ಮೂಡಲಗಿ:ಸಾಮಾಜಿಕ ನ್ಯಾಯದ ತತ್ವದಡಿ ಕೆಲಸ ಮಾಡಲಾಗುತ್ತಿದೆ: ಶಾಸಕ ಬಾಲಚಂದ್ರ
ಸಾಮಾಜಿಕ ನ್ಯಾಯದ ತತ್ವದಡಿ ಕೆಲಸ ಮಾಡಲಾಗುತ್ತಿದೆ: ಶಾಸಕ ಬಾಲಚಂದ್ರ
ಮೂಡಲಗಿ ಜ 23: ಸಹೋದರತ್ವ ಮನೋಭಾವನೆಯಿಂದ ಎಲ್ಲ ಸಮಾಜಗಳನ್ನು ಒಗ್ಗೂಡಿಸಿ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯದ ತತ್ವದಡಿ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ಕಮಲದಿನ್ನಿ ಗ್ರಾಮಕ್ಕೆ ಕಳೆದ ರವಿವಾರದಂದು ಭೇಟಿ ನೀಡಿ ಮಾತನಾಡುತ್ತಿದ್ದ ಅವರು, ಪ್ರಗತಿ ಕಾರ್ಯಗಳಲ್ಲಿ ಎಂದಿಗೂ ಯಾವ ತಾರತಮ್ಯ ಮಾಡಿಲ್ಲವೆಂದು ಹೇಳಿದರು.
ಎಲ್ಲ ಸಮುದಾಯಗಳಿಗೆ ಗೌರವ-ಆದರ ನೀಡುತ್ತಾ, ಸರ್ವ ಸಮಾಜದ ಒಳಿತಿಗಾಗಿ ಶ್ರಮಿಸಲಾಗುತ್ತಿದೆ. ಎಲ್ಲ ಸಮುದಾಯಗಳು ಮುಂದೆ ಬರುವಂತೆ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ. ಕ್ಷೇತ್ರದ ಪ್ರಗತಿಪರ ಕಾರ್ಯಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವತೋಮುಖ ಏಳ್ಗೆಗೆ ದುಡಿಯಲಾಗುತ್ತಿದೆ ಎಂದು ಹೇಳಿದರು.
ಶಿಕ್ಷಣ, ನೀರಾವರಿ, ರಸ್ತೆ, ಕುಡಿಯುವ ನೀರು ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುತ್ತಿದೆ. ಅದರಲ್ಲೂ ಶಿಕ್ಷಣದ ನಂತರ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ನೀರಾವರಿ ಯೋಜನೆಯಿಂದ ಮತಕ್ಷೇತ್ರವನ್ನು ಸಂಪೂರ್ಣ ಹಸಿರುಮಯವನ್ನಾಗಿ ರೂಪಿಸುವ ಯೋಜನೆ ನೆರವೇರಲಿದೆ ಎಂದು ಹೇಳಿದರು.
ಕಮಲದಿನ್ನಿ ಗ್ರಾಮಸ್ಥರಿಗೆ ಅಗತ್ಯವಿರುವ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ತಕ್ಷಣವೇ 7.5 ಹೆಚ್‍ಪಿ ಮೋಟಾರ ದೊರಕಿಸಿಕೊಟ್ಟ ಅವರು, ಇದರಿಂದ ಕುಡಿಯುವ ನೀರಿನ ಸಮಸ್ಯೆವು ಪರಿಹಾರವಾದಂತಾಗಿದೆ. ತಿಂಗಳೊಳಗಾಗಿ 50 ಸಾರ್ವಜನಿಕ ಶೌಚಾಲಯಗಳನ್ನು ಕಲ್ಪಿಸಿಕೊಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ತಮ್ಮಣ್ಣಾ ಹುಚ್ಚರೆಡ್ಡಿ, ಬಸಪ್ಪ ಸಂಕನ್ನವರ, ಹಣಮಂತ ತೇರದಾಳ, ಸಂತೋಷ ಸೋನವಾಲ್ಕರ, ಮಲ್ಲಿಕಾರ್ಜುನ ಕಬ್ಬೂರ, ತಾಪಂ ಸದಸ್ಯ ಹಣಮಂತ ಡೊಂಬರ, ಮುನ್ಯಾಳ ಗ್ರಾಪಂ ಅಧ್ಯಕ್ಷ ಹಣಮಂತ ತಳವಾರ, ಲಕ್ಷ್ಮಣ ಹುಚ್ಚರೆಡ್ಡಿ, ಬಸು ಬಡಗನ್ನವರ, ಮುದಕಪ್ಪ ಕೆಂಚರೆಡ್ಡಿ, ಸಂಗಪ್ಪ ಸೂರನ್ನವರ, ಸುರೇಶ ನಾವಿ ಮುಂತಾದವರು ಉಪಸ್ಥಿತರಿದ್ದರು.