ಗೋಕಾಕ:ದೇಶದಲ್ಲಿ ಅತ್ಯಂತ ದೊಡ್ಡ ಆಸ್ಪತ್ರೆಯಾಗಿ ಕೆಎಲ್ಇ ಆಸ್ಪತ್ರೆ ಬೆಳೆದು ನಿಂತಿದೆ : ಜಯಾನಂದ ಮುನ್ನವಳ್ಳಿ

ದೇಶದಲ್ಲಿ ಅತ್ಯಂತ ದೊಡ್ಡ ಆಸ್ಪತ್ರೆಯಾಗಿ ಕೆಎಲ್ಇ ಆಸ್ಪತ್ರೆ ಬೆಳೆದು ನಿಂತಿದೆ : ಜಯಾನಂದ ಮುನ್ನವಳ್ಳಿ
ಗೋಕಾಕ ಜೂ 13 : ದೇಶದಲ್ಲಿ ಅತ್ಯಂತ ದೊಡ್ಡ ಆಸ್ಪತ್ರೆಯಾಗಿ ಕೆಎಲ್ಇ ಆಸ್ಪತ್ರೆ ಬೆಳೆದು ನಿಂತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಆರೋಗ್ಯವಂತರಾಗಿ ಎಂದು ಕೆಎಲ್ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನ್ನವಳ್ಳಿ ಹೇಳಿದರು.
ಶನಿವಾರದಂದು ಘೋಡಗೇರಿ ಗ್ರಾಮದ ಶ್ರೀ ಶಿವಾನಂದ ಮಠದಲ್ಲಿ ಕೆಎಲ್ಇ ಸಂಸ್ಥೆಯ ಆಸ್ಪತ್ರೆ ಐ.ಸಿ.ಯು ಗೋಕಾಕ ಹಾಗೂ ಪರಮಪೂಜ್ಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಘೋಡಗೇರಿ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಆರೋಗ್ಯ ಸೇವೆ ಇಂದು ದೇಶದಲ್ಲಿ ದೊಡ್ಡ ವ್ಯಾಪಾರವಾಗಿದ್ದು, ಇದು ದುಃಖದ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಕೆಎಲ್ಇ ಆಸ್ಪತ್ರೆ ಬಡವರ ಪರವಾಗಿ ನಿಂತು ಕಾರ್ಯನಿರ್ವಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಸಿಕೊಳ್ಳಬೇಕು. ಕೆಎಲ್ಇ ಸಂಸ್ಥೆ ಹಣ ಮಾಡಲು ಹುಟ್ಟಿಲ್ಲ, ಜನರ ಸೇವೆ ಮಾಡಲು ಹುಟ್ಟಿದೆ. ಆಧುನಿಕ ಯುಗದಲ್ಲಿ ಪರಿಸರ ಹಾಳಾಗುತ್ತಿದ್ದು, ಇದರ ಬಗ್ಗೆ ಸಾರ್ವಜನಿಕರು ಕಾಳಜಿ ವಹಿಸಿ ಗಿಡ ಮರಗಳನ್ನು ಬೆಳೆಸಿ ಪರಿಸರವನ್ನು ಸಂರಕ್ಷಿಸಬೇಕು ಅಂದಾಗ ಆರೋಗ್ಯವಂತ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಇಂದು ಆರೋಗ್ಯ ಸೇವೆಗಳು ದುಭಾರಿ ಆಗಿದ್ದು, ಇಂತಹ ಉಚಿತ ಆರೋಗ್ಯ ಶಿಬಿರಗಳ ಸದುಪಯೋಗ ಪಡೆದುಕೊಂಡು ಆರೋಗ್ಯವಂತರಾಗಬೇಕು ಕೆಎಲ್ಇ ಗೋಕಾಕ ಆಸ್ಪತ್ರೆಯಲ್ಲಿ ಅನುಭವಿ ವೈದ್ಯರ ತಂಡ ಕಾರ್ಯನಿರ್ವಹಿಸುತ್ತಿದ್ದಾರೆ ಇವರ ಸೇವೆಯನ್ನು ಈ ಭಾಗದ ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಧರೆಪ್ಪ ಚೌಗಲಾ, ಡಾ.ಶುಭಂ ಹುಕ್ಕೇರಿ, ಡಾ.ಅರುಣ ವಣ್ಣೂರ, ಡಾ.ಜ್ಯೋತಿ ಚೌಗಲಾ, ಡಾ.ಅಂಜನಾಬಾಯಿ ಓಸೇಕರ, ರೋಟರಿ ಸಂಸ್ಥೆಯ ಸೋಮಶೇಖರ್ ಮಗದುಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
