RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಕೌಜಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ರಚಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಮನವಿ

ಗೋಕಾಕ:ಕೌಜಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ರಚಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಮನವಿ 

ಕೌಜಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ರಚಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಮನವಿ

ಗೋಕಾಕ ಫೆ 10 : ಗೋಕಾಕ ತಾಲೂಕಿನಲ್ಲಿರುವ ಕೌಜಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ರಚಿಸುವಂತೆ ಆಗ್ರಹಿಸಿ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಗುರುವಾರ ರಾತ್ರಿ ಬೆಂಗಳೂರಿನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕ ತಾಲೂಕಿನ ಕೌಜಲಗಿ ಪಟ್ಟಣವು ಪ್ರಮುಖ ಹೋಬಳಿಯಾಗಿದ್ದು, ಸುತ್ತಮುತ್ತಲಿನ 50ಕ್ಕೂ ಅಧಿಕ ಗ್ರಾಮಗಳಿಗೆ ಕೌಜಲಗಿಯು ಕೇಂದ್ರ ಸ್ಥಾನವಾಗಿದೆ ಎಂದು ಮನವಿಯಲ್ಲಿ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ.
ಕಳೆದ 5 ದಶಕಗಳಿಂದ ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿ ರಚಿಸುವಂತೆ ಕೌಜಲಗಿ ಭಾಗದ ಜನರು ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಆದ್ದರಿಂದ ಆಡಳಿತಾತ್ಮಕ ಹಿತದೃಷ್ಟಿಯಿಂದ ಕೌಜಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ರಚಿಸುವಾಗಿದೆ. ತಾಲೂಕುಗಳ ಪುನರ್ ವಿಂಗಡಣಾ ಸಮೀತಿಗಳಾದ ವಾಸುದೇವರಾವ್, ಹುಂಡೇಕರ್, ಗದ್ದಿಗೌಡರ ಆಯೋಗಗಳು ಆಗಿನ ಸರ್ಕಾರಗಳಿಗೆ ಕೌಜಲಗಿಯು ತಾಲೂಕು ಕೇಂದ್ರವಾಗಲಿಕ್ಕೆ ಅತ್ಯಂತ ಸೂಕ್ತವೆಂದು ವರದಿಗಳನ್ನು ಸಲ್ಲಿಸಿದ್ದವು ಎಂದು ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಹೊಸ ತಾಲೂಕುಗಳ ಪುನರ್‍ರಚನೆ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿ ರಚಿಸುವುದರ ಬಗ್ಗೆ ಪರಾಮರ್ಶೆ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ನಮ್ಮ ಮನವಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

Related posts: