ಗೋಕಾಕ:ಸಮ್ಮೇಳನದ ಸರ್ವಾಧ್ಯಕ್ಷರಿಗೆ ಆಹ್ವಾನ

ಸಮ್ಮೇಳನದ ಸರ್ವಾಧ್ಯಕ್ಷರಿಗೆ ಆಹ್ವಾನ
ಗೋಕಾಕ ಡಿ 26 : ಸಮಾಜದಲ್ಲಿ ಬದುಕು ನಡೆಸಲು ವಿವಿಧ ವೃತ್ತಿ ಅವಲಂಬಿಸುವುದು ಸಹಜ. ಕನ್ನಡ ನಾಡು, ನುಡಿ, ಜನಪದದ ಬಗ್ಗೆ ಬಾಲ್ಯದಿಂದಲೂ ಅಭಿಮಾನ ಹೊಂದಿದ್ದು, ವೃತ್ತಿ ಜೊತೆಗೆ ಕಲೆ, ಜನಪದ,ಸಾಹಿತ್ಯ ಅಭಿರುಚಿ ಬೆಳೆಸಿಕೊಂಡ ನನಗೆ ಗೋಕಾಕ ತಾಲ್ಲೂಕು ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಕೊಣ್ಣೂರ-ಶಿವಾಪೂರದ ಹಿರಿಯ ಜಾನಪದ ಬೈಲಾಟ ಕಲಾವಿದ ಹಾಗೂ ಸಾಹಿತಿ ಬಸವಣ್ಣೆಪ್ಪ ಪರಪ್ಪ ಕಬಾಡಗಿ ಹೇಳಿದರು.
ಗೋಕಾಕ ತಾಲ್ಲೂಕು ಕನ್ನಡ ಜನಪದ ಪರಿಷತ್ ವತಿಯಿಂದ ತಾಲ್ಲೂಕಿನ ಹಡಗಿನಾಳ ಗ್ರಾಮದಲ್ಲಿ ಜ.4 ರಂದು ನಡೆಯುವ ಪ್ರಥಮ ಕನ್ನಡ ಜಾನಪದ ಸಮ್ಮೇಳನಕ್ಕೆ ಗುರುವಾರದಂದು ಅಧಿಕೃತ ಆಹ್ವಾನ ಸ್ವೀಕರಿಸಿ ಅವರು ಮಾತನಾಡಿದರು.
‘ಪ್ರತಿಯೊಬ್ಬರೂ ತಮ್ಮ ಜೀವಿತದ ಅವಧಿಯಲ್ಲಿ ವ್ಯೆಯಕ್ತಿಕ ಜವಾಬ್ದಾರಿ ಜೊತೆಗೆ ಸಮಾಜಕ್ಕಾಗಿ ಏನು ಕೊಡುಗೆ ನೀಡಿದ್ದೇನೆ ಎನ್ನುವ ಬಗ್ಗೆ ಪ್ರಶ್ನಿಸಿಕೊಳ್ಳಬೇಕು. ಸ್ವಾರ್ಥ ಮನೋಭಾವದಿಂದ ಹೊರಬಂದು ಕಿಂಚಿತ್ತಾದರೂ ಸಮಾಜಕ್ಕಾಗಿ ಕೈಲಾದ ಸೇವೆ ಮಾಡುವ ಮನಃಸ್ಥಿತಿ ಹೊಂದಬೇಕು. ನಾಡು, ನುಡಿ, ಕಲೆ, ಸಾಹಿತ್ಯದ ವಿಚಾರಗಳು ಬಂದಾಗ ಎಲ್ಲರೂ ಒಗ್ಗಟ್ಟಾಗಿ ಹೋರಾಡಲು ಶ್ರಮಿಸೋಣ’ ಎಂದ ಅವರು ಎಲೆಮರೆಯ ಕಾಯಿಯಂತಿದ್ದ ಒಬ್ಬ ಗ್ರಾಮೀಣ ಪ್ರದೇಶದ ಬೈಲಾಟ ಮಾಸ್ತರನನ್ನು ಗುರುತಿಸಿ ಬಹುದೊಡ್ಡ ಗೌರವ ನೀಡಿದ ಗೋಕಾವಿಯ ಜನಪದರಿಗೆ ನಾನು ಎಂದಿಗೂ ಋಣಿಯಾಗಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರಿಷತ್ ಜಿಲ್ಲಾಧ್ಯಕ್ಷ ಮೋಹನ ಗುಂಡ್ಲೂರ, ತಾಲೂಕಾಧ್ಯಕ್ಷ ಜಯಾನಂದ ಮಾದರ, ತಾಲೂಕಾ ಗೌರವಾಧ್ಯಕ್ಷ ಈಶ್ವರಚಂದ್ರ ಬೆಟಗೇರಿ,ಡಾ.ಲಕ್ಷ್ಮಣ ಚೌರಿ, ಕಾರ್ಯದರ್ಶಿ ಆನಂದ ಸೋರಗಾವಿ ಸ್ಮರಣ ಸಂಚಿಕೆ ಸಂಪಾದಕ ಸಾದಿಕ ಹಲ್ಯಾಳ, ಸಾಹಿತಿ ಈಶ್ವರ ಮಮದಾಪೂರ ವಿದ್ಯಾ ರೆಡ್ಡಿ ಡಾ.ಅರುಣ ಸವತಿಕಾಯಿ,ಕನ್ನಡ ಪರ ಹೋರಾಟಗಾರ ಹನೀಫ್ ಸಾಬ್ ಸನದಿ ಇದ್ದರು.
