RNI NO. KARKAN/2006/27779|Wednesday, October 15, 2025
You are here: Home » breaking news » ಮೂಡಲಗಿ:ರಂಗಾಪೂರ-ಮುನ್ಯಾಳದ ಸದಾಶಿವ ಮಠದ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ.ಗಳನ್ನು ನೀಡಲಾಗುವುದು : ಶಾಸಕ ಬಾಲಚಂದ್ರ

ಮೂಡಲಗಿ:ರಂಗಾಪೂರ-ಮುನ್ಯಾಳದ ಸದಾಶಿವ ಮಠದ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ.ಗಳನ್ನು ನೀಡಲಾಗುವುದು : ಶಾಸಕ ಬಾಲಚಂದ್ರ 

ರಂಗಾಪೂರ-ಮುನ್ಯಾಳದ ಸದಾಶಿವ ಮಠದ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ.ಗಳನ್ನು ನೀಡಲಾಗುವುದು : ಶಾಸಕ ಬಾಲಚಂದ್ರ
ಮೂಡಲಗಿ ಜ 29 : ರಂಗಾಪೂರ-ಮುನ್ಯಾಳದ ಸದಾಶಿವ ಮಠದ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ರಂಗಾಪೂರ ಗ್ರಾಮದ ಬೀರೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾನುವಾರ ಸಂಜೆ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಇದರ ಜೊತೆಗೆ ರಂಗಾಪೂರದ ಲಕ್ಷ್ಮೀ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೂ ಸಹ ಅಗತ್ಯ ನೆರವು ಕಲ್ಪಿಸಿಕೊಡುವ ಭರವಸೆ ನೀಡಿದರು.
ತಂದೆ-ತಾಯಿಗೆ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳಬೇಕು. ಇವರನ್ನೇ ದೇವರು ಎಂದು ಪೂಜಿಸಬೇಕು. ಕಣ್ಣಿಗೆ ಕಾಣುವ ಮೊದಲ ದೇವರೇ ತಂದೆ-ತಾಯಿ. ಇವರ ಸೇವೆ ಗೈದರೆ ನಮ್ಮ ಜೀವನ ಪಾವನವಾಗುವದು. ದೇವರು ಜಗತ್ತಿನಾದ್ಯಂತ ಎಲ್ಲ ಕಡೆಗಳಲ್ಲೂ ಆವರಿಸಿದ್ದಾನೆ. ದೇವರಿಂದಲೇ ಇಂದು ಎಲ್ಲವೂ ನಡೆದಿದೆ. ಕೆಲವರು ದೇವರು ಇಲ್ಲವೆಂದು ಹೇಳುತ್ತಿರುವದನ್ನು ನಾವು ನಂಬುವದಿಲ್ಲವೆಂದು ಹೇಳಿದರು.
ರಂಗಾಪೂರ ಗ್ರಾಮದ ಅಭಿವೃದ್ಧಿಗೆ 75 ಲಕ್ಷ ರೂ ವೆಚ್ಚದ ಗ್ರಾಮ ವಿಕಾಸ ಯೋಜನೆಯನ್ನು ಗ್ರಾಮಕ್ಕೆ ಅರ್ಪಿಸಲಾಗಿದೆ. ಇದರಲ್ಲಿ ಗರಡಿ ಮನೆ, ಸಮುದಾಯ ಭವನ, ಒಳಚರಂಡಿ, ಸಿ.ಸಿ ರಸ್ತೆ ಹಾಗೂ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಸೇರಿವೆ. ಕಳೆದ 2004 ರಿಂದ ಕ್ಷೇತ್ರದ ಸರ್ವತೋಮುಖ ಪ್ರಗತಿಗೆ ಸರಕಾರದ ವಿವಿಧ ಯೋಜನೆಗಳ ಅಡಿ ಸಾವಿರಾರು ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಲಾಗಿದೆ ಎಂದು ವಿವರಿಸಿದರು. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲಾಗುವದು. ನೀರಿನ ಬವಣೆಯನ್ನು ನೀಗಿಸಲಾಗುವದು. ರಸ್ತೆ ಹಾಗೂ ಶಾಲಾ ಕೊಠಡಿಗಳ ದುರಸ್ಥಿ ಕಾರ್ಯಗಳು ಈಗಾಗಲೇ ನಡೆಯುತ್ತಿವೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಮುನ್ಯಾಳ-ರಂಗಾಪೂರ ಮಠದ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಹತ್ತು ದೇವರನ್ನು ಪೂಜಿಸುವದಕ್ಕಿಂತ ಹೆತ್ತ ತಾಯಿಯನ್ನು ಪೂಜಿಸಬೇಕು. ಹೆತ್ತವರ ಸ್ಮರಣೆಗಾಗಿ ತಮ್ಮ ಜೀವನವನ್ನೇ ಸಮಾಜಕ್ಕೆ ವಿಧಾಯಕ ಕಾರ್ಯಗಳಿಗಾಗಿ ಮೀಸಲಿಟ್ಟಿರುವ ಬಾಲಚಂದ್ರ ಜಾರಕಿಹೊಳಿ ಅವರ ಸೇವೆ ಇತರರಿಗೆ ಮಾದರಿಯಾಗಿದೆ. ಇವರಷ್ಟು ತಂದೆ-ತಾಯಿಯವರ ಸೇವೆ ಮಾಡಿರುವವರು ಸಿಗುವದು ತುಂಬಾ ವಿರಳವೆಂದು ಶ್ಲಾಘಿಸಿದರು.
ತಪಸಿಯ ಸುರೇಶ ಮಹಾರಾಜರು, ಹಳ್ಳೂರ ಜಿ.ಪಂ ಸದಸ್ಯೆ ವಾಸಂತಿ ತೇರದಾಳ, ಬಿ.ಡಿ.ಸಿ.ಸಿ ಬ್ಯಾಂಕ ಉಪಾಧ್ಯಕ್ಷ ಎಸ್.ಜಿ.ಢವಳೇಶ್ವರ, ಪ್ರಭಾ ಶುಗರ್ ಅಧ್ಯಕ್ಷ ಅಶೋಕ ಪಾಟೀಲ, ನಿರ್ದೇಶಕ ಮಲ್ಲಿಕಾರ್ಜುನ ಕಬ್ಬೂರ, ಮೂಡಲಗಿಯ ವೀರಣ್ಣಾ ಹೊಸೂರ, ತಾ.ಪಂ ಸದಸ್ಯ ಹನಮಂತ ತೇರದಾಳ, ಚನ್ನಪ್ಪ ಬೈಲವಾಡ, ಮುನ್ಯಾಳ ಗ್ರಾ.ಪಂ ಅಧ್ಯಕ್ಷ ಹನಮಂತ ತಳವಾರ, ಶಿವಬಸು ಡೊಂಬರ, ಶಿವಬಸು ಜುಂಜರವಾಡ, ಸಂತೋಷ ಸೋನವಾಲ್ಕರ, ಈರಪ್ಪ ಬನ್ನೂರ, ಡಾ:ಎಸ್.ಎಸ್.ಪಾಟೀಲ, ಬಸವರಾಜ ಚಿಪ್ಪಲಕಟ್ಟಿ, ಮುತ್ತೆಪ್ಪ ಬೀರನಗಡ್ಡಿ, ವೆಂಕಪ್ಪ ಪಾಟೀಲ, ಶಿವಪ್ಪ ಕಬ್ಬೂರ, ಹನಮಂತ ಬೀರನಗಡ್ಡಿ, ಸಿದ್ರಾಮೇಶ್ವರ ಹಿರೇಮಠ, ಪ್ರಕಾಶ ಅಕ್ಕಡಿ, ಮರೆಪ್ಪ ಮರೆಪ್ಪಗೋಳ, ಶಿವು ಚಂಡಕಿ, ಮುಂತಾದವರು ಇದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಗ್ರಾಮ ವಿಕಾಸ ಯೋಜನೆ ಅಡಿ ನಿರ್ಮಿಸಿರುವ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದರು. ಗೋಕಾಕದ ಜ್ಯೋತಿರಾಜ್ ನಾದನೃತ್ಯ ಕಲಾ ಅಕ್ಯಾಡೆಮಿಯ ಜ್ಯೋತಿ ಕುರೇರ ತಂಡದಿಂದ ವಿವಿಧ ಕಾರ್ಯಕ್ರಮ ಜರುಗಿದವು.

Related posts: