ಖಾನಾಪುರ:ಆರ್ಥಿಕವಾಗಿ ಸ್ವಾವಲಂಬಿಗಳಾಗಿ : ಡಾ.ಸವಿತಾ ಜೋಶಿ
ಆರ್ಥಿಕವಾಗಿ ಸ್ವಾವಲಂಬಿಗಳಾಗಿ : ಡಾ.ಸವಿತಾ ಜೋಶಿ
ಖಾನಾಪುರ ಅ 12: ಪಟ್ಟಣದ ಹೊರವಲಯದ ಕೇಂದ್ರೀಯ ಗ್ರಾಮೀಣ ಕುಂಬಾರಿಕಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಕುಂಬಾರಿಕೆ ಉತ್ಪನ್ನಗಳ ತಯಾರಿಕೆ ತರಬೇತಿಯನ್ನು ನೀಡುವ ಕುಂಬಾರಿಕೆ ತರಬೇತಿ ಶಿಬಿರ ಬುಧವಾರ ಸಂಪನ್ನಗೊಂಡಿತು. ಶಿಬಿರದ ಸಮಾರೋಪ ಸಮಾರಂಭವನ್ನು ಸ್ತ್ರೀರೋಗ ತಜ್ಞೆ ಡಾ.ಸವಿತಾ ಜೋಶಿ ಉದ್ಘಾಟಿಸಿದರು.
ಬಳಿಕ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಧರ್ಮಸ್ಥಳ ಯೋಜನೆಯ ವತಿಯಿಂದ ಮಹಿಳೆಯರು ಸ್ವಾವಲಂಬಿಗಳಾಗಲಿ ಎಂಬ ಉದ್ದೇಶದಿಂದ ಆಯೋಜಿಸಿದ ತರಬೇತಿಯ ಸದುಪಯೋಗವನ್ನು ಪಡೆದುಕೊಂಡು ಸ್ವಂತ ಉದ್ಯೋಗ ಮಾಡಬೇಕು. ಕುಂಬಾರಿಕೆ ಕಲೆಯನ್ನು ಕಲಿತು ಕುಂಬಾರಿಕೆ ಉತ್ಪನ್ನಗಳನ್ನು ನಿರ್ಮಿಸುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.
ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಶೀನಪ್ಪ ಮೂಲ್ಯ ಮಾತನಾಡಿ, ಆಧುನಿಕತೆಯ ವಿಸ್ತಾರತೆ, ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹಳೆಯ ಸಾಂಪ್ರದಾಯಿಕ ಪದ್ಧತಿಗಳುನಶಿಸಿ ಹೋಗುತ್ತಿವೆ. ಅಂದ ಚೆಂದದ ವಸ್ತುಗಳಿಗೆ ಮಾರು ಹೋಗುವ ಭರದಲ್ಲಿ ಪ್ರಾಕೃತಿಕವಾಗಿ ಆರೋಗ್ಯ ವೃದ್ದಿಗೆ ಅನುಕೂಲ ಆಗುವಂತಹ ವಸ್ತುಗಳನ್ನು ಬಳಸಲು ನಿರ್ಲಕ್ಷ ವಹಿಸಲಾಗುತ್ತಿದೆ. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್, ಸ್ಟಿಲ್, ಅಲ್ಯೂಮಿನಿಯಂನಂತಹ ಪಾತ್ರೆಗಳಿಂದ ರೋಗಗಳನ್ನು ಆಹ್ವಾನ ಮಾಡಿಕೊಳ್ಳುತ್ತಿದ್ದು, ನಮ್ಮ ಹಿರಿಯರು ಮಣ್ಣಿನ ಮಡಿಕೆಗಳಲ್ಲಿ ಅಡುಗೆ ಮಾಡಿ, ನೀರು ಸೇವಿಸಿ ನೂರಾರು ವರ್ಷ ಆರೋಗ್ಯದಿಂದ ಬಾಳಿರುವುದನ್ನು ಮರೆತ ನಾವು ಹೊಸತನಕ್ಕೆ ಅಂಟಿಕೊಂಡು ಪುರಾತನ ಕಲೆಯನ್ನು ಮರೆಯುತ್ತಿದ್ದೇವೆ ಎಂದು ವಿಷಾದಿಸಿದರು.
ಕೇಂದ್ರೀಯ ಗ್ರಾಮೀಣ ಕುಂಬಾರಿಕಾ ಸಂಸ್ಥೆಯ ಸಹಯೋಗದೊಂದಿಗೆ ಜರುಗಿದ ಒಂದು ತಿಂಗಳ ಅವಧಿಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರವನ್ನು ಯಶಸ್ವಿಯಾಗಿ ಪೂರೈಸಿದ 16 ಶಿಬಿರಾರ್ಥಿಗಳಿಗೆ ಕುಂಬಾರಿಕೆ ಸಂಸ್ಥೆಯ ಪ್ರಾಚಾರ್ಯ ಎಸ್.ಎಸ್ ತಾಂಬೆ ಪ್ರಮಾಣ ಪತ್ರ ವಿತರಿಸಿದರು.
ಕೇಂದ್ರೀಯ ಗ್ರಾಮೀಣ ಕುಂಬಾರಿಕಾ ಸಂಸ್ಥೆಯ ತರಬೇತಿ ಅಧಿಕಾರಿ ವೆಂಕಟೇಶ ಕುಂಬಾರ, ಸಿಬ್ಬಂದಿ ಸಚ್ಚಿದಾನಂದ ಕಾಶೀಕರ, ದೇಶಪಾಂಡೆ, ಮೇಘಾ ಕುಂದರಗಿ, ಲಕ್ಷ್ಮಣ ಮಾದರ ಮತ್ತಿತರರು ಉಪಸ್ಥಿತರಿದ್ದರು. ಯೋಜನಾಧಿಕಾರಿ ರಿಯಾಜ್ ಅತ್ತಾರ ನಿರೂಪಿಸಿದರು. ಸಂತೋಷ ಗಂದಿಗವಾಡ ಸ್ವಾಗತಿಸಿದರು. ಮಲಪ್ರಭಾ ಸುತಾರ ವಂದಿಸಿದರು.
