ಗೋಕಾಕ:ಪೊಲೀಸ್ ಅಧಿಕಾರಿಗಳು ದೂರು ಅರ್ಜಿಯನ್ನು ಸ್ವೀಕರಿಸುತ್ತಿಲ್ಲ : ನ್ಯಾಯವಾದಿ ಬಸವರಾಜ ಕಾಪಸಿ ಆರೋಪ
ಪೊಲೀಸ್ ಅಧಿಕಾರಿಗಳು ದೂರು ಅರ್ಜಿಯನ್ನು ಸ್ವೀಕರಿಸುತ್ತಿಲ್ಲ : ನ್ಯಾಯವಾದಿ ಬಸವರಾಜ ಕಾಪಸಿ ಆರೋಪ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 27 :
ಮಾಜಿ ಸಚಿವ ಹಾಗೂ ಶಾಸಕ ಮುರಗೇಶ ನಿರಾಣಿ ಹಾಗೂ ಖಾಸಗಿ ವಾಹಿನಿಯೊಂದರ ನಿರೂಪಕರ ವಿರುದ್ಧ ಗೋಕಾಕ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ಹೋದರೆ ಪೊಲೀಸ್ ಅಧಿಕಾರಿಗಳು ನಮ್ಮ ಅರ್ಜಿಯನ್ನು ಸ್ವೀಕರಿಸುತ್ತಿಲ್ಲ ಎಂದು ತಾ.ಪಂ ಮಾಜಿ ಸದಸ್ಯ ಹಾಗೂ ನ್ಯಾಯವಾದಿ ಬಸವರಾಜ ಕಾಪಸಿ ಆರೋಪಿಸಿದರು.
ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದು ದೇವತೆಗಳ ವಿರುದ್ಧ ಅವಹೇಳನಕಾರಿ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಶಾಸಕ ಮುರಗೇಶ ನಿರಾಣಿ ಹಾಗೂ ಸಂದೇಶವನ್ನು ಹಿಂದುಗಳಿಗೆ ನೋವಾಗುವಂತೆ ಬಿತ್ತರಿಸುವ ಟಿ.ವಿ.ಚಾಲನ್ ಒಂದರ ನಿರೂಪಕರೊಬ್ಬರು ತಮ್ಮ ನಿರೂಪಣೆಯಲ್ಲಿ ಮತ್ತೆ-ಮತ್ತೇ, ಪದೆ-ಪದೇ ಹಿಂದುಗಳಿಗೆ ನೋವಾಗುವಂತೆ ಬಿತ್ತರಿಸುವ ಸಂದರ್ಭದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ವ್ಯಕ್ತಿಯ ಮೇಲೆ ದೂರು ಸಲ್ಲಿಸಲು ಹೋದರೆ ಪೊಲೀಸ್ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ ಎಂದು ಆರೋಪಿಸಿದರು.
ಕಳೆದ ನಾಲ್ಕೈದು ದಿನಗಳಿಂದ ಗೋಕಾಕ ನಗರ ಠಾಣೆಗೆ ಹೋಗಿ ದೂರು ಸಲ್ಲಿಸಲು ಹೋದರೆ ಜಿಲ್ಲಾ ವರಿಷ್ಠಾಧಿಕಾರಿಗಳ ಹತ್ತಿರ ಹೋಗಿ ಎಂದು ಪಿಎಸ್‍ಐ ಅವರು ಹೇಳುತ್ತಾ ಕಾಲ ದೂಡುತ್ತಿದ್ದಾರೆ. ಅಲ್ಲದೇ ದೂರನ್ನು ರಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸಿದರೂ ನಮ್ಮ ದೂರನ್ನು ದಾಖಲಿಸಿಕೊಂಡು ಎಫ್‍ಆರ್‍ಐ ಕಾಫಿ ನೀಡುತ್ತಿಲ್ಲ, ದೂರನ್ನು ದಾಖಲಿಸಲು ಎಡತಾಕಿದೊಂದೆ ನಮ್ಮ ದೊಡ್ಡ ಸಾಧನೆಯಾಗಿದೆ. ನ್ಯಾಯವಾದಿಗಳೇ ಸ್ವತ: ದೂರನ್ನು ದಾಖಲಿಸಲು ಹೋದರೆ ದೂರನ್ನು ದಾಖಲಿಸಿಕೊಳ್ಳುತ್ತಿಲ್ಲ ಇನ್ನೂ ಜನಸಾಮಾನ್ಯರ ಬಗ್ಗೆ ಇವರು ಯಾವ ಕಾಳಜಿಯನ್ನು ವಹಿಸುತ್ತಾರೆ. ಇದರ ಬಗ್ಗೆ ಎಸ್.ಪಿ. ಸಾಹೇಬರು ಗಮನ ಹರಿಸಬೇಕು. ಹಿಂದು ದೇವತೆಗಳ ಬಗ್ಗೆ ಅವಹೇಳನಕಾರಿ ಸಂದೇಶವನ್ನು ಹರಿಬಿಟ್ಟು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುತ್ತಿರುವ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದು ಅನಿವಾರ್ಯವೆಂದು ತಿಳಿಸಿದರು.
ಈಗಾಗಲೇ ಶಾಸಕ ನಿರಾಣಿ ಅವರ ಮೇಲೆ ಬೆಂಗಳೂರಿನ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಅವರು ಕ್ಷಮಾಪನೆ ಕೇಳಿದಾರಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಜವಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ರೀತಿಯಾಗಿ ಸಮಾಜದ ಸ್ವಾಸ್ಥವನ್ನು ಹದಗೆಡಿಸುವ ಕಾರ್ಯವನ್ನು ಮಾಡಿದರೇ ಅವರು ಕ್ಷಮೆಗೆ ಅರ್ಹರಲ್ಲ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾನೂನಿನ ಪ್ರಕಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠೀಯಲ್ಲಿ ನ್ಯಾಯವಾದಿ ಬಲದೇವ ಸಣ್ಣಕ್ಕಿ, ಹಿಂದು ಪರ ಸಂಘಟನೆಗಳ ಮುಖಂಡರಾದ ಪ್ರವೀಣ ಗೋಸಬಾಳ, ಶಿವಾನಂದ ಹಿರೇಮಠ ಇದ್ದರು.