ಮೂಡಲಗಿ:23 ವಾರ್ಡ್ಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ
23 ವಾರ್ಡ್ಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ
ಸುಧೀರ ನಾಯರ್
ಮೂಡಲಗಿ ಅ 27 : ಸ್ಥಳೀಯ ಪುರಸಭೆ ಚುನಾವಣೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದ್ದು. ರಾಜಕೀಯ ಪಕ್ಷ ಬಿಜೆಪಿ, ಕಾಂಗ್ರೇಸ್, ಜೆಡಿಎಸ್ ಅಲ್ಲದೇ ಪಕ್ಷೇತರ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಪಟ್ಟಣದ 23 ವಾರ್ಡ್ಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ಇದ್ದು ಮತದಾರ ಯಾರ ಮೇಲೆ ದಯ ತೋರುತ್ತಾನೆ ಎಂಬುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಜೆಡಿಎಸ್ನ ಭೀಮಪ್ಪ ಗಡಾದ ಬೆಂಬಲಿತ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಬಿರುಸಿನ ಪ್ರಚಾರದಲ್ಲಿ ತೊಡಗಿದರೆ ಪಕ್ಷೇತರ ಅಭ್ಯರ್ಥಿಗಳು ಮತದಾರನ ಮನಹೊಲಿಸಲು ತೆರೆಮರೆಯಲ್ಲಿ ಸಾಕಷ್ಟು ಕಸರತ್ತು ನಡೆಸಿದ್ದಾರೆ.
ಇತ್ತಿಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಶಾಸಕ ಬಾಲಚಂದ್ರ ಜಾರಕಿಹೊಳಿ ಅತಿ ಹೆಚ್ಚಿನ ಮತಗಳ ಅಂತರದಿಂದ ಜಯಗಳಿಸಿದರೂ ಜೆಡಿಎಸ್ ಅಭ್ಯರ್ಥಿ ಭೀಮಪ್ಪ ಗಡಾದ ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮತಗಳಿಸಿರುವುದು ಪುರಸಭೆ ಚುನಾವಣೆಯ ಮೇಲೆ ಪ್ರಭಾವ ಬೀರುವ ಲಕ್ಷಣಗಳಿವೆ. ಮೂಡಲಗಿಯಲ್ಲಿ ಕಡಿಮೆ ಮತ ಗಳಿಸಿರುವುದು ಶಾಸಕರಿಗೆ ಬೇಸರ ತಂದಿದ್ದರು ರಾಜಕೀಯ ಚದುರಂಗದ ಆಟದಲ್ಲಿ ಮುತ್ಸದ್ದಿ ರಾಜಕಾರಣಿಯಾದ ಶಾಸಕ ಬಾಲಚಂದ್ರ ಜಾರಕಿಹೊಳಿ ತಮ್ಮ ಪ್ರಭಾವವನ್ನು ಈ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ತೋರಿಸಲಿದ್ದಾರೆ ಎನ್ನುವುದು ಯಕ್ಷ ಪ್ರಶ್ನೇಯಾಗಿದೆ. ಮೂಡಲಗಿಯಲ್ಲಿ ಅತಿ ಹೆಚ್ಚು ಮತಗಳಿಸಿರುವ ಬಿ.ಜಿ.ಗಡಾದ ಪಟ್ಟಣದ ಅಭಿವೃದ್ದಿಗೆ ಪಣ ತೊಟ್ಟು ಪುರಸಭೆಯ ಚುಕ್ಕಾಣಿಯನ್ನು ಜೆಡಿಎಸ್ ಮಡಿಲಿಗೆ ತರಲು ರಾಜಕೀಯ ಕಸರತ್ತು ನಡೆಸಿದ್ದಾರೆ.
ಪುರಸಭೆ ಚುನಾವಣೆ ಘೋಷಣೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮೇಲೆ ಹೆಚ್ಚಿನ ಒಲವು ಇತ್ತು. ಆದರೆ ಟಿಕೇಟ್ ಹಂಚಿಕೆಯಾದ ನಂತರ ಕೆಲವೊಂದು ಮನಸ್ತಾಪದಿಂದಾಗಿ ಏರಡು ಪಕ್ಷಗಳಲ್ಲಿ ಸಮಬಲದ ಹೋರಾಟ ಕಂಡುಬರುತ್ತಿದೆ. ಈ ಚುನಾವಣೆಯೂ ಬಿಜೆಪಿ ಮತ್ತು ಜೆಡಿಎಸ್ ನಡುವಿನ ನೇರ ಪೈಪೋಟಿ ಮೇಲ್ನೋಟಕ್ಕೆ ಕಂಡು ಬಂದರು ಇದು ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಜೆಡಿಎಸ್ ಮುಖಂಡ ಭೀಮಪ್ಪ ಗಡಾದ ಇವರ ನಡುವಿನ ಪ್ರತಿಷ್ಟೆಯ ಪ್ರಶ್ನೇಯಾಗಿದೆ. ಎರಡು ರಾಜಕೀಯ ಪಕ್ಷಗಳ ನಡುವೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೇಸ್ ಪಕ್ಷವೂ 17 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳ ಜಯಕ್ಕಾಗಿ ಶ್ರಮಿಸುತ್ತಿದೆ.
ಈ ಬಾರಿ ವಾರ್ಡಗಳ ವಿಂಗಡನೆ ಮತ್ತು ಮಿಸಲಾತಿಯೂ ಅಭ್ಯರ್ಥಿಗಳಲ್ಲಿ ಮತ್ತು ಮತದಾರರಲ್ಲಿ ಗೊಂದಲ ಸೃಷ್ಠಿಸಿದೆ. ವಾರ್ಡಗಳಲ್ಲಿ ಮತದಾರ ಹಂಚಿಕೆ ಸರಿಯಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ. ಚದುರಿದ ಮತದಾರರನ್ನು ಪತ್ತೆಹಚ್ಚಲು ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಈ ಬಾರಿ ಮಹಿಳೆಯರಿಗೆ ಹೆಚ್ಚಿನ ಮೀಸಲಾತಿ ದೊರೆತಿರುವುದರಿಂದ ಕಣದಲ್ಲಿ ಮಹಿಳಾಮಣಿಗಳೆ ಹೆಚ್ಚು ಸ್ಪರ್ಧಾ ಕಣದಲ್ಲಿದ್ದಾರೆ. ಮೂರು ಪಕ್ಷಗಳು ಹೊಸ ಮಖಗಳಿಗೆ ಮಣೆ ಹಾಕಿರುವುದು ಕುತೂಹಲ ಮೂಡಿಸಿದೆ. ಈ ಎಲ್ಲ ಗೊಂದಲದ ನಡುವೆ ಮತದಾರ ಯಾವ ಪಕ್ಷಕ್ಕೆ ಮೂಡಲಗಿ ಪುರಸಭೆಯ ಅಧಿಕಾರದ ಚುಕ್ಕಾಣಿ ನೀಡುತ್ತಾನೆ ಎನ್ನುವುದು ಕಾದು ನೋಡಬೇಕಾಗಿದೆ.