ಗೋಕಾಕ:ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಡಿ.16 ರಂದು ಬೃಹತ್ ಪ್ರತಿಭಟನೆ : ಭೀಮಪ್ಪ ಗಡಾದ

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಡಿ.16 ರಂದು ಬೃಹತ್ ಪ್ರತಿಭಟನೆ : ಭೀಮಪ್ಪ ಗಡಾದ
ಗೋಕಾಕ ಡಿ 15 : ಬೆಳಗಾವಿಯನ್ನು ಎರಡನೇ ಅಧಿಕೃತವಾಗಿ ರಾಜಧಾನಿ ಎಂದು ಘೋಷಿಸಬೇಕು, ಬೆಳಗಾವಿಯ ಸುವರ್ಣ ಸೌಧದಲ್ಲಿ ಕಾರ್ಯದರ್ಶಿ ಮಟ್ಟದ ಎಲ್ಲಾ ಕಛೇರಿಗಳನ್ನು ಪ್ರಾರಂಭಿಸಬೇಕು, ಕಿತ್ತೂರ ಕರ್ನಾಟಕ ಭಾಗದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಹಾಗೂ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದು ಆಗ್ರಹಿಸಿ ಡಿಸೆಂಬರ್ 16 ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಉತ್ತರ ಕರ್ನಾಟಕ ಹೋರಾಟ ಸಮಿತಿ ಮತ್ತು ಉತ್ತರ ಕರ್ನಾಟಕ ವಿಕಾಸ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ರಾಜಾಧ್ಯಕ್ಷ ಭೀಮಪ್ಪ ಗಡಾದ ಹೇಳಿದರು.
ರವಿವಾರದಂದು ಸಾಯಂಕಾಲ ನಗರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸರಕಾರ ಕಾಟಾಚಾರಕ್ಕೆ ಎಂಬಂತೆ ಸುವರ್ಣ ಸೌಧದಲ್ಲಿ ಕೆಲ ಕಛೇರಿಗಳನ್ನು ಆರಂಭಿಸಿದೆ ಆದರೆ ಆದ್ಯಾವ ಕಛೇರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಏನೇ ಕೆಲಸ ವಿದ್ದರೆ ಈ ಭಾಗದ ಜನರು ದೂರದ ಬೆಂಗಳೂರಿಗೆ ಹೋಗಬೇಕಾಗಿದೆ. ಕಾರಣ ಸರಕಾರ ಕಾರ್ಯದರ್ಶಿ ಮಟ್ಟದ ಎಲ್ಲಾ ಪ್ರಮುಖ ಕಛೇರಿಗಳನ್ನು ಬೆಳಗಾವಿಯಲ್ಲಿ ಪ್ರಾರಂಭಿಸಿ ಸುವರ್ಣ ಸೌಧವನ್ನು ಶಕ್ತಿ ಸೌಧವನ್ನಾಗಿ ಮಾಡಿ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯನ್ನು ಮಾಡಬೇಕು. ಉತ್ತರ ಕರ್ನಾಟಕ ಭಾಗದ ಎಲ್ಲಾ ಹೋರಾಟಗಾರರು ಈ ಹೋರಾಟದಲ್ಲಿ ಭಾಗವಹಿಸಬೇಕು. ಈ ಹೋರಾಟದಲ್ಲಿ ಹಿರಿಯ ನ್ಯಾಯವಾದಿ ಬಿ.ಡಿ.ಹಿರೇಮಠ ಅವರು ಸಹ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಮಾತನಾಡಿ
ಇದೇ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಜನರ ಬೇಡಿಕೆಗಳನ್ನು ಈಡೇರಿಸಬೇಕು ದಕ್ಷಿಣ ಕರ್ನಾಟಕದಲ್ಲಿ ಆದ ಅಭಿವೃದ್ಧಿಯ ಅರ್ಧದಷ್ಟು ಅಭಿವೃದ್ಧಿ ಉತ್ತರ ಕರ್ನಾಟಕ ಭಾಗದಲ್ಲಿ ಆಗಿಲ್ಲದಿರುವುದು ಅತ್ಯಂತ ಖೇದಕರ. ಬೆಳಗಾವಿ ಮತ್ತು ಉತ್ತರ ಕರ್ನಾಟಕ ಭಾಗದ ಜನರು ಬೆಂಗಳೂರಿಗೆ ಹೋಗದೆ ಸುವರ್ಣ ಸೌಧದಲ್ಲಿ ಕೆಲಸಗಳನ್ನು ಮಾಡಿಕೊಳ್ಳಬೇಕು ಎಂಬ ಸದುದ್ದೇಶದಿಂದ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಲಾಗಿದೆ. ವರ್ಷಕ್ಕೊಮ್ಮೆ 10 ದಿನಗಳ ಕಾಲ ಕಾಟಾಚಾರದ ಅಧಿವೇಶನ ಬಿಟ್ಟರೆ ಇಲ್ಲಿ ಯಾವುದೇ ಕಾರ್ಯಗಳು ನಡೆಯುತ್ತಿಲ . ಉತ್ತರ ಕರ್ನಾಟಕ ಭಾಗದ ಶಾಸಕರು ಸದನದಲ್ಲಿ ಇದರ ಬಗ್ಗೆ ಗಟ್ಟಿ ಧ್ವನಿ ಎತ್ತಬೇಕಾಗಿದೆ. ಕಾಗವಾಡ ಶಾಸಕ ರಾಜು ಕಾಗೆ ಅವರು ಗಟ್ಟಿಯಾಗಿ ಸದನದಲ್ಲಿ ಪ್ರತ್ಯೇಕ ರಾಜ್ಯದ ಕೂಗನ್ನು ಎತ್ತಿದ್ದಾರೆ. ಇದಕ್ಕೆ ಬಲವಾದ ಕಾರಣ ಉತ್ತರ ಕರ್ನಾಟಕ ಅಭಿವೃದ್ಧಿ ಆಗದಿರುವುದು. ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಿ ಇಲ್ಲದಿದ್ದರೆ ಪ್ರತ್ಯೇಕತೆಯ ಕೂಗು ಬಲಿಷ್ಠ ವಾಗಲಿದೆ. ಉತ್ತರ ಕರ್ನಾಟಕದ ಬೇಕು ಬೇಡಿಕೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ವಂದಿಸಬೇಕು. ಡಿಸೆಂಬರ್ 31ವರೆಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಜನೇವರಿ ತಿಂಗಳಿನಿಂದ ನಮ್ಮ ಹೋರಾಟ ಉಗ್ರ ಸ್ವರೂಪ ತಾಳಲಿದೆ ಎಂದ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಮುಗಿಯುವ ಒಳಗೆ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಗೋಕಾಕ ಹೊಸ ಜಿಲ್ಲೆಯನ್ನಾಗಿ ಮಾಡಬೇಕು.ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಈಗಾಗಲೇ ಗೋಕಾಕ ಜಿಲ್ಲೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ವಿನಂತಿ ಮಾಡಿದ್ದಾರೆ. ಅದರ ಪೂರಕವಾಗಿ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ ಗೋಕಾಕ ಜಿಲ್ಲೆಯನ್ನು ಮಾಡಬೇಕು ಎಂದು ಅಶೋಕ್ ಪೂಜಾರಿ ಸರಕಾರವನ್ನು ಆಗ್ರಹಿಸಿದರು.
ರಾಜ್ಯ ಫ್ರಧಾನ ಕಾರ್ಯದರ್ಶಿ ನಾಗೇಶ್ ಗೋಳಶೆಟ್ಟಿ ಮಾತನಾಡಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಮಾಡದೆ ಹೋದರೆ ಬರುವ ದಿನಗಳಲ್ಲಿ ನಾವು ಪ್ರತ್ಯೇಕ ರಾಜವನ್ನು ಕೇಳಬೇಕಾಗುತ್ತದೆ. ಡಿಸೆಂಬರ್ ಒಳಗೆ ಬೇಡಿಕೆ ಈಡೇರದಿದ್ದರೆ ಜನೇವರಿ ತಿಂಗಳಿನಿಂದ ನಾನು ಬೆಳಗಾವಿಯಲ್ಲಿ ಆಮರಣ ಉಪವಾಸ ಕೈಗೊಳ್ಳತ್ತೇನೆ ಎಂದು ಸರಕಾರವನ್ನು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಅಡಿವೇಶ ಇಟಗಿ, ಉದಯ ಕರಜಗಿಮಠ, ಡಾ.ಪ್ರವೀಣ್ ನಾಯಿಕ, ಸಿದ್ದಪ್ಪ ಬಳಿಗಾರ ಉಪಸ್ಥಿತರಿದ್ದರು .
