ಘಟಪ್ರಭಾ:ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಮಿತಿಯ ವಿಸರ್ಜನೆ : ಚಂದ್ರಶೇಖರ ಕೋಡಿಹಳ್ಳಿ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಮಿತಿಯ ವಿಸರ್ಜನೆ : ಚಂದ್ರಶೇಖರ ಕೋಡಿಹಳ್ಳಿ
ಘಟಪ್ರಭಾ ಜು 1 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬೆಳಗಾವಿ ಜಿಲ್ಲಾ ಸಮಿತಿಯನ್ನು ಸದ್ಯಕ್ಕೆ ವಿಸರ್ಜನೆ ಮಾಡಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ ಹೇಳಿದರು.
ಅವರು ಶನಿವಾರದಂದು ಸಮೀಪದ ಧುಪದಾಳ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ರೈತ ಸಂಘದ ತತ್ವಸಿದ್ಧಾಂತಗಳಿಗೆ ಅನುಸಾರವಾಗಿ ಮತ್ತು ಸಂಘಟನೆಯ ಪದಾಧಿಕಾರಿಗಳಲ್ಲಿ ಭಿನ್ನಾಭಿಪ್ರಾಯ ಇರುವುದರಿಂದ ಈ ನಿರ್ಣಯ ತಗೆದುಕೊಳ್ಳಲಾಗಿದೆ. ಹಸಿರು ಸೇನೆ ಜಿಲ್ಲಾಧ್ಯಕ್ಷ ಗಣಪತಿ ಈಳಿಗೇರ ಹಾಗೂ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ ಅವರನ್ನು ಒಳಗೊಂಡಂತೆ ಜಿಲ್ಲಾ ಸಮಿತಿಯ ಎಲ್ಲ ಪದಾಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಸದ್ಯಕ್ಕೆ ಎಲ್ಲರೂ ರೈತ ಸಂಘದ ಕಾರ್ಯಕರ್ತರಾಗಿ ಸೇವೆ ಸಲ್ಲಿಸಬೇಕು. ಅಲ್ಲದೇ ರಾಘವೇಂದ್ರ ನಾಯಿಕ ಅವರನ್ನು ತಾತ್ಕಾಲಿಕವಾಗಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ರೈತ ಸಂಘದ ರಾಜ್ಯ ಸಂಚಾಲಕ ಚೂನಪ್ಪ ಪೂಜೇರಿ ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ರೈತ ಸಂಘದಿಂದ ಅರಭಾವಿ ವಿಧಾನ ಸಭಾ ಮತಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ ಈ ನಾಯಕರು ಅವರಿಗೆ ಬೆಂಬಲ ನೀಡದೇ ಬೇರೆ ಪಕ್ಷದ ಅಭ್ಯರ್ಥಿಪರ ಪ್ರÀಚಾರದಲ್ಲಿ ತೊಡಗಿದ್ದರು. ಈ ವಿಷಯದಾಗಿ ಈ ನಾಯಕರ ಬಗ್ಗೆ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿತ್ತು ಇಂದು ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷರ ಮುಂದೆ ವಿಷಯ ಪ್ರಸ್ತಾಪಿಸಿದಾಗ ಸಭೆಯಲ್ಲಿ ಈ ನಿರ್ಣಯ ತಗೆದುಕೊಳ್ಳಲಾಯಿತು.
ಜುಲೈ 15ರಂದು ರೈತ ಹುತಾತ್ಮ ದಿನಾಚರಣೆಯನ್ನು ಹಾವೇರಿಯಲ್ಲಿ ಮಾಡುವುದಾಗಿ ರಾಜ್ಯಾಧ್ಯಕ್ಷರು ತಿಳಿಸಿದರು. ಈ ಹಿಂದೆ ರೈತ ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಬಸವರಾಜ ಮಳಲಿ ಮತ್ತು ಪಾಮಲದಿನ್ನಿ ಗ್ರಾಮದ ರೈತ ಮುಖಂಡ ಭೀರಪ್ಪ ಪೂಜೇರಿ ಅವರು ನಿಧನ ಹೊಂದಿದ್ದು ಅವರ ಮೂರ್ತಿ ಪ್ರತಿಷ್ಠಾಪನೆಯನ್ನು ಶೀಘ್ರದಲ್ಲಿ ಮಾಡಲಾಗುವುದು ಅದಕ್ಕೆ ಎಲ್ಲ ರೈತ ಸಂಘದ ಕಾರ್ಯಕರ್ತರು ಸಹಾಯ ಸಹಕಾರ ನೀಡಬೇಕೆಂದು ರೈತ ಮುಖಂಡರು ಸಭೆಯಲ್ಲಿ ವಿವಿಧ ತಾಲೂಕಿನ ರೈತ ಮುಖಂಡರು ತಿಳಿಸಿದರು. ಜಿಲ್ಲೆಯ 10 ತಾಲೂಕಿನಿಂದ ರೈತ ಸಂಘದ ನೂರಾರು ತಾಲೂಕಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.