ಗೋಕಾಕ:ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಸಕ ಬಾಲಚಂದ್ರರಿಗೆ ಮನವಿ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಸಕ ಬಾಲಚಂದ್ರರಿಗೆ ಮನವಿ
ಗೋಕಾಕ ಅ 12 : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೂಡಲಗಿ ಶೈಕ್ಷಣಿಕ ವಲಯದ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರು ಶುಕ್ರವಾರದಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಅರ್ಪಿಸಿದರು.
ಸರ್ಕಾರಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಕರ ಹಿತ ಕಾಪಾಡುವಂತೆ ಅತಿಥಿ ಶಿಕ್ಷಕರು ಮನವಿ ಮಾಡಿಕೊಂಡರು.
ಪ್ರತಿ ತಿಂಗಳು ಸರಿಯಾಗಿ ವೇತನ ದೊರೆಯುತ್ತಿಲ್ಲ. ಕನಿಷ್ಠ 13600 ರೂ.ಗಳ ಮಾಸಿಕ ವೇತನ ನೀಡಬೇಕು. ಜೊತೆಗೆ ಸೇವಾ ಭದ್ರತೆಯನ್ನು ದೊರಕಿಸಿಕೊಡಬೇಕು. ಸರ್ಕಾರಿ ಶಿಕ್ಷಕರಂತೆ ನಮಗೂ ಸಹ 12 ತಿಂಗಳು ವೇತನ ಪಾವತಿಸಬೇಕು. ನೇಮಕಾತಿಯಲ್ಲಿ ಕೃಪಾಂಕ ನೀಡಬೇಕು. ಮೂರು ವರ್ಷ ಸೇವೆ ಸಲ್ಲಿಸಿದವರನ್ನು ಸರ್ಕಾರಿ ಅತಿಥಿ ಶಿಕ್ಷಕರೆಂದು ಖಾಯಂಗೊಳಿಸಬೇಕು. ಮಹಿಳಾ ಅತಿಥಿ ಶಿಕ್ಷಕಿಯರಿಗೆ ಪ್ರಸೂತಿ ಸಮಯದಲ್ಲಿ ವೇತನ ಸಹಿತ ರಜೆಯನ್ನು ನೀಡಬೇಕೆಂಬ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಅತಿಥಿ ಶಿಕ್ಷಕರು ಶಾಸಕರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕರನ್ನು ಉದ್ಧೇಶಿಸಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಅತಿಥಿ ಶಿಕ್ಷಕರ ಎಲ್ಲ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಚಳಿಗಾಲದ ಅಧಿವೇಶನದಲ್ಲಿ ಅತಿಥಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ. ಜೊತೆಗೆ ಅತಿಥಿ ಶಿಕ್ಷಕರ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಪಡಿಸುತ್ತೇನೆಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು. ಮೂಡಲಗಿ ವಲಯದ 150ಕ್ಕೂ ಅಧಿಕ ಅತಿಥಿ ಶಿಕ್ಷಕರು ಮನವಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.