RNI NO. KARKAN/2006/27779|Sunday, June 28, 2026
You are here: Home » breaking news » ಗೋಕಾಕ:ಶ್ರೀ ಶೂನ್ಯಸಂಪಾದನ ಮಠವು ಧಾರ್ಮಿಕ ಮತ್ತು ಸಾಮಾಜಿಕ ಕೇಂದ್ರವಾಗಿ ರೂಪುಗೊಂಡಿದೆ : ಶಾಸಕ ರಮೇಶ್

ಗೋಕಾಕ:ಶ್ರೀ ಶೂನ್ಯಸಂಪಾದನ ಮಠವು ಧಾರ್ಮಿಕ ಮತ್ತು ಸಾಮಾಜಿಕ ಕೇಂದ್ರವಾಗಿ ರೂಪುಗೊಂಡಿದೆ : ಶಾಸಕ ರಮೇಶ್ 

ಶ್ರೀ ಶೂನ್ಯಸಂಪಾದನ ಮಠವು ಧಾರ್ಮಿಕ ಮತ್ತು ಸಾಮಾಜಿಕ ಕೇಂದ್ರವಾಗಿ ರೂಪುಗೊಂಡಿದೆ : ಶಾಸಕ ರಮೇಶ್

ಗೋಕಾಕ ಜೂ 28 : ಶೂನ್ಯಸಂಪಾದನಮಠವು ಜನಸಾಮಾನ್ಯರ ಮಾರ್ಗದರ್ಶಿ ಕೇಂದ್ರವಾಗಿ ಹೊರಹೊಮ್ಮಿರುವುದಲ್ಲದೇ ಗೋಕಾಕ ಮತ್ತು ಸುತ್ತ-ಮುತ್ತಲಿನ ಭಕ್ತ ವೃಂದದ ಧಾರ್ಮಿಕ ಮತ್ತು ಸಾಮಾಜಿಕ ಕೇಂದ್ರವಾಗಿ ರೂಪುಗೊಂಡಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ರವಿವಾರದಂದು ಇಲ್ಲಿನ ಶ್ರೀಮಹಾಲಕ್ಷ್ಮೀ ಸಭಾಭವನದಲ್ಲಿ ಶೂನ್ಯ ಸಂಪಾದನಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ 55ನೇ ಜನ್ಮದಿನ ನಿಮಿತ್ತ 55 ತುಲಾಭಾರ ಮತ್ತು ಗುರುವಂದನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರೀಗಳ ಮಾರ್ಗದರ್ಶನ ನಮ್ಮೆಲ್ಲರಿಗೂ ಅಗತ್ಯವಿದ್ದು ನಾಗರಿಕರ ಶಾಂತಿ ಮತ್ತು ಸುವ್ಯವಸ್ಥೆಯಿಂದ ಕೂಡಿದ ಸಹಬಾಳ್ವೆಯ ಜೀವನಕ್ಕೆ ಮಾರ್ಗದರ್ಶೀಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ರಾಜ್ಯಸಭಾ ಮಾಜಿ ಸದಸ್ಯ ಈರಣ್ಣ ಕಡಾಡಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ತಮ್ಮ ಪಟ್ಟಾಧಿಕಾರದ ಬಳಿಕ ಶೈಕ್ಷಣಿಕ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಲ್ಲದೇ ಸಾಂಸ್ಕೃತಿಕವಾಗಿ ಪ್ರತಿವರ್ಷ ನಿರಂತರ ಹಮ್ಮಿಕೊಳ್ಳುತ್ತ ಬಂದಿರುವ ಶರಣ ಸಂಸ್ಕೃತಿ ಉತ್ಸವ ಶ್ರೀಗಳ ಜನಪರ ಕಾಳಜಿ ಹಾಗೂ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು .
ಸಾನಿಧ್ಯವನ್ನು ವಹಿಸಿ ಮಾತನಾಡಿದ ಅಂಕಲಗಿ-ಕುಂದರಗಿ ಅಡವಿಸಿದ್ಧೇಶ್ವರ ಮಠದ ಪೀಠಾಧಿಪತಿ ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮೀಜಿ ಶ್ರೀಗಳು ತಮ್ಮ ಶ್ರೀಮಠಕ್ಕೆ ಆಗಮಿಸುವ ಭಕ್ತ ವೃಂದದೊಂದಿಗೆ ಬೆರೆತು ಅವರ ಕಷ್ಠ-ಕಾರ್ಪಣ್ಯಗಳಲ್ಲಿ ಸಹಭಾಗಿಗಳಾಗಿ ಸೌಜನ್ಯತೆ ವ್ಯಕ್ತಪಡಿಸುವ ವಿಭಿನ್ಯ ಶೈಲಿಯ ಆತ್ಮೀಯತೆ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ವಿಶೇಷತೆಯಾಗಿದೆ ಎಂದು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುವಂದನಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಈಟಿ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಭಾವಚಿತ್ರದ ಅಂಚೆ ಚೀಟಿಗಳನ್ನು ರಾಜ್ಯಸಭಾ ಮಾಜಿ ಸದಸ್ಯ ಈರಣ್ಣ ಕಡಾಡಿ ಬಿಡುಗಡೆಗೊಳಿಸಿದರು. ಶ್ರೀಗಳಿಗೆ ಸದ್ಭಕ್ತರು ನಾಣ್ಯಗಳಿಂದ 55 ಪ್ರತ್ಯೇಕ ತುಲಾಭಾರಗಳನ್ನು ನಡೆಸಿಕೊಡುವ ಮೂಲಕ ʼಗುರವಂದನೆʼ ಸಲ್ಲಿಸದರು.

ವೇದಿಕೆಯಲ್ಲಿ ಮುಪ್ಪಯ್ಯನಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಸರ್ವೋತ್ತಮ ಜಾರಕಿಹೊಳಿ, ಬಸನಗೌಡ ಪಾಟೀಲ, ಲಿಂಗಾಯತ ಮಹಿಳಾ ವೇದಿಕೆ ಅಧ್ಯಕ್ಷೆ ಸೇವಂತಾ ಮುಚ್ಚಂಡಿಹಿರೇಮಠ, ಸಮಾರಂಭದ ಸ್ವಾಗತ ಸಮಿತಿ ಕಾರ್ಯದರ್ಶಿ ವಿವೇಕ ಜತ್ತಿ ಮತ್ತು ಕೋಶಾಧ್ಯಕ್ಷ ನೋಟರಿ ಶಂಕರ ಗೋರೋಶಿ,ಮಾತೋಶ್ರಿ ಸುವರ್ಣಾತಾಯಿ ಹೊಸಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: