ಗೋಕಾಕ:ಈ ಬಾರಿಯ ಕಾಯಕಶ್ರೀ ಪ್ರಶಸ್ತಿ ಸೋನಂ ವಾಂಗ್ಚುಕ್ ಅವರಿಗೆ: ಮುರುಘರಾಜೇಂದ್ರ ಶ್ರೀ

ಈ ಬಾರಿಯ ಕಾಯಕಶ್ರೀ ಪ್ರಶಸ್ತಿ ಸೋನಂ ವಾಂಗ್ಚುಕ್ ಅವರಿಗೆ: ಮುರುಘರಾಜೇಂದ್ರ ಶ್ರೀ
ಫೆಬ್ರವರಿ 1, 2 ಮತ್ತು 3ರಂದು 22ನೇ ಶರಣ ಸಂಸ್ಕೃತಿ ಉತ್ಸವ
ಗೋಕಾಕ, ನ. 28: ನಗರದ ಶೂನ್ಯ ಸಂಪಾದನ ಮಠದ ವತಿಯಿಂದ ಬರುವ ಫೆಬ್ರವರಿ 1, 2 ಮತ್ತು 3ರಂದು 22ನೇ ಶರಣ ಸಂಸ್ಕೃತಿ ಉತ್ಸವವನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದ್ದು, ಈ ಬಾರಿಯ ಪ್ರತಿಷ್ಠಿತ ಕಾಯಕಶ್ರೀ ಪ್ರಶಸ್ತಿಯನ್ನು ಲಡಾಖ್‌ನ ಖ್ಯಾತ ಹೋರಾಟಗಾರ, ಶಿಕ್ಷಣ ತಜ್ಞ ಹಾಗೂ ಪರಿಸರವಾದಿ ಸೋನಂ ವಾಂಗ್ಚುಕ್ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ತಿಳಿಸಿದರು.

ಶನಿವಾರ ನಗರದ ಶೂನ್ಯ ಸಂಪಾದನ ಮಠದ ಆವರಣದಲ್ಲಿ ನಡೆದ 22ನೇ ಶರಣ ಸಂಸ್ಕೃತಿ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫೆಬ್ರವರಿ 1ರಂದು ಸಂಜೆ 6 ಗಂಟೆಗೆ ಮಹಿಳಾ ಸಮಾವೇಶ, ಫೆಬ್ರವರಿ 2ರಂದು ಕಾಯಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಯುವ ಸಮಾವೇಶ ಜರುಗಲಿವೆ. ಫೆಬ್ರವರಿ 3ರಂದು ಬೆಳಿಗ್ಗೆ 6 ಗಂಟೆಗೆ ಕರ್ತೃ ಗದ್ದುಗೆಗೆ ಅಭಿಷೇಕ, ವಚನ ತಾಡೋಲೆ ಪ್ರತಿಗಳು ಹಾಗೂ ವಿಶ್ವಗುರು ಬಸವಣ್ಣನವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ.
ಉತ್ಸವದ ಅಂಗವಾಗಿ ಪ್ರತಿದಿನ ನಡೆಯುವ ಕಾರ್ಯಕ್ರಮಗಳಲ್ಲಿ ನಾಡಿನ ಹೆಸರಾಂತ ವಿದ್ವಾಂಸರು, ವಿವಿಧ ಮಠಗಳ ಮಠಾಧೀಶರು ಭಾಗವಹಿಸಿ ತಮ್ಮ ಅಮೂಲ್ಯ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ ಕಾರ್ಯಕ್ರಮಗಳು ಜರುಗಲಿದ್ದು, ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀಗಳು ಮನವಿ ಮಾಡಿದರು.
ಈ ಬಾರಿಯ ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಮಹಾಂತೇಶ ಕಲ್ಲೋಳಿ ಹಾಗೂ ಕೋಶಾಧ್ಯಕ್ಷರಾಗಿ ಸಂದೀಪ್ ಈಟಿ ಅವರನ್ನು ಆಯ್ಕೆ ಮಾಡಲಾಯಿತು.
ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮುಖಂಡರಾದ ಡಾ. ಮಹಾಂತೇಶ ಕಡಾಡಿ, ಶಶಿಧರ ದೇಮಶೆಟ್ಟಿ, ಮಲ್ಲಿಕಾರ್ಜುನ ಕಲ್ಲೋಳಿ, ರಾಜು ಬೈರುಗೋಳ, ಎಂ.ಡಿ. ಚುನಮರಿ, ಮಲ್ಲಿಕಾರ್ಜುನ ಈಟಿ, ಜಿ.ಎಸ್. ಸಿದ್ದಾಪೂರಮಠ, ಶಂಕರ ಗೋರೋಶಿ, ಪೂರ್ಣಿಮಾ ತಾವಂಶಿ, ಸುಭಾಷಚಂದ್ರ ಬಿ. ಪಾಟೀಲ, ಸದಾಶಿವ ಗುದಗಗೋಳ, ಜಯಾನಂದ ಮಾದರ ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶೂನ್ಯ ಸಂಪಾದನ ಮಠದ ಶ್ರೀ ಬಸವಪ್ರಭು ದೇವರು, ಬಸನಗೌಡ ಪಾಟೀಲ, ಸೇವಂತಾ ಮುಚ್ಚಂಡಿಹಿರೇಮಠ ಸೇರಿದಂತೆ ಮಠದ ನೂರಾರು ಸದ್ಭಕ್ತರು ಉಪಸ್ಥಿತರಿದ್ದರು.
