ಗೋಕಾಕ:ಜೂನ 2 ರಿಂದ ಬೆಟಗೇರಿ ಶ್ರೀ ಮಾರುತಿ ದೇವರ ಓಕುಳಿ.!

ಜೂನ 2 ರಿಂದ ಬೆಟಗೇರಿ ಶ್ರೀ ಮಾರುತಿ ದೇವರ ಓಕುಳಿ.!
“ಕುಂದಾನಗರಿ ಬೆಳಗಾವಿ ಜಿಲ್ಲೆಯ ಕರದಂಟೂರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಹನುಮಂತ ದೇವರ ಓಕುಳಿ ಇದೇ ಶನಿವಾರ ಜೂನ 2 ರಿಂದ ಮಂಗಳವಾರ ಜೂನ 5 ರವರೆಗೆ ವಿಜೃಂಭನೆಯಿಂದ ಜರುಗಲಿದೆ ತನ್ನನಿಮಿತ್ತ ಈ ಲೇಖನ.”
ಶತಮಾನಗಳ ಐತಿಹಾಸಿಕ ಇತಿಹಾಸ ಹೊಂದಿರುವ ಬೆಟಗೇರಿ ಶ್ರೀ ಮಾರುತಿ ದೇವರ ಓಕುಳಿ.!
*ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ದವಾದ ಓಕುಳಿ * ಕಣ್ಮನ ತಣಿಸುವ ಪ್ರಾಣಿ, ಪಕ್ಷಿಗಳ ಸೋಗಿನ ಕುಣಿತ
* ವಿಶೇಷ ವರದಿ : ಅಡಿವೇಶ ಮುಧೋಳ
ಬೆಟಗೇರಿ ಮೇ 31 : ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಹಾಗೂ ಶತ ಶತಮಾನಗಳ ಐತಿಹಾಸಿಕ ಇತಿಹಾಸ ಹೊಂದಿರುವ ಕುಂದಾನಗರಿ ಬೆಳಗಾವಿ ಜಿಲ್ಲೆಯ ಕರದಂಟೂರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಮಾರುತಿ ದೇವರ ಓಕುಳಿ. ಈ ಊರಿನ ಜನರು ಶ್ರೀ ಹನುಮಂತ ದೇವರ ಮೇಲೆಟ್ಟಿರುವ ದೃಢವಾದ ಭಯ, ಭಕ್ತಿಗೆ ಎಲ್ಲೆಯೇ ಇಲ್ಲ.! ಸರ್ವ ಧರ್ಮದ ಸಮನ್ವಯದ ಪ್ರತೀಕವಾಗಿ ವರ್ಷಕ್ಕೊಮ್ಮೆ ನಡೆಯುವ ಹನುಮಂತ ದೇವರ ಓಕುಳಿಯು ಈ ಊರಿನಲ್ಲಿ ಜರುಗುವ ಅತ್ಯಂತ ದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿದೆ. ಕುದುರೆ, ನವಿಲು, ಗರುಡ, ಕರಡಿ ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳ ಸೋಗಿನ ಕುಣಿತ ನೋಡುಗರ ಕಣ್ಮನ ತಣಿಸುತ್ತದೆ. ಓಕುಳಿ ನೋಡಲು ಗ್ರಾಮದ ಹಾಗೂ ಸುತ್ತಲಿನ ಹತ್ತೂರಿನ ಹತ್ತು ಸಾವಿರಕ್ಕೂ ಹೆಚ್ಚು ಜನ ಸೇರುತ್ತಾರೆ.
ಪ್ರಾಣಿ, ಪಕ್ಷಿಗಳ ಸೊಗಿನ ಐದಾರು ಮಜಲು(ಗುಂಪು)ಗಳು ಕಾಲಿಗೆ ಮರಗಾಲು ಕಟ್ಟಿಕೊಂಡು ವಾಧ್ಯಮೇಳಗಳ ತಾಳಕ್ಕೆ ತಕ್ಕಂತೆ ಕುಣಿಯುವ ಯುವಕರ ಕುಣಿತಕ್ಕೆ ದಣಿವೇ ಇಲ್ಲ!! ಬಣ್ಣದೊಕುಳಿ ನಡೆದ ಬಳಿಕ ಇಲ್ಲಿಯ ಮಕ್ಕಳು, ಯುವಕರು, ವೃದ್ಧರು ಸಹ ಉತ್ಸಾಹದಿಂದ ಓಕುಳಿಯಲ್ಲಿ ನೀರು ಎರುಚುತ್ತಾರೆ. ಮಹಿಳೆಯರು, ಮಕ್ಕಳು, ವೃದ್ಧರು ಸಹಿತ ಸುಮಾರು ಐದಾರು ಗಂಟೆ ನಿಂತುಕೊಂಡು ಓಕುಳಿಯ ಸೋಬಗನ್ನು ಸವಿಯುತ್ತಾರೆ. ಹಸಿರು ತಳಿರು ತೋರಣ, ವಿದ್ಯುತ್ ದೀಪ್‍ಗಳಿಂದ ಗ್ರಾಮದ ಎಲ್ಲ ಓಣಿ, ಪ್ರಮುಖ ಬೀದಿಗಳು ಅಲಂಕಾರಗೊಂಡಿರುತ್ತವೆ. ಓಣಿಯ ಎಲ್ಲ ಮನೆಯವರು ಸಾಮೂಹಿಕವಾಗಿ ಎಲ್ಲರೂ ಸೇರಿ ಬಾಜಾ-ಭಜಂತ್ರಿಗಳ ಸಕಲ ವಾಧ್ಯಮೇಳಗಳೊಂದಿಗೆ ಶ್ರೀ ಮಾರುತಿ ದೇವರ ದೇವಾಲಯಕ್ಕೆ ತೆರಳಿ ನೈವೇದ್ಯ, ಪೂಜೆ, ಪುನಸ್ಕಾರ ಸಲ್ಲಿಸುವದು, ಹರಕೆ ತೀರಿಸುವದು ವಾಡಿಕೆ.
ಪ್ರತಿ ಮನೆಯಲ್ಲಿ ಓಕುಳಿಗೆ ಮನೆಯ ಹೆಣ್ಣು ಮಕ್ಕಳನ್ನು ತಪ್ಪದೇ ತವರಿಗೆ ಕರೆತರುವುದು, ಓಕುಳಿಯಲ್ಲಿ ಬೀಗ-ಬಿಜ್ಜರ, ಬಂದು, ಬಾಂಧವರ ಸಮಾಗಮ ಸಂಗಮವಾಗುತ್ತದೆ. ಇಲ್ಲಿಯ ಹನುಮಂತ ದೇವರ ಜಾತ್ರೆ ಗ್ರಾಮದ ಎಲ್ಲ ಸಮುದಾಯದ ಜನರು ವಂತಿಗೆ ಹಣ ಸಂಗ್ರಹಿಸಿ ಅದ್ಧೂರಿಯಾಗಿ ಓಕುಳಿ ಹಬ್ಬ ಆಚರಣೆ ಮಾಡುವ ಪ್ರತೀತೆ ಇದೆ. ಹೀಗಾಗಿ ನಾಡಿನ ಹಲವು ಜಿಲ್ಲೆಯ ಹಳ್ಳಿಗಳ ಜನರು ಬೆಟಗೇರಿ ಹನುಮಂತ ದೇವರ ಓಕುಳಿ ವರ್ಷಕ್ಕೂಮ್ಮೆ ನೋಡುವ ಸದುದ್ದೇಶದಿಂದ(ಸಲುವಾಗಿ) ಈ ಊರಿಗೆ ಬೀಗತನ ಮಾಡಿದ್ದು ಸಾಕಷ್ಟು ಉದಾಹರಣೆಗಳಿವೆ ಎಂದು ಗ್ರಾಮದ ವಯೊವೃದ್ಧ ನಾಗರಿಕರು ಓಕುಳಿ ಮತ್ತು ಬೀಗತನದ ಭಾಂದವ್ಯ ಬೆಸುಗೆಯ ವೈಶಿಷ್ಟೆತೆ ಕುರಿತು ಹೇಳುವ ಮಾತಿದು.
ಬೆಳಗಾವಿ ಜಲ್ಲೆಯಲ್ಲಿಯೇ ಅತ್ಯಂತ ದೊಡ್ಡದಾದ ಓಕುಳಿ ಕೊಂಡ(ನೀರಿನಹೊಂಡ) ಹೊಂದಿದೆ. ಸುಮಾರು ನಾಲ್ಕೈದು ದಿನ ಜರುಗುವ ಈ ಹನುಮಂತ ದೇವರ ಅದ್ಧೂರಿ ಜಾತ್ರೆಗೆ ಗ್ರಾಮದಲ್ಲಿ ಒಂದು ವಾರದಿಂದ ಎಲ್ಲರ ಮನೆ- ಮನೆಗಳಲ್ಲಿ ಓಕುಳಿಯ ಸಡಗರ ಸಂಭ್ರಮ ತುಂಬಿತುಳುಕುತ್ತಿರುತ್ತದೆ. ಉಡುಗೆ, ತೊಡುಗೆಯಲ್ಲಿಯೂ ಸಹ ಹೊಸತನ ಕೊಡಿರುತ್ತದೆ. ಕಡೆ ಓಕುಳಿ ದಿನ ಸ್ಥಳೀಯ ಪ್ರತಿ ಮನೆಗಳಲ್ಲಿ ನಾನಾ ಬಗೆಯ ಮೃಷ್ಟಾನ್ನ ಭೋಜನ ತಯಾರಿಸಿ, ಗ್ರಾಮದ ಅಕ್ಕ-ಪಕ್ಕದ ಮನೆಯವರು, ಬಂಧು, ಬಾಂದವರ ಒಟ್ಟಿಗೆ ಕುಳಿತು ಊಟ ಮಾಡುವುದು, ಊಣಬಡಿಸುವ ಸಡಗರ ಹೇಳತಿರದು.
ಅಲ್ಲದೇ ಓಕುಳಿ ಪ್ರಯುಕ್ತ ರಂಗಭೂಮಿ ಕಲೆಯ ವಿವಿಧ ನಾಟಕ ಸೇರಿದಂತೆ ಮನರಂಜನೆಯ ಹಲವಾರು ಕಾರ್ಯಕ್ರಮ ಗ್ರಾಮದಲ್ಲಿ ಆಯೋಜಿಸಲಾಗಿರುತ್ತದೆ.
ಸ್ಟೇಸನರಿ ಅಂಗಡಿಗಳು ಸೇರಿದಂತೆ ಹಲವಾರು ಆಟಕೆಗಳ ಛತ್ರಗಳು ಮಕ್ಕಳಿಗೆ ಮನರಂಜನೆಗಾಗಿ ಊರಲ್ಲಿ ಬಂದು ಜಮಾಯಿಸಿರುತ್ತವೆ. ಓಕುಳಿ ಪ್ರಯುಕ್ತ ಶ್ರೀ ಮಾರುತಿ ದೇವರ ದೇವಾಲಯದ ಮುಂದೆ ರಾತ್ರಿ ಹಾರಿಸುವ ಸಿಡಿ ಮದ್ದುಗಳ ರಂಗು ರಂಗಿನ ಚಿತ್ತಾರ ಬಾನಂಗಳದಲ್ಲಿ ನೋಡುಗರ ಕಣ್ಮನ ತಣಿಸುತ್ತದೆ. ಕೊನೆಯ ದಿನ ಜಂಗಿ ಕುಸ್ತಿ ಸ್ಪರ್ಧೆಯಲ್ಲಿ ರಾಜ್ಯ, ಮಹಾರಾಷ್ಟ್ರ ಸೇರಿದಂತೆ ಹಲವಡೆಯಿಂದ ಕುಸ್ತಿ ಪಟುಗಳು ಆಗಮಿಸಿ ತಮ್ಮ ಕಸರತ್ತು ತೊರಿಸುವ ಪ್ರದರ್ಶನ ನಡೆಯುತ್ತದೆ. ಹೀಗಾಗಿ ಇಲ್ಲಿಯ ಹನುಮಂತ ದೇವರ ಓಕುಳಿ ನಾಡಿನಲ್ಲೆಡೆ ಪ್ರಸಿದ್ಧಿ ಹೊಂದಿದೆ.
“ ವರ್ಷಕ್ಕೂಮ್ಮೆ ನಡೆಯುವ ನಮ್ಮೂರಿನ ಹನುಮಂತ ದೇವರ ಓಕುಳಿ ನಿಮಿತ್ಯ ಗ್ರಾಮದ ಎಲ್ಲರ ಮನೆ-ಮನಗಳಲ್ಲಿ ಸಂಭ್ರಮ ತುಂಬಿರುತ್ತದೆ. ಗ್ರಾಮದಲ್ಲಿ ಅದ್ಧೂರಿಯಾಗಿ ಆಚರಿಸಲ್ಪಡುವ ದೊಡ್ಡ ಧಾರ್ಮಿಕ ಹಬ್ಬವಾಗಿದೆ.” * ಪುಂಡಲೀಕಪ್ಪ ಪಾರ್ವತೇರ. ಹಿರಿಯ ನಾಗರಿಕ ಬೆಟಗೇರಿ, ತಾ. ಗೋಕಾಕ.