ಘಟಪ್ರಭಾ:ವಿಜೃಂಭನೆಯಿಂದ ಜರುಗಿದ ಏಳುಕೊಳ್ಳದ ಯಲ್ಲಮ್ಮದೇವಿ ಜಾತ್ರೆ
ವಿಜೃಂಭನೆಯಿಂದ ಜರುಗಿದ ಏಳುಕೊಳ್ಳದ ಯಲ್ಲಮ್ಮದೇವಿ ಜಾತ್ರೆ
ಘಟಪ್ರಭಾ ಜ 31 : ಸಮೀಪದ ಶಿಂದಿಕುರಬೇಟ ಗ್ರಾಮದ ಮತ್ತು ಪ್ರಭಾ ಶುಗರ್ಸ್‍ನ ಮಧ್ಯೆ ಭಾಗದಲ್ಲಿರುವ ಏಳುಕೊಳ್ಳದ ಯಲ್ಲಮ್ಮದೇವಿ ಜಾತ್ರೆಯು ವಿಜೃಂಭನೆಯಿಂದ ಜರುಗಿತು.
ಮುಂಜಾನೆ ಶ್ರೀ ಯಲ್ಲಮ್ಮದೇವಿಗೆ ರುದ್ರಾಭಿಷೇಕ, ಮಹಾಪೂಜೆ, ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಭಂಡಾರದ ಹಾರಿಸುವ ಮೂಲಕ ಭಕ್ತರು ದೇವಿಯ ದರ್ಶನ ಪಡೆದರು.
ಭಕ್ತರು ವಿವಿಧ ಗ್ರಾಮಗಳಿಂದ ವಾಹನ ಮತ್ತು ಚಕ್ಕಡಿ ಗಾಡಿಗಳ ಮೂಲಕ ಆಗಮಿಸಿ ಮನೆಯಲ್ಲಿ ಮಾಡಿದ ನೈವೇದ್ಯವನ್ನು ದೇವಿಗೆ ಸಮರ್ಪಿಸಿ ನಂತರ ಕುಟುಂಬ ಸಮೇತ ಎಲ್ಲ ಸದಸ್ಯರು ಒಟ್ಟಾಗಿ ಕುಳಿತು ಭೋಜನ ಸವಿಯುವುದು ವಿಶೇಷವಾಗಿತ್ತು. ಜಾತ್ರೆಯಲ್ಲಿ ಮಕ್ಕಳಿಗೆ ವಿವಿಧ ಬಗೆಯ ಆಟಕಿ ಸಾಮಾನುಗಳ ಅಂಗಡಿಗಳಿದ್ದು ಚಿಣ್ಣರು ತಮ್ಮ ಆಟಕಿ ಸಾಮಾನು ಖರೀದಿಯಲ್ಲಿ ನಿರತರಾಗಿದ್ದರು.
ಗುಡ್ಡದಲ್ಲಿ ನೆಲೆಸಿರುವ ತಾಯಿ ಶ್ರೀ ಯಲ್ಲಮ್ಮದೇವಿಯು ನಿಸರ್ಗದ ಮಡಿಲಲ್ಲಿ ದೇವಿಯ ದರ್ಶನಕ್ಕೆ ಜನರು ಪಾದಯಾತ್ರೆಯ ಮೂಲಕ ಊಧೋ ಊಧೋ ಎಂದು ದೇವಿಯ ಸ್ಮರಣೆ ಮಾಡುತ್ತಾ ದೇವಿಯ ಕೃಪೆಗೆ ಪಾತ್ರರಾದರು. ದೇವಿಯ ಉಡಿಯನ್ನು ತುಂಬುವ ಮೂಲಕ ದೇವಿಯ ದರ್ಶನ ಪಡೆದರು. ನಂತರ ಪರುಶರಾಮ ಮತ್ತು ಮಾತಂಗಿ ದೇವಿಯ ದರ್ಶನ ಪಡೆದು ಭಕ್ತರು ಪುಣಿತರಾದರು.
ನಂತರ ಓಡುವ,ಸೈಕಲ್ ಹಾಗೂ ವಿವಿಧ ಗಾಡಿ ಶರ್ತುಗಳನ್ನು ಏರ್ಪಡಿಸಲಾಗಿತ್ತು, ಜಾರಕಿಹೊಳಿ ಸಹೋದರರಿಂದ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ಏಳು ಕೊಳ್ಳದ ಯಲ್ಲಮ್ಮದೇವಿ ಸೇವಾ ಸಮಿತಿಯವರು ನೀರಿನ ವ್ಯವಸ್ಥೆ ಸೇರಿದಂತೆ ಭಕ್ತರಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಏರ್ಪಡಿಸಿದ್ದರು.