ಗೋಕಾಕ:ಉತ್ತಮ ಆರೋಗ್ಯದಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ : ಡಾ. ಸೀಮಾ ಮಾಸೂರಕರ

ಉತ್ತಮ ಆರೋಗ್ಯದಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ : ಡಾ. ಸೀಮಾ ಮಾಸೂರಕರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 11 :
ಉತ್ತಮ ಆರೋಗ್ಯದಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಅದಕ್ಕಾಗಿ ವಿದ್ಯಾರ್ಥಿನಿಯರು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಇಲ್ಲಿಯ ಖ್ಯಾತ ವೈದ್ಯ ಡಾ. ಸೀಮಾ ಮಾಸೂರಕರ ಹೇಳಿದರು.
ಬುಧವಾರದಂದು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ವಿದ್ಯಾರ್ಥಿನಿಯರು ಹಾಗೂ ಅವರ ತಾಯಂದಿರಿಗೆ ಹಮ್ಮಿಕೊಂಡ ಆರೋಗ್ಯ ಮಾಹಿತಿ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿನಿಯರು ಬೆಳವಣಿಗೆಯಾಗುತ್ತಾ ಸಾಗಿದಾಗ ಅವರ ಆರೋಗ್ಯದಲ್ಲಿ ಹಾಗೂ ದೇಹದಲ್ಲಿ ಹಲವಾರು ಬದಲಾವಣೆಗಳನ್ನು ಕಾಣುತ್ತೇವೆ. ಬದಲಾವಣೆ ಹಾಗೂ ಆರೋಗ್ಯ ಸಮಸ್ಯೆಗಳತ್ತ ತಾಯಂದಿರು ಹೆಚ್ಚಿನ ಗಮನ ಹರಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದರೊಂದಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಮಾಡಬೇಕೆಂದು ತಿಳಿಸಿದರಲ್ಲದೇ ಆರೋಗ್ಯ ಸಮಸ್ಯೆಗಳ ಚಿಕಿತ್ಸೆ ಕುರಿತು ಸಮಗ್ರವಾಗಿ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾಪೀಠದ ಹೆಚ್‍ಓಡಿ ಶೀರಿನ್ ಮೋಮಿನ ಸೇರಿದಂತೆ ಅನೇಕರು ಇದ್ದರು.