ಘಟಪ್ರಭಾ:ಯೋಧರ ಕುಟುಂಬದವರ ದುಃಖದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೆವೆ : ಸುಲ್ತಾನಸಾಬ ಕಬ್ಬೂರ
ಯೋಧರ ಕುಟುಂಬದವರ ದುಃಖದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೆವೆ : ಸುಲ್ತಾನಸಾಬ ಕಬ್ಬೂರ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಫೆ 20 :
ಸ್ಥಳೀಯ ಮುಸ್ಲಿಂ ಸಮಾಜ ಹಾಗೂ ವಿವಿಧ ಶಾಲೆಗಳ ಮಕ್ಕಳಿಂದ ಇತ್ತೀಚಿಗೆ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ 44 ಜನ ಭಾರತೀಯ ವೀರಯೋಧರ ಹತ್ಯೆಯನ್ನು ಖಂಡಿಸಿ ಪ್ರತಿಭಟನೆಯನ್ನು ಸ್ಥಳೀಯ ವೃತ್ಯುಂಜಯ ವೃತದಲ್ಲಿ ಬುಧವಾರ ಸಂಜೆ ಹಮ್ಮಿಕೊಳ್ಳಲಾಗಿತ್ತು.
ಮುಸ್ಲಿಂ ಸಮಾಜದ ಮುಖಂಡರಾದ ಸುಲ್ತಾನಸಾಬ ಕಬ್ಬೂರ ಮಾತನಾಡಿ, ಹುತಾತ್ಮ ಯೋಧರ ಕುಟುಂಬದವರ ದುಃಖದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೆವೆ. ಪಾಕಿಸ್ತಾನದ ನೀಚ ಕೃತ್ಯವನ್ನು ನಾವು ಖಂಡಿಸುತ್ತೇವೆ. ಪ್ರಧಾನಿ ಮೋದಿಯವರು ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರು ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಕೆ.ಆರ್.ಎಚ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಮಣ್ಣಾ ಹುಕ್ಕೇರಿ ಮಾತನಾಡಿ, ಯಾರು ಯಾರನ್ನು ಕೊಂದು ಸ್ವರ್ಗಕ್ಕೆ ಹೋಗಲು ಸಾಧ್ಯವಿಲ್ಲ. ಉಗ್ರರು ಮಾಡಿದ್ದು ಹೇಯ ಹಾಗೂ ಪೈಚಾಚಿಕ ಕೃತ್ಯವಾಗಿದೆ. ಕೇಂದ್ರ ಸರ್ಕಾರ ಕೂಡಲೆ ಅವರ ವಿರುದ್ಧ ಕಾರ್ಯಾಚರಣೆ ನಡೆಸಿ ಶೇಡು ತೀರಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ತಮ್ಮ ಶಾಲೆಗಳಿಂದ ಮೆರವಣಿಗೆ ಮೂಲಕ ಮೃತ್ಯುಂಜಯ ವೃತ್ತಕ್ಕೆ ಆಗಮಿಸಿದ ಮಕ್ಕಳು ಮೆರವಣಿಗೆಯ ಉದ್ದಕ್ಕೂ ಅಮರ್ ರಹೇ ಅಮರ್ ರಹೇ, ವೀರ ಜವಾನ ಅಮರ್ ರಹೇ, ಬೋಲೋ ಭಾರತ ಮಾತಾಕೀ ಜೈ, ಹಿಂದುಸ್ತಾನ ಜಿಂದಾಬಾದ, ಪಾಕಿಸ್ತಾನ ಮುರದಾಬಾದ ಗಳಂತಹ ಘೋಷಣೆಗಳನ್ನು ಕೂಗಿದರು.
ಹುತಾತ್ಮರಾದ ವೀರಯೋಧರ ಭಾವಚಿತ್ರಕ್ಕೆ ಗಣ್ಯರಿಂದ ಮಾಲಾರ್ಪಣೆ ನೆರವೇರಿಸಿ, ಒಂದು ನಿಮಿಷದ ಮೌನ ಆಚರಿಸಿ ಶೃದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಹಾಜಿ ಅಹ್ಮದಹುಸೇನ ಬಾಗವಾನ, ಅಸ್ಗರಲಿ ಮಕಾನದಾರ, ಡಾ.ಪ್ರಶಾಂತ ಬಬಲಾದಿ, ರಜಾಕ ಚೌಧರಿ, ದಾದು ಬೇಪಾರಿ, ಶೌಕತ ಕಬ್ಬೂರ, ಉಸ್ಮಾನ ನಾಶಿಪುಡಿ, ತನವೀರ ನಾಲಬಂದ, ಶಿಕ್ಷಕರಾದ ಡಿ.ಕೆ.ಜಮಾದಾರ, ಶಫೀಕ ಬಾಗಸಿರಾಜ, ಎನ್.ಎನ್.ಬಾಗೆ ಸೇರಿದಂತೆ ಮದನಿ ಮಿಯಾಂ ಉರ್ದು ಪ್ರೌಢ ಶಾಲೆ, ಕೆ.ಆರ್.ಎಚ್ ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರಿ ಉರ್ದು ಶಾಲೆ ಸೇರಿದಂತೆ ವಿವಿಧ ಶಾಲೆಗಳ ನೂರಾರು ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.