮೆ

ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ : ಡಾ.ನಯನಾ ಭಸ್ಮೆ
ಗೋಕಾಕ ಆ 11: ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ತಾವುಗಳು ಆರೋಗ್ಯವಂತರಾಗಿ ಕುಟುಂಬದ ಆರೋಗ್ಯ ರಕ್ಷಣೆ ಮಾಡುವಂತೆ ಬೆಳಗಾವಿ ಗ್ರಾಮಾಂತರ ಜಿಲ್ಲೆ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಡಾ.ನಯನಾ ಭಸ್ಮೆ ಹೇಳಿದರು.
ಅವರು, ಮಂಗಳವಾರದಂದು ನಗರದ ಸಮುದಾಯ ಭವನದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಗೋಕಾಕ ತಾಲೂಕ ನಗರ ಹಾಗೂ ಗ್ರಾಮೀಣ ಮಂಡಲದಿಂದ ಹಮ್ಮಿಕೊಂಡ ಕ್ಯಾನ್ಸರ್ ಮತ್ತು ಸ್ಯಾನಿಟರಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದಿನ ಜೀವನ ಶೈಲಿಯಲ್ಲಿ ಹಲವಾರು ರೋಗಗಳಿಂದ ನರಳುತ್ತಿದ್ದಾರೆ. ಪೌಷ್ಟಿಕ ಆಹಾರ ಹಾಗೂ ವ್ಯಾಯಾಮಗಳನ್ನು ದಿನಚರಿಯಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಿರು. ಇಂದು ಮಹಿಳೆಯರು ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚು ಕಂಡು ಬರುತ್ತಿದ್ದು ಇದಕ್ಕಾಗಿ ನರೇಂದ್ರ ಮೋದಿಯವರು ದೇಶದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಎಚ್‍ಪಿವಿ ವ್ಯಾಕ್ಸಿನ್ ನೀಡುತ್ತಿದ್ದು ಅದನ್ನು 14ವರ್ಷದ ಹೆಣ್ಣು ಮಕ್ಕಳು ಪಡೆದು ಈ ರೋಗದಿಂದ ರಕ್ಷಣೆ ಪಡೆಯಿರಿ. ಸಣ್ಣ ವಯಸ್ಸಿನಲ್ಲಿ ಮದುವೆ, ತಂಬಾಕು ಸೇವನೆ, ರೋಗನಿರೋಧಕ ಶಕ್ತಿ ಕಡಿಮೆಯಾಗುವದು ಇವುಗಳಿಂದ ಕ್ಯಾನ್ಸರ್ ಬರುತ್ತಿದ್ದು ಮುಂಜಾಗೃತವಾಗಿ ಇವುಗಳಿಂದ ದೂರವಿರಬೇಕು ಎಂದು ಕರೆ ನೀಡಿದರು.
ವೇದಿಕೆಯ ಮೇಲೆ ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಲ ಅಧ್ಯಕ್ಷರುಗಳಾದ ಭೀಮಶಿ ಭರಮಣ್ಣವರ, ರಾಜೇಂದ್ರ ಗೌಡಪ್ಪಗೋಳ, ಆನಂದ ಅಪ್ಪುಗೋಳ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ ಒಡೆಯರ, ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಲದ ಅಧ್ಯಕ್ಷರುಗಳಾದ ಗೀತಾ ಜರತಾರಕರ, ಭಾರತಿ ಅಂಗಡಿ ಇದ್ದರು.
