ಗೋಕಾಕ:ರೋಟರಿ ಸಂಸ್ಥೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದೆ : ಆರ್. ರಾಮಚಂದ್ರನ್
ರೋಟರಿ ಸಂಸ್ಥೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದೆ : ಆರ್. ರಾಮಚಂದ್ರನ್
ಗೋಕಾಕ ಜು 1 : ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯವನ್ನು ರೋಟರಿ ಸಂಸ್ಥೆ ಮಾಡುತ್ತ ಬಂದಿದ್ದು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಹೇಳಿದರು.
ಅವರು ರವಿವಾರದಂದು ನಗರದ ರೋಟರಿ ರಕ್ತ ಭಂಡಾರದ ರೋಟರಿ ಹಾಗೂ ಇನ್ನರ್‍ವೀಲ್ ಸಂಸ್ಥೆಯ 2018-19ನೇ ಸಾಲಿನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ರೋಟರಿ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ರಕ್ತದಾನ ಶಿಬಿರ, ಹಿರಿಯ ಜೀವಿಗಳಿಗೆ ಸನ್ಮಾನ, ಶ್ರಮದಾನ ಶಿಬಿರ ಸೇರಿದಂತೆ ಹಲವಾರು ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಆಯೋಜನೆ ಮಾಡುತ್ತಿದೆ. ಸಾಮಾಜಿಕ ಕಳಕಳಿಯನ್ನು ಹೊಂದಿರುವ ಸಮಾನ ಮನಸ್ಸಿನ ರೋಟರಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಸಮಾಜ ಸೇವೆ ಗೈಯುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರಲ್ಲದೆ ಇನ್ನರ್‍ವೀಲ್ ಸಂಸ್ಥೆಯವರು ತಾಲೂಕಿನ ಗರ್ಭೀಣಿ ಸ್ತ್ರೀಯರಿಗೆ ಸರಕಾರ ನೀಡುತ್ತಿರುವ ಯೋಜನೆಗಳ ಕುರಿತು ಅರಿವು ಮೂಡಿಸಬೇಕೆಂದು ಹೇಳಿದರು.
ಜಿಲ್ಲೆಯಾದ್ಯಂತ ಐದು ಸಾವಿರ ರಕ್ತದಾನ ಶಿಬಿರಗಳನ್ನು ಸಂಘಟಿಸಿ 3800 ಯುನಿಟ್ ರಕ್ತವನ್ನು ಸಂಗ್ರಹಿಸಿ ಬೇಡಿಕೆ ಇದ್ದಲ್ಲಿ ಪೂರೈಸಲಾಗಿದೆ. ಜಿಲ್ಲೆಯನ್ನು ಅಂಧತ್ವ ಮುಕ್ತ ಮಾಡಲು ಕಾರ್ಯಪ್ರವೃತ್ತರಾಗಿದ್ದು ಇದಕ್ಕೆ ಸಂಘ-ಸಂಸ್ಥೆಗಳು ಸಹಕಾರ ನೀಡುವಂತೆ ರಾಮಚಂದ್ರನ್ ಅವರು ಕೋರಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಘೋಡಗೇರಿಯ ಶಿವಾನಂದಮಠದ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡುತ್ತ ಮಾನವ ಜೀವನ ಕ್ಷಣಿಕವಾಗಿದ್ದು ಹುಟ್ಟು-ಸಾವಿನ ನಡುವಿನ ಬದುಕಿನಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಡಾಕ್ಟರ್-ಡೇ ಹಾಗೂ ಚಾರ್ಟರ್ಡ ಅಕೌಂಟ ಡೇ ನಿಮಿತ್ಯ ವೈದ್ಯರನ್ನು ಹಾಗೂ ಲೆಕ್ಕ ಪರಿಶೋಧಕರನ್ನು ಸತ್ಕರಿಸಲಾಯಿತು.
ರೋಟರಿ ವಲಯ ಅಧಿಕಾರಿ ದುರ್ಗೇಶ ಹರಿತಾಯಿ ಹಾಗೂ ವಿನಯಾ ಹರಿತಾಯಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.
ವೇದಿಕೆ ಮೇಲೆ ಸಹಾಯಕ ಪ್ರಾಂತ್ಯಪಾಲ ನೀರ್ಲೆಕರ, ನೂತನ ಅಧ್ಯಕ್ಷ ದಿಲೀಪ ಮೆಳವಂಕಿ, ಕಾರ್ಯದರ್ಶಿ ವಿಶ್ವನಾಥ ಕಡಕೋಳ, ಖಜಾಂಚಿ ಕೆಂಚಪ್ಪ ಭರಮನ್ನವರ, ಇನ್ನರ್‍ವೀಲ್ ಸಂಸ್ಥೆಯ ಅಧ್ಯಕ್ಷೆ ನಮೀತಾ ಆಜರಿ, ಕಾರ್ಯದರ್ಶಿ ಗಿರಿಜಾ ಮುನ್ನೋಳಿಮಠ, ಖಜಾಂಚಿ ವಿದ್ಯಾ ಗುಲ್ಲ ಹಾಗೂ ಕಳೆದ ಸಾಲಿನ ಪದಾಧಿಕಾರಿಗಳಾದ ಸತೀಶ ಬೆಳಗಾವಿ, ಸೀತಾ ಬೆಳಗಾವಿ, ಆರತಿ ನಾಡಗೌಡ ಇದ್ದರು.
ಸೋಮಶೇಖರ ಮಗದುಮ್ಮ ಸ್ವಾಗತಿಸಿದರು. ಸತೀಶ ನಾಡಗೌಡ ನಿರೂಪಿಸಿದರು. ಜಗದೀಶ ಚುನಮರಿ ವಂದಿಸಿದರು.