RNI NO. KARKAN/2006/27779|Sunday, November 22, 2026
You are here: Home » breaking news » ಗೋಕಾಕ:ಸರ್ಕಾರಿ ಶಾಲೆಗಳ ಉನ್ನತಿಗೆ ಶಿಕ್ಷಕರೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು : ಡಿಡಿಪಿಐ ಅಜೀತ

ಗೋಕಾಕ:ಸರ್ಕಾರಿ ಶಾಲೆಗಳ ಉನ್ನತಿಗೆ ಶಿಕ್ಷಕರೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು : ಡಿಡಿಪಿಐ ಅಜೀತ 

ಸರ್ಕಾರಿ ಶಾಲೆಗಳ ಉನ್ನತಿಗೆ ಶಿಕ್ಷಕರೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು : ಡಿಡಿಪಿಐ ಅಜೀತ
ಗೋಕಾಕ, ನ. 22: ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಿದರೆ ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಚಿಕ್ಕೋಡಿ ಡಿಡಿಪಿಐ ಅಜೀತ ಮನ್ನಿಕೇರಿ ಹೇಳಿದರು.
ರವಿವಾರ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ನಿಕಟಪೂರ್ವ ಪದಾಧಿಕಾರಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಕರಿಗೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಡುವ ಉದ್ದೇಶದಿಂದ ಶಿಕ್ಷಕರ ಸಂಘಟನೆಗಳನ್ನು ಸ್ಥಾಪಿಸಲಾಗಿದೆ. ಸಂಘದ ಪದಾಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಶಿಕ್ಷಕರ ಭಾವನೆಗಳು ಹಾಗೂ ಹಿತಾಸಕ್ತಿಗಳಿಗೆ ಪೂರಕವಾಗಿ ಸಂಘಟನೆ ಕಾರ್ಯನಿರ್ವಹಿಸಬೇಕು. ಶಿಕ್ಷಕರು ಮತ್ತು ಪಾಲಕರ ನಡುವೆ ಉತ್ತಮ ಬಾಂಧವ್ಯ ಹಾಗೂ ಸಹಕಾರ ಮೂಡಿದಾಗ ಮಾತ್ರ ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬರೂ ತಮ್ಮ ವೃತ್ತಿಜೀವನದಲ್ಲಿ ಯಾವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಶಿಕ್ಷಕರು ವಿನೂತನ ಪ್ರಯೋಗಗಳು ಹಾಗೂ ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳಬೇಕು. ಗ್ರಾಮದ ಪ್ರತಿಯೊಂದು ಮಗುವೂ ಸರ್ಕಾರಿ ಶಾಲೆಗೆ ದಾಖಲಾಗುವಂತೆ ಶಿಕ್ಷಕರು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಗಾರ ಮಾತನಾಡಿ, ಶಿಕ್ಷಣ ಇಲಾಖೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಮನ್ವಯತೆ ಸಾಧಿಸುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಸಂಘದ ಮೇಲಿದೆ. ವೃತ್ತಿ ಬದುಕಿಗೆ ಗೌರವ ತರುವ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ವೈಯಕ್ತಿಕ ಬದುಕಿಗೂ ಘನತೆ ದೊರೆಯುತ್ತದೆ. ದೇಶ ನಿರ್ಮಾಣದ ಮಹತ್ತರ ಜವಾಬ್ದಾರಿಯನ್ನು ಭಗವಂತ ಶಿಕ್ಷಕರಿಗೆ ನೀಡಿದ್ದಾನೆ. ಈ ಜವಾಬ್ದಾರಿಯ ಮಹತ್ವ ಅರಿತು ಪ್ರತಿಯೊಬ್ಬ ಶಿಕ್ಷಕರೂ ಕರ್ತವ್ಯ ನಿರ್ವಹಿಸಬೇಕು ಎಂದರು.
ಶಿಕ್ಷಣ ಇಲಾಖೆ ನಮಗೆ ಎಲ್ಲವನ್ನೂ ನೀಡಿದೆ. ಆದರೆ, ಇಲಾಖೆಗೆ ನಾವು ಏನು ಕೊಡುಗೆ ನೀಡುತ್ತಿದ್ದೇವೆ ಎಂಬುದನ್ನು ಪ್ರತಿಯೊಬ್ಬ ಶಿಕ್ಷಕರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ವೃತ್ತಿಯ ಗೌರವ ಮತ್ತು ಜವಾಬ್ದಾರಿಯನ್ನು ಅರಿತು ಸೇವೆ ಸಲ್ಲಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ ಮಲ್ಲಬನ್ನವರ, ಜಿ.ಆರ್. ಸನದಿ, ಸಂಘದ ಜಿಲ್ಲಾಧ್ಯಕ್ಷ ಸಂಜು ನಾಯಕ, ಪಿ.ಎಸ್. ನಂದೆಪ್ಪನ್ನವರ,ಸಂಘದ ನೂತನ ಅಧ್ಯಕ್ಷ ಪ್ರವೀಣ್ ಪಚ್ಚನ್ನವರ, ಕಾರ್ಯದರ್ಶಿ ಸಿದ್ದಪ್ಪ ಜಡೇರ,ಖಜಾಂಚಿ ಲಕ್ಕಪ್ಟ ಹಳಬನವರ, ಜಿಲ್ಲಾ ಖಜಾಂಚಿ ಮಾರುತಿ ಹೊನಕುಪ್ಪಿ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಶರಣಪ್ಪ ನೀರಲಗಿ, ಗೌರವಾಧ್ಯಕ್ಷ ಹನಮಂತ ಮೆಳವಂಕಿ, ಶೈಲಾ ಖೋತ, ನಾಗವೇಣಿ ಭೂಸಣ್ಣವರ, ವಿನಯ ಕಾಂಬಳೆ, ಮಂಜುಳಾ ಮನ್ನಾಪೂರ, ಶೈಲಾ ಬಡಿಗೇರ, ಶ್ರೀದೇವಿ ಪತಕಿ, ಬಾಬು ಕುಂಬಾರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Related posts: