ಗೋಕಾಕ:ಪೋಟೋಗ್ರಾಫೀಯಲ್ಲಿ ಹೊಸ ತಂತ್ರಜ್ಞಾನ ಬಳಸಿ ಈಗ ವೃತ್ತಿಗೆ ಚೈತನ್ಯ ತಂದುಕೊಳ್ಳುವ ಅಗತ್ಯವಿದೆ : ರಾಹುಲ್ ಜಾರಕಿಹೊಳಿ

ಪೋಟೋಗ್ರಾಫೀಯಲ್ಲಿ ಹೊಸ ತಂತ್ರಜ್ಞಾನ ಬಳಸಿ ಈಗ ವೃತ್ತಿಗೆ ಚೈತನ್ಯ ತಂದುಕೊಳ್ಳುವ ಅಗತ್ಯವಿದೆ : ರಾಹುಲ್ ಜಾರಕಿಹೊಳಿ
ಗೋಕಾಕ ಆ 19 : ಹಲವು ಸವಾಲುಗಳ ನಡುವೆ ಛಾಯಾಗ್ರಾಹಕರು,ವಿಡಿಯೋಗ್ರಾಫರ್‌ಗಳು ವೃತ್ತಿ ಧರ್ಮದ ಜತೆಗೆ ಪ್ರವೃತ್ತಿಗೆ ಆದ್ಯತೆ ನೀಡುತ್ತಿದ್ದು, ಹೊಸ ತಂತ್ರಜ್ಞಾನ ಬಳಸಿ ಈಗ ವೃತ್ತಿಗೆ ಚೈತನ್ಯ ತಂದುಕೊಳ್ಳುವ ಅಗತ್ಯವಿದೆ ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ನಗರದಲ್ಲಿ ಗೋಕಾಕ ತಾಲೂಕಾ ವೃತ್ತಿನಿರತ ಛಾಯಾಗ್ರಾಹಕರ ಸಂಘ ಹಾಗೂ ಮೂಡಲಗಿ ತಾಲೂಕಾ ವೃತ್ತಿನಿರತ ಛಾಯಾಗ್ರಾಹಕ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ಛಾಯಾಗ್ರಹಣ ಮಾಡುವ ಮೂಲಕ ಬಹಳಷ್ಟು ತೊಂದರೆಯಿಂದ ವೃತ್ತಿ ಧರ್ಮ ಕಾಯ್ದುಕೊಳ್ಳುತ್ತಿರುವ ಛಾಯಾಗ್ರಾಹಕರು ಎಲ್ಲರ ಕಾರ್ಯಕ್ರಮಗಳಲ್ಲಿ ಆನಂದದ ಕ್ಷಣಗಳಿಗೆ ಸಾಕ್ಷಿಯಾಗುತ್ತಿದ್ದಾರೆ.
ಎಲ್ಲ ವೃತ್ತಿಯವರಿಗೂ ಒಂದು ಸಂಘಟನೆ ಬೇಕು. ಸಂಘಟಿತ ಹೋರಾಟದಿಂದ ಎಲ್ಲವನ್ನೂ ಪಡೆಯಲು ಸಾಧ್ಯ. ಛಾಯಾಗ್ರಾಹಕರು ಕಲಾತ್ಮಕ ವೃತ್ತಿ ಹಾಗೂ ಪ್ರವೃತ್ತಿಯವರು. ಕಲೆಗೆ ಯಾವಾಗಲೂ ಬೆಲೆ ಇದೆ ಎಂದರು.
ಸಂಘಟನೆಯ ಜಿಲ್ಲಾಧ್ಯಕ್ಷ ಲಕ್ಷ್ಮಣ ಯಮಕನಮರಡಿ ಮಾತನಾಡಿ ಜಿಲ್ಲೆಯ ಎಲ್ಲಾ ಛಾಯಾಗ್ರಾಹಕರು ಸಂಘಟನೆ ಕೊಡುವ ಗುರುತಿನ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು. ಬೇರೆ ತಾಲೂಕಿಗೆ ಛಾಯಾಗ್ರಹಣ ಮಾಡಲು ಹೋದ ಸಂದರ್ಭದಲ್ಲಿ ಅಲ್ಲಿನ ಸಂಘದವರು ಐಡಿ ಕೇಳಿದರೆ ಅವರಿಗೆ ನಿಮ್ಮ ತಾಲೂಕಿನ ಸಂಘದ ವತಿಯಿಂದ ನೀಡಿರುವ ಐಡಿ ಕಾರ್ಡನ್ನು ತೋರಿಸಬೇಕು. ಇಲ್ಲದ ಪಕ್ಷದಲ್ಲಿ ಸಂಘದ ಅಲ್ಲಿನ ಸದಸ್ಯರು ಆ ಕಾರ್ಯಕ್ರಮದ ಫೋಟೋ ತಗೆಯಬೇಕಾಗುತ್ತದೆ ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಸಂಘ ನೀಡುವ ಐಡಿ ಕಾರ್ಡನ್ನು ಪಡೆದುಕೊಂಡು ಆರ್ಡರ್ ಮಾಡಲು ಬೇರೆ ಜಿಲ್ಲೆ ಅಥವಾ ತಾಲೂಕಿಗೆ ತೆರಳಬೇಕು ಎಂದು ಸಂಘದ ನಿಯಮಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ್ ಮುರಾರಿ, ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್, ರಾಮಣ್ಣ ಹುಕ್ಕೇರಿ, ರಾಜ್ಯ ಸಂಘದ ನಿರ್ದೇಶಕ ಮಲ್ಲಿಕಾರ್ಜುನ ಕೆ.ಆರ್, ಶಂಕರ ಹಾದಿಮನಿ,ರೋಹಿತ್ ಸಾಬನ್ನವರ, ಗುರುಸಿದ್ದಪ್ಪ ಪೂಜೇರಿ, ಸುರೇಶ್ ರಜಪೂತ, ಕಾಶಪ್ಪ ಕೋಳಿ, ಚಿದಾನಂದ ವಿರಕ್ತಮಠ, ಮಹೇಶ್ ಭಸ್ಮೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
