ಬೆಳಗಾವಿ:ಟಿಪ್ಪುವಿನ ಆಸ್ಥಾನದಲ್ಲಿ ಹಿಂದೂ ಪಂಡಿತರು, ಆಡಳಿತಗಾರರು ಇದ್ದದನ್ನು ನಾವು ಮರೆಯಬಾರದು : ಸಚಿವ ರಮೇಶ
ಟಿಪ್ಪುವಿನ ಆಸ್ಥಾನದಲ್ಲಿ ಹಿಂದೂ ಪಂಡಿತರು, ಆಡಳಿತಗಾರರು ಇದ್ದದನ್ನು ನಾವು ಮರೆಯಬಾರದು : ಸಚಿವ ರಮೇಶ
ಬೆಳಗಾವಿ ನ 10: ಪರ ವಿರೋಧ ಚರ್ಚೆ ನಡುವೆ ಟಿಪ್ಪು ಜಯಂತಿ ಯಶಸ್ವಿಯಾಗಿ ನಡೆದಿದೆ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು. ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಟಿಪ್ಪು ಜಯಂತಿ ಉದ್ಘಾಟಿಸಿ ಮಾತನಾಡಿ ದೇಶವಾಸಿಗಳಾದ ಎಲ್ಲರಿಗೂ ಸಮಾನವಾಗಿ ಭಾರತ ದೇಶ ಇದೆ. ಜಾತ್ಯಾತೀತ ರಾಷ್ಟ್ರದಲ್ಲಿ ನಾವು ಎಲ್ಲರನ್ನೂ ಗೌರವಿಸಿ ಎಲ್ಲವನ್ನು ಆಚರಿಸಬೇಕು. ಟಿಪ್ಪು ಮುಸ್ಲಿಂ ಆದರೂ ಆತನ ಜಯಂತಿ ಇಡೀ ದೇಶದ ಎಲ್ಲ ಜಾತಿ ಧರ್ಮೀಯರು ಕೂಡಿ ಆಚರಿಸುವಂತಹದ್ದು, ಟಿಪ್ಪು ರಾಜನ ಆಸ್ಥಾನದಲ್ಲಿ ಹಿಂದೂ ಪಂಡಿತರು, ಆಡಳಿತಗಾರರು ಇದ್ದರು ಎಂಬುವುದು ಗಮನಾರ್ಹ. ಜಾತಿ ಧರ್ಮ ಸಂಘರ್ಷ ನಾವೆಲ್ಲ ಮಾಡಬಾರದು. ಮಹಾತ್ಮಾ ಗಾಂಧಿ ಆಶಯದ ರಾಮರಾಜ್ಯದಲ್ಲಿ ಉಗ್ರವಾದಕ್ಕೆ ಅವಕಾಶವಿಲ್ಲ. ಶಾಂತಿ ಸೌಹಾರ್ಧತೆ ನಮಗೆಲ್ಲ ಮುಖ್ಯ ಎಂದರು. ಸರಕಾರದ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಲಘುವಾಗಿ ಮಾತನಾಡಿದ ಶಾಸಕ (ಸಂಜಯ ಪಾಟೀಲ) ಅವರಿಗೆ ಜನರೇ ಬುದ್ಧಿ ಕಲಿಸುತ್ತಾರೆ ಎಂದರು.
ಮುಖ್ಯ ಉಪನ್ಯಾಸಕ ಐ. ಎಚ್. ತಿಮ್ಮಾಪೂರ ಮಾತನಾಡಿ ಭಾರತೀಯ ಹಾಗೂ ಕರ್ನಾಟಕದ ಇತಿಹಾಸಕಾರರು ಟಿಪ್ಪುವನ್ನು ಬಹಳ ಹೊಗಳಿ ಬರೆದಿದ್ದಾರೆ. ಆದರೆ ಆತನ ವಿರೋಧಿಗಳಾದ ಬ್ರಿಟಿಷ್ ಇತಿಹಾಸಕಾರರು ಟಿಪ್ಪು ಸುಲ್ತಾನನ ಬಗ್ಗೆ ಅವಹೇಳನ ಮಾಡಿದ್ದಾರೆ. ಬ್ರಿಟಿಷ್ ಇತಿಹಾಸ ಓದಿ ಇಂದು ಟಿಪ್ಪು ಜಯಂತಿ ವಿರೋಧಿಸಲಾಗುತ್ತಿದೆ. ಟಿಪ್ಪು ಸುಲ್ತಾನ ಮೈಸೂರು ಹುಲಿಯಲ್ಲ, ಆತ ಇಂಡಿಯಾ ಟೈಗರ್ ಆಗಿದ್ದ. ಆಂಗ್ಲರ ವಿರುದ್ಧ 4 ಯುದ್ಧಗಳನ್ನು ಟಿಪ್ಪು ಭಾಗವಹಿಸಿದ್ದ. ತನ್ನ ತಂದೆ ಹೈದರ ಅಲಿ ಜತೆಗೆ ಟಿಪ್ಪು ಬಾಲ್ಯದಿಂದಲೇ ಬ್ರಿಟಿಷ್ ರ ವಿರುದ್ಧ ಹೋರಾಡಿದ್ದ. ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತು ದೇಶಿಯ ರಾಜರನ್ನು ಒಂದುಗೂಡಿಸಲು ಸತತ ಪ್ರಯತ್ನ ಮಾಡಿದ್ದರು ಟಿಪ್ಪು. ಸಿಂಹಾಸನ ಏರದೆಯೇ ಯುದ್ಧ ಮಾಡಿ ಗೆದ್ದ ಮೇಲೆ ಸಿಂಹಾಸನ ಏರಿದವನು ಟಿಪ್ಪು ಸುಲ್ತಾನ ಎಂದು ಇತಿಹಾಸವನ್ನು ತಿಮ್ಮಾಪೂರ ಉಲ್ಲೇಖಿಸಿದರು. ಕೊಡವರು ಬ್ರಿಟೀಷರಿಗೆ ಟೆಂಟ್ ಹಾಕಲು ಸಹಾಯ ಮಾಡಿದ್ದರಿಂದ ಟಿಪ್ಪು ಕೊಡವರ ವಿರುದ್ಧ ವ್ಯಗ್ಯವಾಗಿದ್ದ. ಸುಲ್ತಾನನಿಗೆ ಸಹಾಯ ಮಾಡದೇ ಬ್ರಿಟೀಷರ ಪರ ವಹಿಸಿದ್ದ ಕೊಡವರನ್ನು ಟಿಪ್ಪು ಸದೆ ಬಡೆದಿದ್ದನು. ಎಲ್ಲ ಅಲ್ಪಸಂಖ್ಯಾತರ ಇತಿಹಾಸ ಅಳಸಿ ಬರೀ ಬಲಪಂಥೀಯ ವಿಚಾರಧಾರೆ ಜಾರಿಗೆ ತರುವ ಯತ್ನ ದೇಶದಲ್ಲಿ ನಡೆದಿದೆ ಎಂದರು. ತನ್ನ ಎದುರು ಸೋತವರು ಬದುಕಿ ಬಾಳಲಿ ಎಂದು ಗೆದ್ದ ಪ್ರದೇಶವನ್ನು ಮರಳಿ ಕೊಟ್ಟ ರಾಜ ಟಿಪ್ಪು. ಬ್ರಿಟೀಷರಿಗೆ ತೆರಿಗೆ ತುಂಬಲು ಆಗದಾದಾಗ ತನ್ನ ಇಬ್ಬರು ಮಕ್ಕಳನ್ನು ಟಿಪ್ಪು ಒತ್ತೆ ಇಟ್ಟಿದ್ದ. ದಕ್ಷ ಆಡಳಿತಗಾರ, ಧರ್ಮ ಸಂಹಿಷ್ಣು, ಸ್ವಾತಂತ್ರ್ಯ ಪ್ರೇಮಿ ಆಗಿದ್ದ ಎಂದರು.
ಸರಕಾರದ ಹುಮ್ಮಸ್ಸಿನ ಹಜರತ್ ಟಿಪ್ಪು ಜಯಂತಿ ಬೆಳಗಾವಿಯ ಕುಮಾರಗಂಧರ್ವ ರಂಗಮಂದಿರದಲ್ಲಿ ನಡೆಯಿತು. ಜಿಲ್ಲಾಡಳಿತದಿಂದ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಬೆಳಿಗ್ಗೆ 10:30ಗೆ ಆಯೋಜಿಸಲಾಗಿದ್ದ ಸರಕಾರಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ, ಸಚಿವ ರಮೇಶ ಜಾರಕಿಹೊಳಿ, ಎಸ್ಪಿ ಡಾ. ರವಿಕಾಂತೇಗೌಡ, ಸಿಇಓ ಡಾ. ರಾಮಚಂದ್ರನ್, ಶಾಸಕ ಫಿರೋಜ್ ಸೇಠ್ ಮುಂಚಿತವಾಗಿಯೇ ಆಗಮಿಸಿ ಕುಳಿತಿದ್ದರೂ ಪ್ರೇಕ್ಷಕರ ಸಂಖ್ಯೆ 50 ರ ಮೇಲೆ ದಾಟದೇ ಸುಮ್ಮನೆ ಕುಳಿತುಕೊಳ್ಳಬೇಕಾಯಿತು. ನಂತರ 11ರ ಸುಮಾರಿಗೆ ವೇದಿಕೆಯಲ್ಲಿ ಕಾರ್ಯಕ್ರಮದ ಸಭಾಂಗಣದ ಕಾಲುಭಾಗ ತುಂಬಿದ್ದ ಸಭೆಯಲ್ಲಿ ಅಧಿಕಾರಿಗಳು ಮತ್ತು ಮಾಧ್ಯಮದವರು ಹಾಗೂ ಕೆಲ ರಾಜಕೀಯ ಬೆಂಬಲಿಗರು ಸೇರಿದ್ದರು. ನಂತರ ಕೆಲ ಸಂಖ್ಯೆಯ ಜನತೆ ಸೇರಿಬಂದು ಟಿಪ್ಪು ಉಪನ್ಯಾಸಕ್ಕೆ ಕಿವಿಗೊಟ್ಟರು.
ಮುಫ್ತಿ ಮಂಜುರ್ ಅಹ್ಮದ್ ಟಿಪ್ಪು ಜೀವನ ಚರಿತ್ರೆ ತೆರೆದಿಟ್ಟರು. ಜತೆಗೆ ಪ್ರಾಧ್ಯಾಪಕ ಎಚ್. ಐ. ತಿಮ್ಮಾಪೂರ ಅವರಿಂದ ಟಿಪ್ಪು ಕುರಿತು ಉಪನ್ಯಾಸ ನೀಡಿದರು
ಟಿಪ್ಪು ಹುಟ್ಟಿದ ದೇವನಹಳ್ಳಿಯವರು ಬೆಳಗಾವಿ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಹಾಗೂ ಆತ ಆಡಳಿತ ಆಳ್ವಿಕೆ ನಡೆಸಿ ಕದನ ನಡೆಸಿದ ಮಂಡ್ಯದ ಎಸ್ಪಿ ಡಾ. ಬಿ. ಆರ್. ರವಿಕಾಂತೇಗೌಡ ವೇದಿಕೆಯಲ್ಲಿ ವಿಶೇಷ ಗಮನ ಸೆಳೆದರು.