ಗೋಕಾಕ : ಗೋಕಾಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ : ಶ್ರೀಮತಿ ಗೀತಾ ಕವಲಗಿ

ಗೋಕಾಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ : ಶ್ರೀಮತಿ ಗೀತಾ ಕವಲಗಿ
ಗೋಕಾಕ ಆ 24 : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಗೋಕಾಕ ತಾಲೂಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಬೆಳಗಾವಿ ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ, ಮತದಾರರ ನೊಂದಣಾಧಿಕಾರಿ ಶ್ರೀಮತಿ ಗೀತಾ ಕವಲಗಿ ಹೇಳಿದರು.
ಸೋಮವಾರದಂದು ನಗರದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿಂದು ಮತದಾರರ ಪಟ್ಟಿ ವಿಶೆಷ ಸಮಗ್ರ ಪರಿಷ್ಕರಣೆ- 2026ರ ಸಂಬಂಧ ಗೋಕಾಕ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸುವ ಕುರಿತಂತೆ ಮಾನ್ಯತೆ ಪಡೆದ ನೊಂದಾಯಿತ ರಾಜಕೀತ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೋಕಾಕ ವಿಧಾನಸಭಾ ಕ್ಷೇತ್ರದ ಮತದಾರರ ನೊಂದಣಾಧಿಕಾರಿ, ಸಹಾಯಕ ನೊಂದಣಾಧಿಕಾರಿ, ತಹಶೀಲ್ದಾರ್ ಕಚೇರಿಗಳು ಹಾಗೂ ಮತಗಟ್ಟೆಗಳಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಚುರ ಪಡಿಸಲಾಗಿದ್ದು, ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದೆಯೇ, ಇಲ್ಲವೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲು ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಬಿ.ಎಲ್.ಎ-2 ರವರ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ತಾಲೂಕಿನಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 30ರಿಂದ ಆಗಸ್ಟ್ 17ರವರೆಗೆ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಿ ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಸ್ವೀಕರಿಸಿ ಅವುಗಳನ್ನು ಗಣಕೀಕರಣಗೊಳಿಸಲಾಗಿದೆ. ಗೋಕಾಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 297 ಮತಗಟ್ಟೆಗಳಿದ್ದು, ಕ್ಷೇತ್ರದಲ್ಲಿ ಒಟ್ಟು 2,60,387-ಮತದಾರರಿದ್ದು, ಈ ಪೈಕಿ 2,21,213 ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದರು. ಗೈರು ಹಾಜರಿ, ಸ್ಥಳಾಂತರ, ಮರಣ ಹೊಂದಿರುವ ಹಾಗೂ ಎರಡು ಕಡೆ ನೋಂದಣಿಯಾಗಿರುವ ಹಾಗೂ ಇತರೆ ಸೇರಿದಂತೆ ಒಟ್ಟು 39,174 ಮತದಾರರನ್ನು ಗುರುತಿಸಲಾಗಿದೆ. ಇವರಲ್ಲಿ 1281 ಗೈರು ಹಾಜರಿ, 21,874 ಸ್ಥಳಾಂತರ, 10,929 ಮರಣ ಹೊಂದಿದವರು, 5088 ಎರಡು ಕಡೆ ನೊಂದಣಿಯಾಗಿರುವವರು, ಇತರೆ 2 ಸೇರಿದ್ದಾರೆ ಎಂದು ಹೇಳಿದರು.
ಗೋಕಾಕ ಮತಕ್ಷೇತ್ರದಲ್ಲಿ ಒಟ್ಟು 9024 ಮತದಾರಲ್ಲಿ ವೈಪರೀತ್ಯಗಳು ಕಂಡು ಬಂದಿದ್ದು, ಈ ಎಲ್ಲಾ ಜನರಿಗೆ ಬಿಎಲ್ಓಗಳ ಮೂಲಕ ನೋಟಿಸ್ ನೀಡಲಾಗುವುದು.
ನೋಟಿಸ್ ಬಂದ ಮತದಾರರು ಸ್ವತ ತಾವೇ ತಹಶೀಲ್ದಾರ ಕಛೇರಿ, ಗ್ರಾಮೀಣ ಭಾಗದವರು ಆಯಾ ಪಂಚಾಯಿತಿಯಲ್ಲಿ ಖುದ್ದು ಹಾಜರಾಗಿ ಚುನಾವಣಾ ಆಯೋಗ ನಮೂದಿಸಿದಂತೆ ಜನ್ಮ ದಿನಾಂಕ ಪ್ರಮಾಣ ಪತ್ರ , ಪಿಂಚಣಿ ಪ್ರಮಾಣ ಪತ್ರ, ಫಾಸ್ ಪೋರ್ಟ, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರವನ್ನು ಆಧಾರ ಕಾರ್ಡನೊಂದಿಗೆ ಸಹಾಯಕ ಮತದಾರರ ನೊಂದಣಾಧಿಕಾರಿಗೆ ಒಪ್ಪಿಸಬೇಕು.
ಮತದಾರರು 1987 ರಿಂದ 2024 ರ ಒಳಗೆ ಜನಿಸಿದರೆ. ತನ್ನ ಸ್ವತಃ ದಾಖಲೆ ಮತ್ತು ತಮ್ಮ ಪಾಲಕ,ಪೋಷಕರ ದಾಖಲೆ ನೀಡಬೇಕು. ಆಧಾರ ಜೊತೆಗೆ 11 ದಾಖಲೆಗಳಲ್ಲಿ ಒಂದನ್ನು ಮತದಾರ ಕಡ್ಡಾಯವಾಗಿ ಕೊಡಬೇಕು. ಆಪೇಕ್ಷೆಗಳನ್ನು ಸಲ್ಲಿಸಲು ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶವಿದ್ದು,ನೋಟಿಸ್ ಬಂದ ಮತದಾರರಿಗೆ ಸಹಾಯಕ ಚುನಾವಣಾ ನೊಂದಣಾಧಿಕಾರಿಗಳು ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಲಿದ್ದಾರೆ ಎಂದು ಮತದಾರರ ನೊಂದಣಾಧಿಕಾರಿ ಶ್ರೀಮತಿ ಗೀತಾ ಕವಲಗಿ ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ಮತದಾರರ ನೊಂದಣಾಧಿಕಾರಿ ಹಾಗೂ ತಹಶೀಲ್ದಾರ ಡಾ.ಮೋಹನ ಭಸ್ಮೆ, ಎಇಇ ಎಂ.ಎಚ್.ಗಜಾಕೋಶ, ಮುಖ್ಯಾಧಿಕಾರಿ ಎಸ.ಎಂ.ಹಿರೇಮಠ, ಸಿಡಿಪಿಓ ಡಿ.ಎಸ್.ಕೂಡವಕ್ಕಲಿಗ, ಹೆಸ್ಕಾಂ ಎಇಇ ಬಾಗಡಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಡಾ.ಮಹಾಂತೇಶ ಕಡಾಡಿ, ರಾಜೇಂದ್ರ ಗೌಡಪ್ಪಗೋಳ, ಜಾಕೀರ ನದಾಫ, ನ್ಯಾಯವಾದಿ ಪೀರಜಾದೆ ಸಭೆಯಲ್ಲಿ ಉಪಸ್ಥಿತರಿದ್ದರು.
