ಘಟಪ್ರಭಾ:ಗ್ರಾಮದ ಅಭಿವೃದ್ದಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಯುವಕರ ಪಡೆ ರಚನೆಯಾಗಿರುವುದು ಪ್ರಶಂಸನೀಯ : ಶಾಸಕ ಬಾಲಚಂದ್ರ
ಗ್ರಾಮದ ಅಭಿವೃದ್ದಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಯುವಕರ ಪಡೆ ರಚನೆಯಾಗಿರುವುದು ಪ್ರಶಂಸನೀಯ : ಶಾಸಕ ಬಾಲಚಂದ್ರ
ಘಟಪ್ರಭಾ ಡಿ 6: ಗ್ರಾಮದ ಅಭಿವೃದ್ದಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಯುವಕರ ಪಡೆ ರಚನೆಯಾಗಿರುವುದು ಪ್ರಶಂಸನೀಯ. ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಗ್ರಾಮದ ಜ್ವಲಂತ ಸಮಸ್ಯೆಗಳ ಬಗ್ಗೆ ನೀಗಾ ವಹಿಸಿ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಮನೋಭಾವನೆ ಹೊಂದಿರಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಗೆ ಸಮೀಪದ ತುಕ್ಕಾನಟ್ಟಿ ಗ್ರಾಮದ ಕರಿಸಿದ್ದೇಶ್ವರ ಬನದಲ್ಲಿ ಮಂಗಳವಾರದಂದು ಸಂಜೆ ಬಾಲಚಂದ್ರಣ್ಣಾ ಜಾರಕಿಹೊಳಿ ಯುವ ಅಭಿಮಾನಿ ಬಳಗವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯುವಕರ ಮೇಲೆ ಸಾಕಷ್ಟು ಜವಾಬ್ದಾರಿಗಳಿವೆ, ಅಂತಹ ಜವಾಬ್ದಾರಿಗಳನ್ನು ನಿಭಾಯಿಸುವ ಇಚ್ಛಾಶಕ್ತಿ ಹೊಂದಿರಬೇಕು. ಸ್ವಾರ್ಥರಹಿತ ಸಮಾಜ ಸೇವೆಗೆ ಬದ್ಧರಿರಬೇಕು. ಗ್ರಾಮದಲ್ಲಿ ರಚನೆಗೊಂಡಿರುವ ಉತ್ಸಾಹಿ ಯುವಕರ ಪಡೆ ಇತರರಿಗೆ ಮಾದರಿಯಾಗಬೇಕು. ಈ ದೆಸೆಯಲ್ಲಿ ಇಂತಹ ಸಂಘಟನೆಗಳು ಪ್ರತಿ ಹಳ್ಳಿಗಳಲ್ಲಿ ರಚನೆಗೊಂಡರೆ ಹಳ್ಳಿಗಳು ಸಹ ಅಭಿವೃದ್ದಿ ಹೊಂದುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ತುಕ್ಕಾನಟ್ಟಿ ಅಭಿಮಾನಿ ಬಳಗ ಉತ್ತರೋತ್ತರವಾಗಿ ಬೆಳೆಯಲಿ ಎಂದು ಆಶಿಸಿದರು.
ತುಕ್ಕಾನಟ್ಟಿ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಜೊತೆಗೆ ಆಸ್ಪತ್ರೆಯ ರಕ್ಷಣಾ ಗೋಡೆಯನ್ನು ನಿರ್ಮಿಸಿಕೊಡುತ್ತೇನೆ ಅಲ್ಲದೇ ಆಸ್ಪತ್ರೆಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಪ್ರಯತ್ನ ಮಾಡುತ್ತೇನೆ. ಇದಕ್ಕಾಗಿ ಆಸ್ಪತ್ರೆ ಕುಂದುಕೊರತೆಗಳ ನಿವಾರಣೆ ಪರಿಹರಿಸಲು ವಾರದೊಳಗೆ ವೈದ್ಯಾಧಿಕಾರಿಗಳ ಸಭೆಯನ್ನು ಕರೆಯುತ್ತೇನೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯವನ್ನು ಆರಂಭಿಸುವಲ್ಲಿಯೂ ಸಹ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಈ ಸಂದರ್ಭದಲ್ಲಿ ಸೋಮು ಹುಲಕುಂದ, ರವಿ ಗುಡಗುಡಿ, ರಾಮು ಗದಾಡಿ, ಶ್ರೀಕಾಂತ ನಾವಿ, ಬಾಳಪ್ಪ ಗದಾಡಿ, ಸುರೇಶ ಹುಲಕುಂದ, ಭೀಮಪ್ಪ ಗುಡಗುಡಿ, ಸಂಪತ್ತ ಗದಾಡಿ, ಪ್ರಕಾಶ ಗದಾಡಿ, ಸದಾಶಿವ ಹುಲಕುಂದ ಸೇರಿದಂತೆ ಅನೇಕರು ಇದ್ದರು.