ಖಾನಾಪುರ:ಗೋಮಾರಿ ಕೆರೆಯಿಂದ 30 ಗ್ರಾಮಗಳ 8 ಸಾವಿರ ಹೆಕ್ಟರ್ ಕೃಷಿ ಜಮೀನುಗಳಿಗೆ ಬೇಸಿಗೆಯಲ್ಲಿ ಅನುಕೂಲವಾಗಲಿದೆ : ಶಾಸಕ ಅರವಿಂದ
ಗೋಮಾರಿ ಕೆರೆಯಿಂದ 30 ಗ್ರಾಮಗಳ 8 ಸಾವಿರ ಹೆಕ್ಟರ್ ಕೃಷಿ ಜಮೀನುಗಳಿಗೆ ಬೇಸಿಗೆಯಲ್ಲಿ ಅನುಕೂಲವಾಗಲಿದೆ : ಶಾಸಕ ಅರವಿಂದ
ಖಾನಾಪುರ ನ 12: ತಾಲೂಕಿನ ಬೀಡಿ ಹೋಬಳಿಯ ಘಷ್ಟೋಳ್ಳಿ ಬಳಿಯ ಗೋಮಾರಿ ಕೆರೆಗೆ ತಟ್ಟೀ ಹಳ್ಳದಿಂದ ನೀರು ಹರಿಸುವ ಕಾಮಗಾರಿಯಿಂದಾಗಿ ಕೆರೆ ಮೈದುಂಬಿದೆ. ಇದರಿಂದ ತಾಲೂಕಿನ ಕಕ್ಕೇರಿ, ಕೇರವಾಡ, ಲಿಂಗನಮಠ ಮತ್ತು ಭುರಣಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 30 ಗ್ರಾಮಗಳ 8 ಸಾವಿರ ಹೆಕ್ಟರ್ ಕೃಷಿ ಜಮೀನುಗಳಿಗೆ ಬೇಸಿಗೆಯಲ್ಲಿ ಅನುಕೂಲವಾಗಲಿದೆ ಎಂದು ಶಾಸಕ ಅರವಿಂದ ಪಾಟೀಲ ಅಭಿಪ್ರಾಯ ಪಟ್ಟರು.
ಗೋಮಾರಿ ಕೆರೆಗೆ ಗಂಗಾಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಕಾಮಗಾರಿಯನ್ನು 2000ರಲ್ಲಿ ಆಗಿನ ಶಾಸಕ ಅಶೋಕ ಪಾಟೀಲ ಕೈಗೊಳ್ಳಲು ಮುಂದಾಗಿದ್ದರು. ಆದರೆ ಕಾರಣಾಂತರದಿಂದ ಕಾಮಗಾರಿಗೆ ಅನುದಾನ ಸಿಕ್ಕಿರಲಿಲ್ಲ. ತಾವು ಶಾಸಕರಾದ ಮೇಲೂ ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ತಮ್ಮ ಕಾರ್ಯಕರ್ತರ ಪಡೆಯೊಂದಿಗೆ ಚರ್ಚಿಸಿ ಸ್ಥಳೀಯರ ದೇಣಿಗೆ ಮತ್ತು ಸ್ವಂತ ವೆಚ್ಚದಲ್ಲಿ ಕೆರೆಗೆ ನೀರು ಹರಿಸಿರುವುದಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಂ ಚಲವಾದಿ, ತಾಲೂಕಿನಲ್ಲಿ 367 ಕೆರೆಗಳಿದ್ದು, ನಿರ್ವಹಣೆಯ ಕೊರತೆ ಮತ್ತು ಇಚ್ಛಾಶಕ್ತಿಯ ಅಭಾವದಿಂದ ಬಹುತೇಕ ಕೆರೆಗಳು ಬತ್ತಿವೆ. ಕೆರೆಗಳಲ್ಲಿ ನೀರು ಸಂಗ್ರಹವಾದರೆ ರೈತಾಪಿ ಜನರು, ಜಾನುವಾರುಗಳು ನೆಮ್ಮದಿ ಹೊಂದಬಹುದು. ಹೀಗಾಗಿ ನೀರಾವರಿ ಯೋಜನೆಗಳು, ಕೆರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳು ಆದ್ಯತೆ ನೀಡಬೇಕು ಎಂದರು.
ರೈತ ಮುಖಂಡ ಮಲ್ಲಿಕಾರ್ಜುನ ವಾಲಿ, ಅಶೋಕ ಯಮಕನಮರಡಿ, ದಶರಥ ಬನೋಶಿ ಮತ್ತಿತರರು ಮಾತನಾಡಿ ರೈತರ ಸಮಸ್ಯೆ ಮನಗಂಡು ಕೆರೆ ತುಂಬುಸಲು ಮುಂದಾದ ಶಾಸಕರ ಕ್ರಮವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಶಂಕರ ಗೂಳೇಕರ, ವಾಸು ತಿಪ್ಪಣ್ಣವರ, ಬಾಬು ಮಡಾಕರ, ಮಹೇಶ ಪಾಟೀಲ, ನಾಗೇಂದ್ರ ಚೌಗುಲಾ, ಯಶವಂತ ಕೋಡೊಳಿ, ರಾಜಶೇಖರ ಕಮ್ಮಾರ, ಎಂ.ಟಿ ಹೇರೆಕರ ಮತ್ತಿತರರು ಇದ್ದರು.