ಗೋಕಾಕ:ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸನ್ನಿಂಗಪ್ಪ ಮುಶೆನ್ನಗೊಳಗೆ ಕರವೇಯಿಂದ ಸತ್ಕಾರ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 
 ಸನ್ನಿಂಗಪ್ಪ ಮುಶೆನ್ನಗೊಳಗೆ ಕರವೇಯಿಂದ ಸತ್ಕಾರ
ಗೋಕಾಕ ಅ 31 : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಗೋಕಾಕ ತಾಲೂಕಿನ ತೆಳಗಿನಟ್ಟಿ ಗ್ರಾಮದ ಹಿರಿಯ ಜಾನಪದ ಕಲಾವಿದ ಸನ್ನಿಂಗಪ್ಪ ಮುಶೆನ್ನಗೊಳ ಅವರಿಗೆ ಶುಕ್ರವಾರದಂದು ತೆಳಗಿನಟ್ಟಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸತ್ಕರಿಸಿ,ಗೌರವಿಸಲಾಯಿತು.
 ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಪನವರ ಕಳೆದ 4 ದಶಕಗಳಿಂದ ಎಲೆಮರೆಕಾಯಿಯಂತೆ ಗೋಕಾಕ ತಾಲೂಕಿನ ಒಂದು ಪುಟ್ಟ ಗ್ರಾಮ ತೆಳಗಿನಟ್ಟಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಜನಪದ ಕಲೆಯನ್ನು ಉಳಿಸಿ,ಬೆಳೆಸುತ್ತಿರುವ ಸನ್ನಿಂಗಪ್ಪ ಅವರ ಕಲಾಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಇಡೀ ಗೋಕಾಕ್ ತಾಲೂಕಿಗೆ ನೀಡಿದ ಗೌರವವಾಗಿದ್ದು, ಸನ್ನಿಂಗಪ್ಪ ಅವರು ಪ್ರಮುಖವಾಗಿ ಡೊಳ್ಳಿನ ಪದಗಳನ್ನು ಹಾಡಿ ದಾಖಲೆ ನಿರ್ಮಿಸಿದ್ದಾರೆ. ಜಿಲ್ಲೆಯ ಕಿತ್ತೂರ ಉತ್ಸವ, ಬೆಳವಡಿ ಉತ್ಸವ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಜರುಗುವ ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಸಿಸಿ ಹೋಗುತ್ತಿರುವ ಜನಪದ ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಕಲೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವ ಸರಕಾರದ ಕಾರ್ಯ ನಿಜವಾಗಿಯೂ ಪ್ರಶಂಸನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಮಾಧ್ಯಮ ವಕ್ತಾರ ಸಾದಿಕ ಹಲ್ಯಾಳ, ಪದಾಧಿಕಾರಿಗಳಾದ ಲಕ್ಷ್ಮಣ ಗೋರಗುದ್ದಿ, ಆನಂದ ಮಡಿವಾಳ, ಬಸನಗೌಡ ಪಾಟೀಲ, ಪಾಂಡು ಬನಾಜ, ಗುರು ಮುನ್ನೋಳಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
