ಗೋಕಾಕ:ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಸಾಲ ವಸೂಲಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಏಕತಾ ಪೌಂಡೇಶನ್ ಪ್ರತಿಭಟನೆ

ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಸಾಲ ವಸೂಲಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಏಕತಾ ಪೌಂಡೇಶನ್ ಪ್ರತಿಭಟನೆ
ಗೋಕಾಕ ನ 19 :ಮೈಕ್ರೋ ಫೈನಾನ್ಸ್‌ಗಳಲ್ಲಿ ಮಹಿಳೆಯರು ಪಡೆದ ಸಾಲ ಮರುಪಾವತಿಗೆ ಸಮಯವಕಾಶ ಓದಗಿಸಿ, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಸಾಲ ವಸೂಲಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಇಲ್ಲಿನ ಏಕತಾ ಫೌಂಡೇಶನ್ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಅರ್ಪಿಸಿದರು.
ನಗರದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ಮಿತಿಮೀರಿ ಹೋಗಿದೆ. ಬಡ ಮಹಿಳಾ ಗುಂಪುಗಳಿಗೆ ಆರ್ಥಿಕ ನೆರವು ಒದಗಿಸುವ ಹೆಸರಿನಲ್ಲಿ ಸಾಲ ನೀಡಿ, ದೌರ್ಜನ್ಯ ಮತ್ತು ಬಲವಂತದ ಮೂಲಕ ಸಾಲ ವಸೂಲಿ ಮಾಡಲಾಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ಮೈಕ್ರೋ ಫೈನಾನ್ಸ್ ಕಂಪನಿಗಳ ದುಬಾರಿ ಬಡ್ಡಿ ದರಗಳನ್ನು ಸಹಿಸಿಕೊಂಡು, ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಿಂದ ಸಾಲ ಮರುಪಾವತಿ ಮಾಡುತ್ತಾ ಬಂದಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕೆಲಸ ಇಲ್ಲದೆ ಸಾಲ ಮರುಪಾವತಿ ಮಾಡುವುದು ಅಸಾಧ್ಯವಾಗಿದೆ. ಇಂತಹ ಸಮಯದಲ್ಲಿ ಒತ್ತಡ ಹಾಕುವ ಮೂಲಕ ಸಾಲ ವಸೂಲಿಗೆ ಮುಂದಾಗುತ್ತಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳು ತಮ್ಮ ಸಿಬ್ಬಂದಿ, ಸಹಾಯಕರ ಮೇಲೆ ಒತ್ತಡ ಹಾಕಿ ಸಾಲ ಪಡೆದ ಮಹಿಳೆಯರ ಮನೆಯ ಮುಂದೆ ಕೂಡುವಂತೆ ಮಾಡುತ್ತಾರೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು. ಫೈನಾನ್ಸ್ ಸಿಬ್ಬಂದಿ ಹಾಗೂ ಸಹಾಯಕರು ಸಾಲ ಪಡೆದ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಇದರಿಂದ ಸಾಕಷ್ಟು ಮಹಿಳೆಯರು ಮಾನಸಿಕ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಮೈಕ್ರೋ ಫೈನಾನ್ಸ್‌ಗಳಲ್ಲಿರುವ ಬಡ ಮಹಿಳೆಯರ ಎಲ್ಲ ಸಾಲವನ್ನು ಮರುಪಾವತಿ ಮಾಡಲು ಕಾಲಾವಕಾಶ ಒದಗಿಸಿಕೊಡಬೇಕು ಮತ್ತು ಸಾಲಗಾರ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳಾದ ಗ್ರಾಮ ಶಕ್ತಿ, ಎಸ್.ಕೆ.ಎಸ್, ಸಮಸ್ತ, ಬಂಧನ, ಐಡಿಎಫ್.ಸಿ ,ಆಕ್ಸಿಸ್, ಗ್ರಾಮೀಣ ಕೂಟ ಸೇರಿದಂತೆ ಅನೇಕ ಕಂಪನಿಗಳ ಸಾವ ವಸೂಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸಾಲ ಮರುಪಾವತಿಗೆ ಕಾಲಾವಕಾಶ ಒದಗಿಸಿಕೊಡಬೇಕು ಎಂದು ಪ್ರತಿಭಟನಾಕಾರರು ತಹಶೀಲ್ದಾರ ಅವರಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಅಜರ ಮುಜಾವರ , ಸದಾಂ ಸೌದಾಗರ, ಅಜೀಮ ಮುಜಾವರ, ತೌಫೀಕ ಜಮಾದರ, ಆಸೀಫ್ ಜಮಾದರ , ಗುಲಾಬ್ ಪುಲ್ತಾಂಬೆ, ಶಾರುಖ್ ಪುಲ್ತಾಂಬೆ, ಸಬೀಲ್ ಪಕಾಲಿ, ಆಸೀಫ್ ಮುಲ್ಲತಾರಿ, ಸುಭಾನಿ ಜಕಾತಿ, ಮದಾರಸಾಬ ಕಾಲೆಬಾಯಿ, ದಸ್ತಗಿರಿ ಕಾಲೆಬಾಯಿ, ಸೈಫ್ ಬೋಜಗಾರ, ರಾಜೇಸಾಬ ಪೀರಜಾದೆ, ಜರೀನಾ ಇನಾಮದಾರ, ಸಮೀರ ಮುಜಾವರ, ಅಬ್ದುಲ್ ಖಾದರ ಪಠಾಣ, ಆಸೀಪಾ ಪೀರಜಾದೆ, , ಆಸೀಫ ಸನದಿ, ಮಲೀಕ ಪಠಾಣ, ಹೈದರಲ್ಲಿ ಮುಲ್ಲಾ, ಯಾಸೀರ ಚಾಂದಖಾನ ಉಪಸ್ಥಿತರಿದ್ದರು.
