RNI NO. KARKAN/2006/27779|Saturday, July 12, 2025
You are here: Home » breaking news » ಗೋಕಾಕ:ಇದ್ದು ಇಲ್ಲದಂತಾಗಿರುವ ಗೋಕಾಕ ನಗರಸಭೆ ಸ್ವಚ್ಛತೆಗಾಗಿ ಕಾದುಕುಳಿತಿರುವ ವಾರ್ಡ ನಂ.14ರ :ಬಸವನಗರ ಮೊದಲನೇಯ ಕ್ರಾಸ್

ಗೋಕಾಕ:ಇದ್ದು ಇಲ್ಲದಂತಾಗಿರುವ ಗೋಕಾಕ ನಗರಸಭೆ ಸ್ವಚ್ಛತೆಗಾಗಿ ಕಾದುಕುಳಿತಿರುವ ವಾರ್ಡ ನಂ.14ರ :ಬಸವನಗರ ಮೊದಲನೇಯ ಕ್ರಾಸ್ 

ಇದ್ದು ಇಲ್ಲದಂತಾಗಿರುವ ಗೋಕಾಕ ನಗರಸಭೆ

ಸ್ವಚ್ಛತೆಗಾಗಿ  ಕಾದುಕುಳಿತಿರುವ ವಾರ್ಡ ನಂ.14ರ :ಬಸವನಗರ ಮೊದಲನೇಯ ಕ್ರಾಸ್

 

ವಿಶೇಷ ಲೇಖನ : ಸಾಧಿಕ ಹಲ್ಯಾಳ, (ಸಂಪಾದಕರು)

 

ಗೋಕಾಕ ಮೇ-27 : ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಗೋಕಾಕ ನಗರಸಭೆ ವತಿಯಿಂದ ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಮಾಹಿತಿ, ಶಿಕ್ಷಣ ಮತ್ತು ಸಂದೇಶ ಎಂಬ ಕಾರ್ಯಕ್ರಮ ಹಮ್ಮಿಕೊಂಡು ನಗರಾದ್ಯಂತ ಬೀದಿ ನಾಟಕಗಳು, ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಜಾನಪದ ಗೀತೆಗಳ ಮುಖಾಂತರ ಪ್ರತಿ ವಾರ್ಡಗಳಲ್ಲಿ ಹೋಗಿ ಜಾಗೃತಿ ಮೂಡಿಸಲಾಗುತ್ತಿದೆ. ನಗರಸಭೆಯ ಈ ಹೆಜ್ಜೆ ಸ್ವಾಗತಾರ್ಹವಾಗಿದೆ.

ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಭರದಲ್ಲಿ ನಗರಸಭೆಯ ಪರಿಸರ ಅಭಿಯಂತರರ ಗಜಾಕೋಶ, ಆರೋಗ್ಯ ನೀರಿಕ್ಷಕರಾದ ರವಿ ರಂಗಸೂಭೆ, ಜೆ.ಸಿ.ತಾಂಬೂಳೆ , ಕೋಳಿ ಹಾಗೂ ಈ ಮಿಷನ್ ಸಂಬಂಧಪಟ್ಟ ಇನ್ನಿತರ ಅಧಿಕಾರಿಗಳು ಸ್ವಚ್ಛ ಭಾರತ ಮಿಷನ್ ಮರೆತಂತೆ ಭಾಸವಾಗುತ್ತಿದೆ. ಇದಕ್ಕೆ ಜೀವಂತ ಸಾಕ್ಷಿ.
ನಗರದ ವಾರ್ಡ ನಂ.14 ರ ಬಸವನಗರದ ಮೊದಲನೆ ಕ್ರಾಸ್ ಈ ಕ್ರಾಸಿನಲ್ಲಿ ಹರಿಕೋಡೆ ಕಾಲೇಜು ಮತ್ತು ಮಂದಿರ ಇರುವುದರಿಂದ ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ಜನ ಓಡಾಡುತ್ತಿರುತ್ತಾರೆ. ಹೀಗೆ ಮಂದಿರ ಮತ್ತು ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇಲ್ಲಿ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ದುರಸ್ಥಿ ಕಾಣದೆ ಹಾಳಗಿರುವ ಗಟಾರು

ರಸ್ತೆಯ ಒಂದೇ ಬದಿಗಿರುವ ಗಟಾರು ದಿನಾಲು ತುಂಬಿ ತುಳುಕಿ ಇದು ಗಟಾರೋ ಅಥವಾ ಕೊಳಚಿಯೋ ಎಂಬುವುದನ್ನು ನಿರ್ಧರಿಸುವುದು ಕಷ್ಟವಾಗಿ ಬಿಟ್ಟಿದೆ. ಇದರಿಂದ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಡೆಂಗ್ಯೂ, ಮಲೇರಿಯಾದಂತಹ ಮಾರಣಾಂತಿಕ ರೋಗಗಳು ಹರಡುವ ಆತಂಕವನ್ನು ಎದುರಿಸುತ್ತಿದ್ದಾರೆ. ಇದರ ಬಗ್ಗೆ ಹಲವಾರು ಬಾರಿ ನಗರಸಭೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಗುಳ್ಳ ದವಾಖಾನೆ ಪಕ್ಕದಿಂದ ಹಿಡಿದು ಜ್ಯೋತಿ ಪೆಗ್‍ಬಾರ ರಸ್ತೆಗೆ ಕೂಡುವ ಸುಮಾರು 500 ಮೀಟರ ಉದ್ದದ ಈ ರಸ್ತೆಯು ಕೂಡಾ ಕಳೆದ 4-5 ವರ್ಷಗಳಿಂದ ಹದಗೆಟ್ಟಿದೆ. ಇದನ್ನು ಸಹ ಸರಿಮಾಡುವ ಗೋಜಿಗೆ ನಗರಸಭೆ ಅಧಿಕಾರಿಗಳು ಸಹ ಹೋಗಿಲ್ಲ. ರಸ್ತೆಯಲ್ಲಿರುವ ಹಲವು ಕಂಬಗಳಿಗೆ ಲೈಟ ಭಾಗ್ಯವಿಲ್ಲದಿರುವುದರಿಂದ ರಾತ್ರಿ ವೇಳೆ ಸಾರ್ವಜನಿಕರು ಇಲ್ಲಿ ಹಲವು ತೊಂದರೆಗಳನ್ನು ಅನುಭವಿಸುವಂತಾಗಿದೆ

ಹದಗೇಟ ರಸ್ತೆಯಲ್ಲಿ ಹರಸಾಹಸ

ಕಳೆದ 3-4 ವರ್ಷಗಳಿಂದ ಇಷ್ಟೆಲ್ಲಾ ತೊಂದರೆಗಳನ್ನು ಅನುಭವಿಸುತ್ತಿರುವ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಗೋಕಾಕ ನಗರಸಭೆ ಇದ್ದು ಇಲ್ಲದಂತಾಗಿದೆ. 4-5 ವರ್ಷ್‍ಗಳ ಹಿಂದೆ ಸ್ವತಃ ಚಿನ್ನಪ್ಪಗೌಡರ ಅವರೇ ಇಲ್ಲಿಗೆ ಭೇಟಿ ನೀಡಿ ಈ ಪ್ರದೇಶದ ಸ್ವಚ್ಛತೆ ಬಗ್ಗೆ ಮುತುವರ್ಜಿ ವಹಿಸಿದ್ದರು. ಕೆಲವೊಂದು ತಿಂಗಳು ಸರಿಯಾಗಿ ನಡೆದ ಈ ಸ್ವಚ್ಛತೆ ಕಾರ್ಯ ಕಳೆದ 3-4 ವರ್ಷಗಳಿಂದ ಮತ್ತೇ ಮರೀಚಿಕೆಯಾಗಿದೆ. ಸ್ವಚ್ಛ ಭಾರತ ಮಿಷನ್ ಬಗ್ಗೆ ಅರಿವು ಮೂಡಿಸುವಲ್ಲಿ ತಲ್ಲೀಣರಾಗಿರುವ ನಗರಸಭೆಯ ಪರಿಸರ ಅಭಿಯಂತರ, ಆರೋಗ್ಯ ನೀರಿಕ್ಷಕರು ಮೊದಲು ವಾರ್ಡ ನಂ. 14ರ ಬಸವನಗರ ಮೊದಲನೆ ಕ್ರಾಸಗೆ ಬೇಟಿ ನೀಡಿ ಸ್ವತಃ ಮುತುವರ್ಜಿ ವಹಿಸಿ ಕೊಳಚೆಯಂತಾಗಿರುವ ಗಟಾರನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದಾಗ ಮಾತ್ರ ಸ್ವಚ್ಛ ಭಾರತ ಮಿಷನ್ ಅರಿವು ಕಾರ್ಯಕ್ಕೆ ಒಂದು ಅರ್ಥ ಬರಬಹುದು ಎಂಬುದು ಈ ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರ ಆಗ್ರಹವಾಗಿದೆ. ಇದಕ್ಕೆ ನಗರಸಭೆ ಪೌರಾಯುಕ್ತರು ಮತ್ತು ಅಧಿಕಾರಿಗಳು ಯಾವ ರೀತಿ ಸ್ಪಂದಿಸುತ್ತಾರೆ ಕಾದು ನೋಡಬೇಕಷ್ಟೆ.

“ ಈ ನಿರ್ಧಿಷ್ಟ ಪ್ರದೇಶವನ್ನು ಸ್ವಚ್ಛಗೊಳಿಸುವಂತೆ
ಹಲವಾರು ಬಾರಿ ನಗರಸಭೆಗೆ ದೂರು ನೀಡಿದರು
ಯಾವುದೇ ಪ್ರಯೋಜನವಾಗಿಲ್ಲ ಸ್ವಚ್ಛ ಭಾರತ ಮಿಷನ
ಅಡಿ ಜಾಗೃತಿ ಮೂಡಿಸುತ್ತಿರುವ ಅಧಿಕಾರಿಗಳು
ಇಲ್ಲಿಗೆ ಭೇಟಿ ನೀಡಿ ಈ ಪ್ರದೇಶವನ್ನು
ಸ್ವಚ್ಛತೆಗೊಳಿಸಲು ಮುಂದಾಗಬೇಕು. ಇಲ್ಲದಿದ್ದರೆ
ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು”.

ಸ್ಥಳೀಯರು

Related posts: