ಮೂಡಲಗಿ: ಜ. 1 ರಂದು ಮೂಡಲಗಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡೇ ಮಾಡುತ್ತೇನೆ : ಶಾಸಕ ಬಾಲಚಂದ್ರ ಭರವಸೆ
ಜ. 1 ರಂದು ಮೂಡಲಗಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡೇ ಮಾಡುತ್ತೇನೆ : ಶಾಸಕ ಬಾಲಚಂದ್ರ ಭರವಸೆ
ಮೂಡಲಗಿ ಸೆ 11 : ಜ. 1 ರಂದು ಮೂಡಲಗಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡೇ ಮಾಡುತ್ತೇನೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ವಿನಾಕಾರಣ ಇಲ್ಲ ಸಲ್ಲದ ವದಂತಿಗಳನ್ನು ಹಬ್ಬಿಸಬೇಡಿ. ನಾನೇನೂ ಮೂಡಲಗಿ ತಾಲೂಕು ರಚೆನೆಗೆ ವಿರೋಧಿಯಲ್ಲ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ ನೀಡಿದರು.
ಕಳೆದ 4 ದಿನಗಳಿಂದ ಇಲ್ಲಿಯ ಕಲ್ಮೇಶ್ವರ ವೃತ್ತದಲ್ಲಿ ಮೂಡಲಗಿ ತಾಲೂಕು ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿ ಮಾತನಾಡಿದ ಅವರು, ಮೂಡಲಗಿ ತಾಲೂಕು ಆಗುವದರಲ್ಲಿ ಯಾರಿಗೂ ಅನುಮಾನ ಬೇಡ. ಇದು ನೂರಕ್ಕೆ ನೂರರಷ್ಟು ಸತ್ಯ ಎಂದು ಭರವಸೆ ನೀಡಿದರು.
ಕಳೆದ 20 ವರ್ಷಗಳಿಂದ ತಾಲೂಕು ಸ್ಥಾನ ಮಾನಕ್ಕೆ ಹೋರಾಟ ಮಾಡಿಕೊಂಡು ಬರುತ್ತಿರುವ ತಾಲೂಕು ಹೋರಾಟ ಸಮಿತಿಗೆ ಅಭಿನಂದಿಸಿದ ಅವರು, ನನ್ನನ್ನು ವಿರೋಧಿ ಎಂದು ಕೆಲವರು ಬಿಂಬಿಸುತ್ತಿರುವುದು ಸರಿಯಲ್ಲ. ಮೂಡಲಗಿ ತಾಲೂಕು ರಚನೆಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಾ ಸಾಕಷ್ಟು ಅಭಿವೃದ್ದಿ ಪರ ಕೆಲಸಗಳನ್ನು ಮಾಡಿಕೊಂಡು ಬಂದಿರುವೆ.ಮೂಡಲಗಿ ತಾಲೂಕಾ ಕೇಂದ್ರದಿಂದ ವಂಚಿತವಾಗಿರುವುದು ಕೆಲವು ತಾಂತ್ರಿಕ ಕಾರಣಗಳಿಂದ. ಅರಭಾಂವಿ ಕ್ಷೇತ್ರದ ಹೊಬಳ್ಳಿ ಮಟ್ಟದ ಗ್ರಾಮಗಳ ವಿಂಗಡಣೆಯ ಸಮಸ್ಯೆಯಿಂದ ಅಡಚಣೆಯಾಗಿದೆ.ಇದನ್ನು ಅರ್ಥ ಮಾಡಿಕೊಳ್ಳದ ರಾಜಕೀಯ ವಿರೋಧಿಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಸರಿಯಲ್ಲ ಎಂದರು.
ಅರಭಾಂವಿ ಕ್ಷೇತ್ರದ ಹಳ್ಳಿಗಳನ್ನು ಒಟ್ಟು ಗೂಡಿಸಿ ಮೂಡಲಗಿ ತಾಲೂಕ ಕೇಂದ್ರವಾಗಬೇಕೆಂಬುದು ನಮ್ಮ ನಿಲುವು. ಪಕ್ಕದ ರಾಯಬಾಗ ತಾಲೂಕಿನ ಕೆಲ ಗ್ರಾಮಗಳು ಸೇರ್ಪಡೆಯಾದರೆ ಆಡಳಿತಾತ್ಮಕವಾಗಿ ತೊಂದರೆಯಾಗುತ್ತದೆ. ಆದ್ದರಿಂದ ಜಿಲ್ಲಾ ಸಚಿವರ ಜೊತೆಗೆ ಮಾತುಕತೆ ಮಾಡಿ ತಾಲೂಕಾ ಹೋರಾಟ ಸಮಿತಿಯ ಸದಸ್ಯರೊಂದಿಗೆ ಸೆ.21 ರಿಂದ 25ರ ರವರೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಮಾತನಾಡಿ ಮೂಡಲಗಿ ತಾಲೂಕು ಮಾಡಿಸುವ ಜವಾಬ್ದಾರಿ ನನ್ನ ಮೇಲಿದೆ. ನನ್ನ ಮೇಲೆ ಮೊದಲಿನಂತೆ ವಿಶ್ವಾಸವಿಡಿ ಬೇರೆಯವರ ಉಪದೇಶ ನಮಗೆ ಬೇಕಿಲ್ಲ ಎಂದು ಹೇಳಿದರು.
ಸಂತೆ ಸ್ಥಗಿತಗೊಳಿಸುವುದಾಗಲಿ ಅಥವಾ ಉಗ್ರ ಹೋರಾಟ ಮಾಡುವುದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆ. ನಮ್ಮ ಹೋರಾಟ ಶಂತಿಯುತವಾಗಿರಲಿ ಎಂದು ಪ್ರತಿಭಟನಾಕಾರರಿಗೆ ಮನವಿ ಮಾಡಿದರು.
ಒಂದೇ ವಾರದಲ್ಲಿ ಗೋಕಾಕನಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಮೂಡಲಗಿಯಲ್ಲಿ ಕಾರ್ಯನಿರ್ವಹಿಸಲಿದೆ. ಈ ತಿಂಗಳ ಅಂತ್ಯದಲ್ಲಿ ಇಲ್ಲವೇ ಅಕ್ಟೋಬರ್ ಮೊದಲ ವಾರದಲ್ಲಿ ಉಪ ನೋಂದಣಿ ಕಚೇರಿಯನ್ನು ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಮೂಡಲಗಿಯಲ್ಲಿ ಪ್ರಾರಂಭಿಸಲಾಗುವದು ಎಂದು ಭರವಸೆ ನೀಡಿದರು.
ತಾಲೂಕಾ ಹೋರಾಟ ಸಮಿತಿಯ ಸಂಚಾಲಕ ಭಿಮಪ್ಪ ಗಡಾದ ಮಾತನಾಡಿ, ನಮ್ಮ ಶಾಸಕರು ಮೂಡಲಗಿ ತಾಲೂಕ ಮಾಡಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಬೆಂಬಲ ಸದಾ ಇದೆ. ನಮ್ಮ ಹೋರಾಟ ಶಾಂತ ರೀತಿಯಿಂದ ನಡೆಯುತ್ತಿದೆ. ಈ ಹೋರಾಟದ ವೇದಿಕೆಯನ್ನು ರಾಜಕೀಯವಾಗಿ ನಾವು ಎಂದೂ ಬಳಸಿಕೊಳ್ಲುವುದಿಲ್ಲ ಎಂದರು.