ಗೋಕಾಕ:ʼನ್ಯಾಯದಾನ ಮಾಡಿದ ತೃಪ್ತಿ ಇದೆʼ: ನ್ಯಾಯಾಧೀಶ ರಾಜೀವ ಗೊಳಸಾರ

ʼನ್ಯಾಯದಾನ ಮಾಡಿದ ತೃಪ್ತಿ ಇದೆʼ: ನ್ಯಾಯಾಧೀಶ ರಾಜೀವ ಗೊಳಸಾರ
ಗೋಕಾಕ ಮೇ 19 : ಮೂರು ವರ್ಷಗಳ ಅವಧಿಗೆ ಇಲ್ಲಿ ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿ ನ್ಯಾಯದಾನ ಮಾಡಿದ ತೃಪ್ತಿ ನನಗಿದೆ ಎಂದು ಪ್ರಧಾನ ಜೆ.ಎಂ.ಎಫ್.ಸಿ. ಮತ್ತು ಸಿವಿಲ್ ನ್ಯಾಯಾಧಿಶ ರಾಜೀವ ಗೊಳಸಾರ ಹೇಳಿದರು.
ಸೋಮವಾರ ಇಲ್ಲಿನ ವಕೀಲರ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ನೀಡಿದ ತುಂಬು ಹೃದಯದ ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಮ್ಮ ಸೇವಾ ಅವಧಿಯಲ್ಲಿ ಸಂಘದ ಸದಸ್ಯರು ನೀಡಿದ ಸಹಕಾರದಿಂದ ಇಲ್ಲಿನ ಸಾಕಷ್ಟು ಪ್ರಕರಣಗಳನ್ನು ಕಾನೂನಾತ್ಮಕವಾಗಿ ಮತ್ತು ರಾಜಿ ಸಂಧಾನಗಳ ಮೂಲಕ ಇತ್ಯರ್ಥ ಪಡಿಸಲು ನೆರವಾಯಿತು ಎಂದು ಸಹಕಾರವನ್ನು ಸ್ಮರಿಸಿದರು.
ಅದೇ ರೀತಿ ೧ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ಮತ್ತು ಸಿವಿಲ್ ನ್ಯಾಯಾಧೀಶೆ ಸೂರ್ಯಪ್ರಭ ಎಚ್. ಡಿ. ಮತ್ತು ೨ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ಮತ್ತು ಸಿವಿಲ್ ನ್ಯಾಯಾಧೀಶೆ ರೂಪಾ ಮಟ್ಟಿ ಅವರೂ ತಮ್ಮ ನ್ಯಾಯಾಂಗ ಸೇವಾ ಅವಧಿಯಲ್ಲಿ ವಕೀಲರ ಸಂಘ ಮತ್ತು ನ್ಯಾಯಾಲಯ ಸಿಬ್ಬಂದಿ ನೀಡಿದ ಸಹಕಾರ ಸ್ಮರಣೀಯ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಉಮೇಶ ಆತ್ನೂರೆ ಅವರು, ನ್ಯಾಯಾಂಗ ಇಲಾಖೆ ಅಧಿಕಾರಿಗಳು ಮತ್ತು ವಕೀಲರ ಸಂಘದ ಸದಸ್ಯರ ನಡುವೆ ಇರುವ ಅವಿನಾಭಾವ ಸಂಬಂಧ ಮತ್ತು ಅವರಲ್ಲಿ ವೃತ್ತಿ ಪರತೆ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸಹಾಯಕಾರಿ ಆಗುವುದು ಎಂಬುದಕ್ಕೆ ಗೋಕಾಕ ವಕೀಲರ ಸಹಕಾರವೇ ಸಾಕ್ಷಿ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಬಿ.ಪಾಟೀಲ ಅವರು ಮಾತನಾಡಿ, ವಕೀಲರ ಸಂಘದ ಸದಸ್ಯರು ಹಾಗೂ ನ್ಯಾಯಾಧೀಶರ ನಡುವಿನ ಸಮನ್ವಯತೆ ವೃತ್ತಿಯ ಘನತೆಯನ್ನು ಎತ್ತಿ ಹಿಡಿಯಲು ಸಾಧ್ಯ ಎಂದರು.
ವೇದಿಕೆಯಲ್ಲಿ ಹೆಚ್ಚುವರಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಮಹಾದೇವ ಆತ್ನೂರೆ, ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.
ಇದಕ್ಕೂ ಪೂರ್ವದಲ್ಲಿ ವಕೀಲರ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಬೇರಡೆಗೆ ವರ್ಗಾವಣೆಗೊಂಡ ನ್ಯಾಯಾಧೀಶರಾದ ರಾಜೀವ ಗೊಳಸಾರ, ಸೂರ್ಯಪ್ರಭ ಎಚ್.ಡಿ. ಮತ್ತುರೂಪಾ ಮಟ್ಟಿ ಅವರಿಗೆ ಹೃತ್ಪೂರ್ವವಕ ಬೀಳ್ಕೊಟ್ಟು, ಇದೇ ಜೂನ್ 30ರಿಂದ ಒಂಭತ್ತು ದಿನಗಳವರೆಗೆ ಇಲ್ಲಿ ನಡೆಯುವ ಗೋಕಾಕ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು.
ನೋಟರಿ ಪಬ್ಲಿಕ್ ಶಂಕರ ಗೋರೋಶಿ ಕಾರ್ಯಕ್ರಮ ನಿರೂಪಿಸಿದರು.