ಮೂಡಲಗಿ:ಶ್ರದ್ಧೆ, ಪರಿಶ್ರಮವಿದ್ದರೆ ಯಶಸ್ಸು ಖಂಡಿತ : ಶ್ರೀಹರಿ
ಶ್ರದ್ಧೆ, ಪರಿಶ್ರಮವಿದ್ದರೆ ಯಶಸ್ಸು ಖಂಡಿತ : ಶ್ರೀಹರಿ
ಮೂಡಲಗಿ ಜ 14 : ‘ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಪರಿಶ್ರಮವಿದ ಅಧ್ಯಯನವಿದ್ದರೆ ಯಶಸ್ಸು ಖಂಡಿತ ದೊರೆಯುತ್ತದೆ’ ಎಂದು ಧಾರವಾಡದ ಐ.ಸಿ.ಎಸ್.ಸಂಸ್ಥೆಯ ನಿರ್ದೇಶಕ ಶ್ರೀಹರಿ ಹೇಳಿದರು.
ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಉದ್ಯೋಗ ಮಾರ್ಗದರ್ಶನ ಘಟಕದ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಪ್ರಸ್ತುತ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವಲ್ಲಿ ವಿದ್ಯಾರ್ಥಿಗಳು ನಿತ್ಯ ಪರಿಶ್ರಮಪಡಬೇಕು ಎಂದರು.
ಬಿ.ಎ, ಬಿ.ಕಾಮ್‍ದಂತ ಪದವಿಗಳ ನಂತರ ಸ್ಪರ್ಧಾತ್ಮ ಪರೀಕ್ಷೆಗಳ ಮೂಲಕ ಸಾಕಷ್ಟು ಅವಕಾಶಗಳು ಇವೆ. ವಿದ್ಯಾರ್ಥಿಗಳು ಕೀಳರಿಮೆ ಮತ್ತು ಅಸಾಧ್ಯವೆಂದು ಹಿಂದೆ ಸರಿಯದೆ ಮುಂದೆ ಸಾಗಿದರೆ ಉತ್ತಮ ಅವಕಾಶಗಳು ಇವೆ ಎಂದರು.
ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಡಾ. ಆರ್.ಎ. ಶಾಸ್ತ್ರೀಮಠ ಮಾತನಾಡಿ ಸತತ ಯೋಜನಾಬದ್ಧವಾದ ಶ್ರಮವು ಯಶಸ್ಸಿನ ಮೂಲವಾಗಿದೆ. ವಿದ್ಯಾರ್ಥಿಗಳು ಸಮಯ ಹಾಳುಮಾಡದೆ ಅಧ್ಯಯನಶೀಲರಾಗಿ ಯಶಸ್ಸು ಕಾಣಬೇಕು ಎಂದರು.
ಉದ್ಯೋಗ ಮಾರ್ಗದರ್ಶನ ಘಟಕದ ಯೋಜನಾಧಿಕಾರಿ ಬಿ.ಪಿ. ಬಂದಿ ಪ್ರಾಸ್ತಾವಿಕ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆ ಸಂಬಂಧಿಸಿದಂತೆ ಪುಸ್ತಕಗಳು, ನಿಯತಕಾಲಿಕೆಗಳು, ದಿನಪತ್ರಿಕೆಗಳು ಸಾಕಷ್ಟು ಇದ್ದು, ವಿದ್ಯಾರ್ಥಿಗಳು ಅವುಗಳಿಂದ ಜ್ಞಾನ ಸಂಪಾದಿಸಬೇಕು ಎಂದರು.
ವಿದ್ಯಾರ್ಥಿಗಳು ಐಎಎಸ್, ಕೆಎಎಸ್, ಬ್ಯಾಂಕಿಂಗ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳ ಮೂಲಕ ತಮ್ಮ ಅನುಮಾನಗಳನ್ನು ನಿವಾರಿಸಿಕೊಂಡರು.
ಡಾ. ವಿ.ಆರ್. ದೇವರಡ್ಡಿ, ಡಾ. ಎಸ್.ಎಲ್. ಚಿತ್ರಗಾರ, ಪ್ರೊ.ಎಸ್.ಸಿ. ಮಂಟೂರ ವೇದಿಕೆಯಲ್ಲಿದ್ದರು.
ಪ್ರೊ. ಎಸ್.ಬಿ. ಖೋತ ಸ್ವಾಗತಿಸಿದರು, ಪ್ರೊ. ಎಸ್.ಎ. ಶಾಸ್ತ್ರೀಮಠ ನಿರೂಪಿಸಿದರು, ಪ್ರೊ. ಜಿ. ಸಿದ್ರಾಮರೆಡ್ಡಿ ವಂದಿಸಿದರು.