RNI NO. KARKAN/2006/27779|Saturday, April 4, 2026
You are here: Home » breaking news » ಬೆಳಗಾವಿ:ರೈಲ್ವೆ ಹೊಸ ಮೇಲ್ಸೆತುವೆ ಕಾಮಗಾರಿ ಆರು ತಿಂಗಳಲ್ಲಿ ಪೂರ್ಣ : ಸಂಸದ ಅಂಗಡಿ ಮಾಹಿತಿ

ಬೆಳಗಾವಿ:ರೈಲ್ವೆ ಹೊಸ ಮೇಲ್ಸೆತುವೆ ಕಾಮಗಾರಿ ಆರು ತಿಂಗಳಲ್ಲಿ ಪೂರ್ಣ : ಸಂಸದ ಅಂಗಡಿ ಮಾಹಿತಿ 

ರೈಲ್ವೆ ಹೊಸ ಮೇಲ್ಸೆತುವೆ ಕಾಮಗಾರಿ ಆರು ತಿಂಗಳಲ್ಲಿ ಪೂರ್ಣ : ಸಂಸದ ಅಂಗಡಿ ಮಾಹಿತಿ

ಬೆಳಗಾವಿ ಅ 3 : ಭವಿಷ್ಯದಲ್ಲಿ ಹೆಚ್ಚಿನ ರೈಲು ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತೆ ರೈಲು ನಿಲ್ದಾಣ ಸಮೀಪ ಖಾನಾಪುರ ರಸ್ತೆಯಲ್ಲಿರುವ ಹಳೆಯ ಸೇತುವೆಯನ್ನು ತೆರವುಗೊಳಿಸಿ ಹೊಸ ಮೇಲ್ಸೆತುವೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಹೊಸ ಸೇತುವೆಯ ಕಾಮಗಾರಿ ಏಪ್ರಿಲ್-2018 ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಸುರೇಶ ಅಂಗಡಿ ತಿಳಿಸಿದ್ದಾರೆ.

ಹೊಸ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾಡಾ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿದ ಅವರು,  ಖಾನಾಪುರ ರಸ್ತೆಯಲ್ಲಿರುವ ಹಳೆಯ ಸೇತುವೆಯನ್ನು ತೆರವುಗೊಳಿಸುವುದರಿಂದ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಸ್ವಲ್ಪಮಟ್ಟಿನ ತೊಂದರೆಯಾಗುವುದು ಸಹಜ. ಆದರೆ ಭವಿಷ್ಯದಲ್ಲಿ ಹೆಚ್ಚಿನ ರೈಲ್ವೆ ಸಂಪರ್ಕ ಪಡೆದುಕೊಳ್ಳುವ ಉದ್ದೇಶದಿಂದ ಈ ಸೇತುವೆ ನಿರ್ಮಾಣ ಅನಿವಾರ್ಯವಾಗಿದೆ.

ರೈಲ್ವೆ ಮಾರ್ಗ ವಿಸ್ತರಣೆಯಿಂದ ಮುಂಬರುವ ದಿನಗಳಲ್ಲಿ ಬೆಂಗಳೂರು ಹಾಗೂ ಪುಣೆಯ ನಡುವೆ ಹೆಚ್ಚಿನ ಸೌಕರ್ಯ ಲಭಿಸುವುದು. ಇದಲ್ಲದೇ ವೇಗದ ರೈಲುಗಳ ಸಂಚಾರದಿಂದ ಪ್ರಯಾಣದ ಅವಧಿ ಕೂಡ ತಗ್ಗಲಿದೆ ಎಂದು ವಿವರಿಸಿದರು.
ಸೇತುವೆ ನಿರ್ಮಾಣ ಕಾಮಗಾರಿ 6 ರಿಂದ 7  ತಿಂಗಳು ಅವಧಿಯಲ್ಲಿ ಉಂಟಾಗಬಹುದಾದ ಸಂಚಾರ ತೊಂದರೆಯನ್ನು ಪೊಲೀಸ್ ಹಾಗೂ ಮಹಾನಗರ ಪಾಲಿಕೆಯವರು ನಿಭಾಯಿಸಬೇಕು ಎಂದು ಸಂಸದ ಅಂಗಡಿ ಸೂಚನೆ ನೀಡಿದರು.

ಪಿಬಿ ರಸ್ತೆ ಸೇತುವೆ ಶೀಘ್ರ ಪೂರ್ಣ:

ಹಳೆ ಪಿ-ಬಿ ರಸ್ತೆಯಲ್ಲಿ ನಡೆದಿರುವ ಮೇಲ್ಸೆತುವೆ ನಿರ್ಮಾಣ ಕಾಮಗಾರಿಯನ್ನು ಇದೇ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ಈ ಸೇತುವೆ ಪೂರ್ಣಗೊಂಡರೆ ಸಂಚಾರ ದಟ್ಟಣೆ ತಗ್ಗಲಿದೆ.

ಸಭೆಯಲ್ಲಿ ಭಾಗವಹಿಸಿದ್ದ ದೀಪಕ ಜಮಖಂಡಿ ಮಾತನಾಡಿ, ಖಾನಾಪುರ ರಸ್ತೆಯಲ್ಲಿರುವ ಹಳೆಯ ಸೇತುವೆ ತೆರವುಗೊಳಿಸಿ ಹೊಸ ಸೇತುವೆ ನಿರ್ಮಾಣಕ್ಕೆ ತಮ್ಮ ವಿರೋಧವಿಲ್ಲ. ಆದರೆ ರಸ್ತೆ ಬಂದ್ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅದನ್ನು ತಪ್ಪಿಸಲು ಪರ್ಯಾಯ ಮಾರ್ಗ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡರು.

ಮುಂಬೈ ಮಾದರಿಯಲ್ಲಿ ರಸ್ತೆ ಬಂದ್ ಮಾಡದೇ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸೇತುವೆ ನಿರ್ಮಾಣ ಕಾಗಮಾರಿ ಕೈಗೊಳ್ಳುವ ಬಗ್ಗೆ ಪರಿಶೀಲಿಸಬೇಕು ಎಂದು ರಾಜೇಂದ್ರ ಹರಕುಣಿ ಸಲಹೆ ನೀಡಿದರು.

ಇವುಗಳಿಗೆ ಸ್ಪಂದಿಸಿದ ಸಂಸದರು ಒಟ್ಟಾರೆ ಕಾಲಮಿತಿಯಲ್ಲಿ ಸೇತುವೆ ನಿರ್ಮಾಣ ಆಗಬೇಕು.  ಈ ವೇಳೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು, ಪೊಲೀಸ್, ಮಹಾನಗರ ಪಾಲಿಕೆ ಹಾಗೂ ರೈಲ್ವೆ ಇಲಾಖೆಯಿಂದ ಅಭಿಪ್ರಾಯ ಪಡೆದು ಸಂಚಾರ ನಿಷೇಧಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೇಯರ್ ಸಂಜೋತಾ ಬಾಂದೇಕರ ಭರವಸೆ ನೀಡಿದರು. ಮಾಜಿ ಶಾಸಕ ಅಭಯ ಪಾಟೀಲ, ಡಿಸಿಪಿ ಅಮರನಾಥ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಬಿ.ದಾಮಣ್ಣವರ, ಪಾಲಿಕೆ ಎಂಜಿನಿಯರ್ ನಿಪ್ಪಾಣಿಕರ  ಇತರರು ಇದ್ದರು

Related posts: