ಗೋಕಾಕ:ಗೋಕಾಕದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ : ವಿಪರೀತವಾಗಿರುವ ಕಾನೂನು ಬಾಹಿರ ಕೃತ್ಯಗಳು
ಗೋಕಾಕದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ : ವಿಪರೀತವಾಗಿರುವ ಕಾನೂನು ಬಾಹಿರ ಕೃತ್ಯಗಳು
ಗೋಕಾಕ ನ 23 : ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕಾನೂನು ಬಾಹಿರ ಕೃತ್ಯಗಳು ವಿಪರೀತವಾಗಿ ಹೆಚ್ಚುತ್ತಿದ್ದು ಹದಿ ಹರೆಯದ ಯುವಕರು ಚಾಕು-ಚೂರಿ ಇಟ್ಟುಕೊಂಡು ತಿರುಗಾಡುವ ಸಂಸ್ಕಂತಿ ಹೆಚ್ಚಾಗುತ್ತಿರುವದು ಅತ್ಯಂತ ದುರ್ದೈವದ ಸಂಗತಿಯಾಗಿದೆ.
ನಗರದಲ್ಲಿ ಪ್ರತಿದಿನ ಒಂದಿಲ್ಲ ಒಂದು ಯುವಕರ ಗುಂಪುಗಳ ಮಧ್ಯೆ ಹೊಡೆದಾಟಗಳು ನಡೆಯುತ್ತಲೇ ಇವೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೋಲೀಸ ಇಲಾಖೆ ತನಗೇನೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವದು ಯುವಕರ ಚಲ್ಲಾಟಕ್ಕೆ ಇನ್ನಷ್ಟು ಪುಷ್ಟಿ ನೀಡಿದಂತಾಗಿದೆ. ನಗರ ಪೋಲೀಸ ಇಲಾಖೆಯಲ್ಲಿ ರೌಡಿಶೀಟರಗಳ ಪಟ್ಟಿ ಇದ್ದರೂ ಅವರ ಬಗ್ಗೆ ನಿಗಾ ವಹಿಸುತ್ತಿಲ್ಲ ಎಂದು ಸಾರ್ವಜನಿಕರ ಆರೋಪವಾಗಿದೆ. ಈ ಕಿಡಿಗೇಡಿಗಳು ಹದಿ ಹರೆಯದ ಯುವಕರ ಮುಂದೆ ಚಲನಚಿತ್ರದ ಹಿರೋಗಳಂತೆ ಮಾತನಾಡಿ ಅವರಲ್ಲಿ ರೌಡಿಸಂದ ರೋಗ ಹಬ್ಬಿಸುತ್ತಿದ್ದಾರೆ. ಇತ್ತೀಚೆಗೆ ಬಾರ್‍ವೊಂದರಲ್ಲಿ ನಡೆದ ಚಿಕ್ಕ ಮಾತಿನ ಚಕಮಕಿ ಚೂರಿ ಇರಿತದಲ್ಲಿ ಪರ್ಯವಸಾನಗೊಂಡಿದ್ದು ಇಂಥದೇ ಒಂದು ಘಟನೆ ಎನ್ನಲಾಗುತ್ತಿದೆ. ಅಲ್ಲದೆ ಚೂರಿ ಇರಿದ ಆರೋಪಿಗಳನ್ನು ಬಂಧಿಸಲು ಪೋಲೀಸರು ಒಂದು ವಾರ ಕಾಲ ಪಟ್ಟ ಪಾಡು ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಕಳುವಿನ ಪ್ರಕರಣಗಳಲ್ಲಿ ಹೆಚ್ಚಳ : ಇತ್ತೀಚೆಗೆ ನಗರದಲ್ಲಿ ಕಳುವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಎಷ್ಟೋ ಪ್ರಕರಣಗಳು ಪೋಲೀಸ ಠಾಣೆಗೆ ಬಂದರೂ ಪ್ರಕರಣ ದಾಖಲಾಗುತ್ತಿಲ್ಲ. ಶಂಕರಲಿಂಗ ಗುಡಿಯ ಹುಂಡಿ ಪೆಟ್ಟಿಗೆ ಕಳವು ಮಾಡಿ ಎರಡು ಕಿ.ಮೀ. ದೂರ ಹೊಲದಲ್ಲಿ ಒಯ್ದು ಎಸೆಯಲಾಗಿತ್ತು. ನಗರದ ಮಧ್ಯಭಾಗದಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಂಜೆ ಸಮಯದಲ್ಲಿ ಪಿಗ್ಮಿ ಕಲೆಕ್ಟರ್‍ನ ಹಣದ ಬ್ಯಾಗ ಕಳವಿನ ಪ್ರಕರಣ ಮತ್ತು ಲಕ್ಷ್ಮೀ ಬಡಾವಣೆಯಲ್ಲಿ ಬೈಕ್ ಸವಾರರು ಬಂದು ಮಹಿಳೆಯೊಬ್ಬಳ ಮಂಗಳಸೂತ್ರ ಕಿತ್ತುಕೊಂಡು ಹೋದ ಪ್ರಕರಣ ಠಾಣೆಯಲ್ಲಿ ದಾಖಲಾಗಿಯೇ ಇಲ್ಲ. ಅಲ್ಲದೆ ಓರ್ವ ಪತ್ರಕರ್ತನ ತಾಯಿ ಕೊರಳಲ್ಲಿ ಬಂಗಾರದ ಸರವನ್ನು ಕಿತ್ತುಕೊಂಡು ಹೋದ ಆರೋಪಿಗಳ ಇನ್ನೂ ಪತ್ತೆಯೇ ಆಗಿಲ್ಲ. ಅಲ್ಲದೆ ನಗರದ ಕಾಯಿಪಲ್ಲೆ ಬಜಾರದಲ್ಲಿ ಪ್ರತಿನಿತ್ಯ ಮೊಬೈಲ್ ಕಳೆದುಕೊಂಡವರಂತೂ ಪೋಲೀಸರ ಬಳಿ ಹೋಗುವದೇ ಇಲ್ಲ. ಬೈಕ್ ಕಳವಿನ ಪ್ರಕರಣಗಳ ಅವಸ್ಥೆಯಂತೂ ಹೇಳುವದಕ್ಕೂ ಬೇಡ.
ಬೈಕ್ ಸವಾರರ ಹಾವಳಿ: ನಗರದ ಎಲ್‍ಇಟಿ ಕಾಲೇಜ ರಸ್ತೆಯಲ್ಲಿ ಬೈಕ್ ಸವಾರರ ಹಾವಳಿ ವಿಪರೀತವಾಗಿದೆ. ಪ್ರತಿದಿನ ಸಂಜೆ 5 ಗಂಟೆ ಸುಮಾರಿಗೆ ಕಾಲೇಜು, ಸ್ಕೂಲು ಬಿಟ್ಟ ಸಮಯದಲ್ಲಿ ಬೈಕ್ ಸವಾರರು ವಾಹನದ ಸೈಲೆನ್ಸ್‍ರ ತೆಗೆದು ವೇಗದಿಂದ ವಾಹನ ಓಡಿಸಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಆದರೂ ಆ ಕಡೆಗೆ ಲಕ್ಷ್ಯ ನೀಡುವವರು ಯಾರೂ ಇಲ್ಲ. ಅಪ್ರಾಪ್ತ ಬಾಲಕ, ಬಾಲಕಿಯರು ವಾಹನ ಚಲಾಯಿಸುವದು ನಗರದಲ್ಲಿ ಸರ್ವೇ ಸಾಮಾನ್ಯವಾಗಿದೆ. ಅಷ್ಟೇ ಏಕೆ ಅಟೋ ರಿಕ್ಷಾಗಳನ್ನು ಲೈಸೆನ್ಸ್ ಇಲ್ಲದೆ ಅಪ್ರಾಪ್ತರು ಓಡಿಸುತ್ತಿದ್ದಾರೆ. ಅಟೋ ಚಾಲಕರಿಗೆ ಸಮವಸ್ತ್ರ ಇಲ್ಲವೇ ಇಲ್ಲ. ಅಲ್ಲದೆ ಅಟೋರಿಕ್ಷಾಗಳಿಗೆ ಸರಕಾರದ ಪರಮಿಟ್ ಇದೆಯೋ ಇಲ್ಲವೋ ಎನ್ನುವದು ಆ ಭಗವಂತನೇ ಬಲ್ಲ.
ಸಮಾಜ ವಿರೋಧಿ ಕೃತ್ಯಗಳು ಅವ್ಯಾಹತ: ನಗರದಲ್ಲಿ ಸಮಾಜ ವಿರೋಧಿ ಕೃತ್ಯಗಳಾದ ಮಟಕಾ, ಜೂಜು, ಕ್ರಿಕೆಟ್ ಬೆಟ್ಟಿಂಗ್ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ. ಹದಿ ಹರಿಯದ ಯುವಕರು ಗಾಂಜಾ ಆದಿ ಮಾದಕ ವಸ್ತುಗಳಿಗೆ ಬಲಿ ಬೀಳುತ್ತಿರುವದು ಸಾರ್ವಜನಿಕರಿಗೆ ಚಿಂತೆಗೀಡು ಮಾಡಿದೆ. ಇವೆಲ್ಲ ಯಾವ ಅಡೆತಡೆಗಳಿಲ್ಲದೆ ಪ್ರಕಟವಾಗಿ ನಡೆಯುತ್ತಿದ್ದರೂ ಪೋಲೀಸ ಇಲಾಖೆ ಮೌನವಾಗಿರುವದು ಅತ್ಯಂತ ಆಕ್ಷೇಪಾರ್ಹವಾಗಿದೆ.
ಒಟ್ಟಾರೆಯಾಗಿ ಗೋಕಾಕ ನಗರದ ಕಾನೂನು ಮತ್ತು ಶಿಸ್ತಿನ ಪರಿಸ್ಥಿತಿ ಹದಗೆಟ್ಟು ಹೋಗಿದ್ದು ಸಮಾಜ ವಿರೋಧಿ ಶಕ್ತಿಗಳಿಗೆ ಸಿಂಹಸ್ವಪ್ನವಾಗಿರುವ ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿಗಳು ವಿಶೇಷ ಆಸ್ಥೆ ವಹಿಸಿ ಗೋಕಾಕದ ಸಮಾಜ ವಿರೋಧಿ ಶಕ್ತಿಗಳಿಗೆ ಕಾನೂನಿನ ರುಚಿ ತೋರಿಸಬೇಕೆಂದು ಸಾರ್ವಜನಿಕರ ಮನವಿಯಾಗಿದೆ.