RNI NO. KARKAN/2006/27779|Tuesday, May 21, 2024
You are here: Home » breaking news » ಮೂಡಲಗಿ:ಒಗ್ಗಟ್ಟಿನಿಂದ ಏನು ಬೇಕಾದರೂ ಸಾಧಿಸಬಹುದು: ಶಾಸಕ ಬಾಲಚಂದ್ರ

ಮೂಡಲಗಿ:ಒಗ್ಗಟ್ಟಿನಿಂದ ಏನು ಬೇಕಾದರೂ ಸಾಧಿಸಬಹುದು: ಶಾಸಕ ಬಾಲಚಂದ್ರ 

ಒಗ್ಗಟ್ಟಿನಿಂದ ಏನು ಬೇಕಾದರೂ ಸಾಧಿಸಬಹುದು: ಶಾಸಕ ಬಾಲಚಂದ್ರ

ಮೂಡಲಗಿ ಫೆ 27 : ವಡೇರಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಫುಲಗಡ್ಡಿ ಗ್ರಾಮದ ಪ್ರಗತಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಗ್ರಾಮಸ್ಥರ ಒಗ್ಗಟ್ಟಿನ ಪ್ರತೀಕದಿಂದ ಯೋಜನೆಗಳು ಸದ್ಬಳಕೆಯಾಗಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ಫುಲಗಡ್ಡಿ ಗ್ರಾಮದಲ್ಲಿ ರವಿವಾರ ರಾತ್ರಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಗ್ಗಟ್ಟಿನಿಂದ ಏನು ಬೇಕಾದರೂ ಸಾಧಿಸಬಹುದೆಂಬುದನ್ನು ತೋರಿಸಿಕೊಟ್ಟಿರುವ ಗ್ರಾಮಸ್ಥರ ಜನಪರ ಕಾಳಜಿಯನ್ನು ಕೊಂಡಾಡಿದ ಅವರು, ಗ್ರಾಮಸ್ಥರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ. ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಇದರಿಂದ ಕೃಷಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು. ಫುಲಗಡ್ಡಿ ಕೂಡು ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅಗತ್ಯವಾದ ನೆರವನ್ನು ನೀಡುವುದಾಗಿ ತಿಳಿಸಿದರು. ಅಲ್ಲದೇ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡುವುದಾಗಿ ವಾಗ್ದಾನ ಮಾಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ 9.12 ಲಕ್ಷ ರೂ. ವೆಚ್ಚದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿದ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿದರು. 1.20 ಲಕ್ಷ ರೂ. ವೆಚ್ಚದ ವಿವೇಕಾನಂದ ಆಶ್ರಮದಿಂದ ಹೊಸಟ್ಟಿ ತೋಟದವರೆಗಿನ ನೀರಿನ ಪೈಪಲೈನ್ ಕಾಮಗಾರಿ, 10 ಲಕ್ಷ ರೂ. ವೆಚ್ಚದ ಲಕ್ಷ್ಮೀದೇವಿ ಗುಡಿಯಿಂದ ಮುಖ್ಯ ರಸ್ತೆವರೆಗೆ ಫೆವರ್ಸ್ ಕಾಮಗಾರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣ, 6 ಲಕ್ಷ ರೂ. ವೆಚ್ಚದ ಬಾಬನ್ನವರ ಮನೆಯಿಂದ ಗೌಡರ ಮನೆವರೆಗೆ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಬಹುತೇಕ ಕಾಮಗಾರಿಗಳು ಅದರಲ್ಲೂ ವಿಶೇಷವಾಗಿ ರಸ್ತೆ ಕಾಮಗಾರಿಗಳು ಮಾರ್ಚ ತಿಂಗಳೊಳಗೆ ಮುಗಿಯಲಿವೆ. ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಆಶೀರ್ವದಿಸುವಂತೆ ಕೋರಿದ ಅವರು, ಅರಭಾವಿ ವಿಧಾನಸಭಾ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಪರಮ ಗುರಿಯಾಗಿದೆ. ಅಭಿವೃದ್ಧಿಯೇ ಮೂಲ ಮಂತ್ರ ತತ್ವದಡಿ ಕ್ಷೇತ್ರದ ವಿಕಾಸಕ್ಕೆ ಹಗಲಿರುಳು ಶ್ರಮಿಸುತ್ತಿರುವುದಾಗಿ ತಿಳಿಸಿದರು.
ಫುಲಗಡ್ಡಿ ಗ್ರಾಮಸ್ಥರು ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿದರು.
ವಡೇರಹಟ್ಟಿ ಗ್ರಾಪಂ ಅಧ್ಯಕ್ಷ ಸಿದ್ದಪ್ಪ ವಡೇರ, ವಸಂತ ಡುಳೋಳ್ಳಿ, ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ಜಿಪಂ ಮಾಜಿ ಸದಸ್ಯ ವಿಠ್ಠಲ ಸವದತ್ತಿ, ವೆಂಕಟೇಶ(ಮುರಳಿ) ವಜ್ರಮಟ್ಟಿ, ಶಿವನಗೌಡ ಪಾಟೀಲ, ಶಂಕ್ರೆಪ್ಪ ದಡ್ಡಿ, ಶಿವನಗೌಡ ನಾಯಿಕ, ರಮೇಶ ಕುಲಕರ್ಣಿ, ಅಶೋಕ ನಾಯಿಕ, ಅಶೋಕ ಹುಚರಡ್ಡಿ, ವಿಠ್ಠಲ ಗಿಡೋಜಿ, ಪರಸಪ್ಪ ಸಾರಾಪೂರ, ಬನಪ್ಪ ವಡೇರ, ಶಿವಪ್ಪ ಗಿಡೋಜಿ, ಚಂದ್ರು ಮೋಟೆಪ್ಪಗೋಳ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.

Related posts: