ಸಂಕೇಶ್ವರ :ಸಂಕೇಶ್ವರ ಮಹಿಳೆ ಶೂಟೌಟ್ ಪ್ರಕರಣ : ಪುರಸಭೆ ಸದಸ್ಯನ ಬಂಧನ
ಸಂಕೇಶ್ವರ ಮಹಿಳೆ ಶೂಟೌಟ್ ಪ್ರಕರಣ : ಪುರಸಭೆ ಸದಸ್ಯನ ಬಂಧನ
ನಮ್ಮ ಬೆಳಗಾವಿ ಇ – ವಾರ್ತೆ, ಸಂಕೇಶ್ವರ ಜ 20
ಸಂಕೇಶ್ವರದ ಒಬ್ಬಂಟಿ ಮಹಿಳೆ ಇದ್ದ ಮನೆಗೆ ನುಗ್ಗಿ ಗುಂಡಿಕ್ಕಿ ಹತ್ಯೆ ಮಾಡಿರುವ ಪ್ರಕರಣದಲ್ಲಿ ಸಂಕೇಶ್ವರ ಪುರಸಭೆ ಸದಸ್ಯ ಉಮೇಶ ಕಾಂಬಳೆ ಎಂಬಾತನನ್ನು ಸಂಕೇಶ್ವರ ಪೊಲೀಸರು ಬಂಧಿಸಿದ್ದಾರೆ.
ಜ.16ರಂದು ಸಂಕೇಶ್ವರ ನಗರದ ಸಂಸುದ್ದಿ ಗಲ್ಲಿ ಕ್ರಾಸ್ ಹತ್ತಿರದ ಮನೆಯಲ್ಲಿದ್ದ ಶೈಲಜಾ ಸುಭೇದಾರ ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಎಸ್.ಪಿ ಮಹಾಲಿಂಗ ನಂದಗಾವಿ ಅವರು ಈ ಹತ್ಯೆಯ ತನಿಖೆಯ ಕುರಿತು ಯಮಕನಮರಡಿ ಸಿಪಿಐ ರಮೇಶ ಛಾಯಗೋಳ ಹಾಗೂ ಸಂಕೇಶ್ವರ ಪಿಎಸ್.ಐ ಗಣಪತಿ ಕೊಂಗನೊಳಿ ಅವರ ನೇತ್ರತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಿತ್ತು.
ಈ ತನಿಖಾ ತಂಡವು ಈ ಹತ್ಯೆಯ ಜಾಡು ಹಿಡಿದು ಹೋದಾಗ ಇದೊಂದು ಹಣಕಾಶಿನ ವ್ಯವಹಾರಕ್ಕೆ ಸಂಬಂಧಿಸಿದ ಹತ್ಯೆ ಎಂಬುವದು ತನಿಖೆಯಿಂದ ಹೊರಬಂದಿದೆ.
ಶೈಲಜಾ ಸುಭೇದಾರ ಹಾಗೂ ಸಂಕೇಶ್ವರ ಪುರಸಭೆ ಸದಸ್ಯ ಉಮೇಶ ಕಾಂಬಳೆ ಅವರ ನಡುವೆ ಹಣಕಾಶಿನ ವ್ಯವಹಾರದ ಇದ್ದ ಹಿನ್ನೆಲೆಯಲ್ಲಿ ಮನಸ್ತಾಪಗೊಂಡಿದ್ದ ಉಮೇಶ ಕಾಂಬಳೆ, ಶೈಲಜಾ ಮನೆಗೆ ನುಗ್ಗಿ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಈ ಹತ್ಯೆಗೆ ಕಂಟ್ರಿ ಪಿಸ್ತೂಲ್ ಬಳಸಿ ಶೈಲಜಾಳನ್ನು, ಉಮೇಶ ಕಾಂಬಳೆ ಹತ್ಯೆ ಮಾಡಿದ್ದಾನೆ ಎಂದು ತನಿಖೆ ವೇಳೆಯಲ್ಲಿ ಬಹಿರಂಗಗೊಂಡಿದೆ. ತನಿಖೆ ವೇಳೆಯಲ್ಲಿ ಕಂಟ್ರಿ ಪಿಸ್ತೂಲ್ ಸೇರಿದಂತೆ ಕೆಲವು ಮಹತ್ವದ ದಾಖಲೆಗಳನ್ನು ಪೊಲೀಸ್ ತನಿಖಾ ತಂಡ ವಶಕ್ಕೆ ಪಡೆದಿದೆ.
ಈ ಕೊಲೆ ಪ್ರಕರಣವನ್ನು ಕೇವಲ ಮೂರು ದಿನಗಳಲ್ಲಿ ಪೊಲೀಸ್ ತಂಡ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಸದ್ಯ ಪೊಲೀಸ್ ವಶದಲ್ಲಿರುವ ಆರೋಪಿಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಸಾದ್ಯತೆ ಇದೆ ಎಂದು ತಿಳಿದು ಬಂದಿದೆ.