ಮೂಡಲಗಿ:ನಾಗನೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯ ಶ್ಲಾಘನೀಯ : ಶಾಸಕ ಬಾಲಚಂದ್ರ
ನಾಗನೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯ ಶ್ಲಾಘನೀಯ : ಶಾಸಕ ಬಾಲಚಂದ್ರ
ಮೂಡಲಗಿ ಜು 1 : ಬಿಎಂಸಿ ಘಟಕವು ಹಾಲನ್ನು ತ್ವರಿತವಾಗಿ ತಂಪು ಮಾಡುವ ವಿಶೇಷ ಘಟಕವಾಗಿದ್ದು, ಪ್ರತಿದಿನ 3000 ಲೀ ಹಾಲನ್ನು ಶೇಖರಣೆ ಮಾಡುತ್ತಿರುವ ನಾಗನೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯ ಶ್ಲಾಘನೀಯವಾದದ್ದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸಿಸಿದರು.
ಶನಿವಾರ ಸಂಜೆ ಸಮೀಪದ ನಾಗನೂರ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡ ಹಾಗೂ ಶಿಥಲೀಕರಣ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ನಾಗನೂರ ಹಾಲು ಉತ್ಪಾದಕರ ಸಹಕಾರಿ ಸಂಘವು ಈ ಭಾಗದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ರೈತರ ಪ್ರಶಂಸೆಗೆ ಪಾತ್ರವಾಗಿದೆ. ಬಿಎಂಸಿಯಿಂದ ನಾಗನೂರ ಮತ್ತು ಸುತ್ತಮುತ್ತಲಿನ ಹಾಲಿನ ಸಂಘಗಳಿಗೆ ಅನುಕೂಲವಾಗಲಿದೆ. ಇದರಿಂದ ರೈತರು ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ನೀಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿರುವ ಎಲ್ಲ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಬಿಎಂಸಿಯನ್ನು ಅಳವಡಿಸಿಕೊಂಡು ಗುಣಮಟ್ಟದ ಹಾಲನ್ನು ಜಿಲ್ಲಾ ಹಾಲು ಒಕ್ಕೂಟಕ್ಕೆ ಸರಬರಾಜು ಮಾಡಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದರು.
ಪರಿಶಿಷ್ಟ ಪಂಗಡದ ರೈತರಿಗಾಗಿ ಕೇಂದ್ರ ಸರ್ಕಾರವು 15 ಲಕ್ಷ ರೂ. ಮೊತ್ತವನ್ನು ಉಚಿತವಾಗಿ ಸಂಘಗಳ ಅಭಿವೃದ್ಧಿಗೆ ನೀಡುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳುವಂತೆ ರೈತರಿಗೆ ಸಲಹೆ ಮಾಡಿದ ಅವರು, ಈ ವ್ಯವಸ್ಥೆಯಿಂದ ರೈತರಿಗೆ ಹೆಚ್ಚಿನ ದರ ಸಿಗುವಂತಾಗುತ್ತದೆ ಎಂದು ಹೇಳಿದರು.
ಈಗಾಗಲೇ ಖಾನಟ್ಟಿ, ರಡ್ಡೇರಹಟ್ಟಿ ಗ್ರಾಮಗಳ ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ಬಿಎಂಸಿ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ 5000 ಲೀ. ಸಾಮಥ್ರ್ಯದ ಬಿಎಂಸಿಯನ್ನು ಬೆಟಗೇರಿ ಹಾಗೂ ಮರಡಿಶಿವಾಪೂರ ಸಂಘಗಳಲ್ಲಿ ಆರಂಭಿಸಲಾಗುವುದು ಎಂದು ಹೇಳಿದರು.
ರೈತರ ಹಿತಕ್ಕಾಗಿ ಜಿಲ್ಲಾ ಹಾಲು ಒಕ್ಕೂಟವು ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಜಿಲ್ಲೆಯ 600 ಸಂಘಗಳಿಂದ ದಿನಂಪ್ರತಿ 2.08 ಲಕ್ಷ ಲೀ. ಹಾಲನ್ನು ಸಂಗ್ರಹ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಖಾಸಗಿ ಪೈಪೋಟಿ ಮಧ್ಯೆಯೂ ಜಿಲ್ಲೆಯ ಸುಮಾರು 36000 ರೈತರು ಜಿಲ್ಲಾ ಹಾಲು ಒಕ್ಕೂಟಕ್ಕೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ಮಾಡುತ್ತಿರುವುದು ಜಿಲ್ಲಾ ಹಾಲು ಒಕ್ಕೂಟ ಹಾಗೂ ರೈತರ ಮಧ್ಯ ಇರುವ ಸುಮಧುರ ಸಂಬಂಧವನ್ನು ಎತ್ತಿ ತೋರಿಸುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸರ್ಕಾರ ಹೈನುಗಾರಿಕೆ ಉತ್ತೇಜನಕ್ಕಾಗಿ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಇದರ ಲಾಭ ಪಡೆಯಲು ರೈತರು ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಹಾಲನ್ನು ನೀಡಿ ಒಕ್ಕೂಟದ ಬೆಳವಣಿಗೆ ಜೊತೆಗೆ ರೈತರ ಆರ್ಥಿಕಾಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರೈತರಿಗೆ ಮನವಿ ಮಾಡಿಕೊಂಡರು.
ಕಳೆದ ಚುನಾವಣೆಯಲ್ಲಿ ನಾಗನೂರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತಗಳನ್ನು ನೀಡಿ ಸತತ 5ನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ನಾಗನೂರ ಪಟ್ಟಣದ ಶ್ರೇಯೋಭಿವೃದ್ಧಿಗೆ ಶ್ರಮಿಸುವ ವಾಗ್ದಾನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಮಾರಾಟ ಮಹಾಮಂಡಳದ ಉಪಾಧ್ಯಕ್ಷ ಬಸಗೌಡ ಪಾಟೀಲ ವಹಿಸಿದ್ದರು.
ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ನಾಗನೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಿಠ್ಠಲ ಗುಡೆನ್ನವರ, ಭಗೀರಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರು ಬೆಳಗಲಿ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕರ ಹೊಸಮನಿ, ಪ್ರಭಾಶುಗರ ನಿರ್ದೇಶಕ ಕೆಂಚಗೌಡ ಪಾಟೀಲ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಸುಭಾಸ ಬೆಳಗಲಿ, ಅಲ್ಲಪ್ಪ ಗುಡೆನ್ನವರ, ಸತ್ತೆಪ್ಪ ಕರವಾಡಿ, ದೇವೇಂದ್ರ ಕರಬನ್ನವರ, ಗಜಾನನ ಯರಗಣ್ವಿ, ಮುತ್ತೆಪ್ಪ ಖಾನಪ್ಪನವರ, ಬಸು ಕರಿಹೊಳಿ, ಮಹ್ಮದ ಅತ್ತಾರ, ಯಮನಪ್ಪ ಕರಬನ್ನವರ, ಜಿಲ್ಲಾ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಎನ್.ಟಿ. ಹಡಪದ, ಸಾಹೇಬಖಾನ್, ತಾಲೂಕಾ ವಿಸ್ತರಣಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ. ಜಯಪ್ರಕಾಶ ಮನ್ನೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಯನ್ನು ಉದ್ಘಾಟಿಸಿದರು.