ಗೋಕಾಕ:ಸಾಮಾಜಿಕವಾಗಿ ಸದೃಢರಾಗಲು ಜನತೆ ಆರ್ಥಿಕ ಹಾಗೂ ಆರೋಗ್ಯವಾಗಿ ಬಲಿಷ್ಠವಾಗಬೇಕು : ಡಾ.ಮೋಹನ ಭಸ್ಮೆ

ಸಾಮಾಜಿಕವಾಗಿ ಸದೃಢರಾಗಲು ಜನತೆ ಆರ್ಥಿಕ ಹಾಗೂ ಆರೋಗ್ಯವಾಗಿ ಬಲಿಷ್ಠವಾಗಬೇಕು : ಡಾ.ಮೋಹನ ಭಸ್ಮೆ
ಗೋಕಾಕ ಜು 19 : ಸಾಮಾಜಿಕವಾಗಿ ಸದೃಢರಾಗಲು ಜನತೆ ಆರ್ಥಿಕ ಹಾಗೂ ಆರೋಗ್ಯವಾಗಿ ಬಲಿಷ್ಠವಾಗಬೇಕೆಂದು ತಹಶೀಲದಾರ ಡಾ.ಮೋಹನ ಭಸ್ಮೆ ಹೇಳಿದರು.
ಅವರು, ಶನಿವಾರದಂದು ತಾಲೂಕಿನ ಅಂಕಲಗಿ ಗ್ರಾಮದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಕ್ರೇಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಅಂಕಲಗಿ ಶಾಖೆಯವರು ಆಯೋಜಿಸಿದ್ಧ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗ್ರಾಮೀಣ ಕೂಟ ಆರ್ಥಿಕವಾಗಿ ಜನತೆಯನ್ನು ಬಲಿಷ್ಠಗೊಳಿಸಿ ನೆಮ್ಮದಿಯ ಜೀವನ ನಡೆಸುವದನ್ನು ಇಂತಹ ಕಾರ್ಯಾಗಾರದ ಮೂಲಕ ಕಲಿಸುತ್ತದೆ. ಎಲ್ಲರಲ್ಲೂ ಸಾಮಥ್ರ್ಯವಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಿ. ಜನತೆಯಲ್ಲಿ ಜಾಗೃತೆ ಮೂಢಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಈ ಕಾರ್ಯ ಮಾದರಿಯಾಗಿದೆ. ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯ ಮಾಡಿ, ಇಂತಹ ಕಾರ್ಯಾಗಾರದಲ್ಲಿ ಪಾಲ್ಗೊಂಡು ಹೆಚ್ಚಿನ ಜ್ಞಾನವನ್ನು ಪಡೆದು ಪ್ರಜ್ಞಾವಂತರಾಗಿರೆಂದು ಹೇಳಿದರು.
ಸಂಸ್ಥೆಯ ಬೆಳಗಾವಿ ಪ್ರಾದೇಶಿಕ ವ್ಯವಸ್ಥಾಪಕ ಮಾದೇಗೌಡ ಮಾತನಾಡಿ, ಜನತೆಯ ಜೀವನ ಸುಧಾರಣೆಯೊಂದಿಗೆ ಅವರ ಉಜ್ವಲ ಭವಿಷ್ಯಕ್ಕಾಗಿ ಇಂತಹ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮೀಣ ಕೂಟಗಳು ದೇಶಾಧ್ಯಂತ ಕಾರ್ಯನಿರ್ವಹಿಸುತ್ತ ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿವೆ. ಮನೆ ಬಾಗಿಲಿಗೆ ಸುಲಭವಾಗಿ ಸಾಲ ನೀಡುತ್ತಿವೆ. ವಿದ್ಯಾರ್ಥಿ ವೇತನ, ಶಾಲೆಗಳಿಗೆ ಸಾಮಗ್ರಿಗಳ ವಿತರಣೆ ಸೇರಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಪಾಲ್ಗೊಳ್ಳುತ್ತಿವೆ. ಸಂಸ್ಥೆಯ ಸದುಪಯೋಗದಿಂದ ಆರ್ಥಿಕವಾಗಿ ಜನತೆ ಪ್ರಗತಿ ಸಾಧಿಸುವಂತೆ ಕರೆ ನೀಡಿದರು.
ಅಂಕಲಗಿ ಕೇನರಾ ಬ್ಯಾಂಕ ಶಾಖೆಯ ವ್ಯವಸ್ಥಾಪಕ ಬಾಲಾಜಿ ಮಾತನಾಡುತ್ತ ಜವಾಬ್ದಾರಿಯುತ ಸಾಲ, ಕ್ರೇಡಿಟ್ ಶಿಸ್ತು, ಡಿಜಿಟಲ್ ವಂಚನೆ ತಡೆಗಟ್ಟುವಿಕೆ ಕುರಿತು ವಿವರಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರ್ ಜಿ ಬಸ್ಸಾಪೂರ ಅವರು ಆರೋಗ್ಯ ರಕ್ಷಣೆ ಹಾಗೂ ಆರೋಗ್ಯ ಇಲಾಖೆಯಿಂದ ಸೀಗುವ ಸೌಲಭ್ಯ ಕುರಿತು ಮಾಹಿತಿ ನೀಡಿದರು.
ವೇದಿಕೆಯ ಮೇಲೆ ಸಂಸ್ಥೆಯ ಶಿವಕುಮಾರ ವಿಕೆ, ಮಂಜುನಾಥ ಎಚ್, ಮೆಹಬೂಬಸಾಬ ಎಚ್, ಚಂದ್ರಗೌಡ ಪಿ, ಉಮೇಶ ಮಳಕೂರ, ಚನ್ನಪ್ಪ ಯಲಿವಾಳ ಇದ್ದರು.