ಗೋಕಾಕ:ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುವುದರ ವಿರುದ್ಧ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ
ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುವುದರ ವಿರುದ್ಧ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ
ಗೋಕಾಕ ನ 5 : ರಾಜ್ಯ ಸರ್ಕಾರ ನ. 10 ರಂದು ಟಿಪ್ಪು ಜಯಂತಿ ಆಚರಿಸುವುದರ ವಿರುದ್ಧ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲದಾರ ಮುಖಾಂತರ ರಾಜ್ಯಪಾಲರಿಗೆ ಸೋಮವಾರದಂದು ಮನವಿ ಸಲ್ಲಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ನೂರಾರು ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾ ಮೆರವಣಿಗೆ ಮೂಲಕ ಮಿನಿ ವಿಧಾನ ಸೌಧಕ್ಕೆ ತೆರಳಿ ತಹಶೀಲದಾರ ಜಿ.ಎಸ್.ಮಳಗಿ ಅವರಿಗೆ ಮನವಿ ಸಲ್ಲಿಸಿದರು.
ವಿಶ್ವ ಹಿಂದೂ ಪರಿಷತ್ತಿನ ವಿಭಾಗೀಯ ಕಾರ್ಯದರ್ಶಿ ನಾರಾಯಣ ಮಠಾಧಿಕಾರಿ ಮಾತನಾಡಿ ಓರ್ವ ಮತಾಂಧ, ಹಿಂದು ಧರ್ಮದ ಹಾಗೂ ವಿರೋಧಿಯಾಗಿದ್ದ ಟಿಪ್ಪು ಜಯಂತಿಯನ್ನು ಕೇವಲ ವೋಟ್ ಬ್ಯಾಂಕ್‍ಗಾಗಿ ಆಚರಿಸುತ್ತಿರುವುದು ಸರ್ಕಾರದ ನೀತಿ ಸರಿಯಲ್ಲ. ಟಿಪ್ಪುವಿನ ಆಡಳಿತಾವಧಿಯಲ್ಲಿ ಮಂಡ್ಯ, ಮೈಸೂರು, ಕೊಡಗು, ಮಲಬಾರಿನ ಜನತೆಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರು, ಕನ್ನಡ ಭಾಷೆಯ ವಿರೋಧಿಯಾಗಿದ್ದ ಟಿಪ್ಪುವನ್ನು ವೈಭವೀಕರಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು, ನಾಡಿನ ಯುವ ಜನತೆ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಭಜರಂಗದಳದ ಬೆಳಗಾವಿ ವಿಭಾಗ ಸಂಚಾಲಕ ಸದಾಶಿವ ಗುದಗಗೋಳ ಮಾತನಾಡಿ ಮದಕರಿ ನಾಯಕನಿಗೆ ವಿಷವುಣ್ಣಿಸಿ, ಆತನ ಸಾವಿಗೆ ಕಾರಣನಾದ ಹೈದರಾಲಿ ಹಾಗೂ ನಾಯಕ ಸಮುದಾಯದ ಸೈನಿಕರನ್ನು ಹತ್ಯೆಗೈದು ಉಳಿದ ಸೈನಿಕರನ್ನು ಮತಾಂತರಿಸಿದ ಟಿಪ್ಪುವನ್ನು ವೈಭವಿಕರಿಸುತ್ತಿರುವುದು ಸರಿಯಲ್ಲ. ಟಿಪ್ಪು ಒಬ್ಬ ಮುಸಲ್ಮಾನ ಎಂಬ ಕಾರಣಕ್ಕಾಗಿ ನಮ್ಮ ವಿರೋಧವಲ್ಲ, ಬದಲಿಗೆ ಮತಾಂಧ, ಹಿಂದು ಧರ್ಮದ ಹಾಗೂ ವಿರೋಧಿಯಾಗಿದ್ದ ಜಗತ್ತನ್ನೇ ಇಸ್ಲಾಂ ಮಾಡುವುದೇ ಆತನ ಉದ್ದೇಶವಾಗಿತ್ತೆಂದು ಇತಿಹಾಸದಿಂದ ತಿಳಿದು ಬಂದಿರುತ್ತದೆ. ತತ್ವ ಸಿದ್ದಾಂತಗಳನ್ನು ಬದಿಗಿಟ್ಟು ರಾಜಕೀಯ ಮಾಡಬೇಡಿ, ಕಳೆದ ಸಲ ಕಾಂಗ್ರೇಸ್ ಸರ್ಕಾರಕ್ಕೆ ಕರ್ನಾಟಕದ ಜನತೆ ತಕ್ಕಪಾಠ ಕಲಿಸಿದ್ದಾರೆ. ಜಯಂತಿ ಆಚರಿಸಿದರೆ ಸಮಿಶ್ರ ಸರ್ಕಾರಕ್ಕೆ ಮತ್ತೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರಲ್ಲದೇ ನಮ್ಮ ಸಂಸ್ಕøತಿ, ಪರಂಪರೆ, ಆಚಾರ, ವಿಚಾರ ವಿರುದ್ಧವಾಗಿ ಟಿಪ್ಪು ಜಯಂತಿಯನ್ನು ಆಚರಿಸುತ್ತಿರುವುದನ್ನು ಭಜರಂಗದಳ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿ ಖಂಡಿಸುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕಿರಣ ಮಿರಜಕರ, ನಾಮದೇಚ ಚಿಕ್ಕೋರ್ಡೆ, ಅಕ್ಷಯ ಕಾಡದೇವರಮಠ, ದಯಾನಂದ ಮಾವರಕರ, ಪ್ರವೀಣ ಚಕ್ಕಡಿ, ಸಂತೋಷ ಗೋಂಧಳಿ, ಕೃಷ್ಣಾ ನಾವಿ, ಮಲ್ಲಿಕಾರ್ಜುನ ಸುಣಗಾರ, ಲಕ್ಕಪ್ಪ ನಂದಿ ಸೇರಿದಂತೆ ಅನೇಕರು ಇದ್ದರು.
