ಗೋಕಾಕ:ರೈತ ಸಂಘಟನೆಯನ್ನು ಹೆಚ್ಚು ಬಲಿಷ್ಠಗೊಳಿಸಿ : ಭೀಮಶಿ ಗದಾಡಿ

ರೈತ ಸಂಘಟನೆಯನ್ನು ಹೆಚ್ಚು ಬಲಿಷ್ಠಗೊಳಿಸಿ : ಭೀಮಶಿ ಗದಾಡಿ
ಗೋಕಾಕ ಜೂ 13 : ರೈತ ಸಂಘಟನೆಯನ್ನು ಇನ್ನೂ ಹೆಚ್ಚು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕೆಂದು ರೈತ ಸಂಘದ ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ ಕರೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಗೋಕಾಕ ತಾಲೂಕಾ ಘಟಕದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರಿಗೆ ಆಗುತ್ತಿರುವ ಕಷ್ಟ-ನಷ್ಟಗಳನ್ನು ತಡೆಯುವ ಹಾಗೂ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಾವಿಂದು ಸಂಘಟಿತರಾಗಿ ಹೋರಾಟ ಮಾಡಲು ನಮ್ಮ ಸಂಘಟನೆಯನ್ನು ಬಲಿಷ್ಠಗೊಳಿಸಬೇಕಾಗಿದೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ನಾಡಿಗೆ ಅನ್ನ ನೀಡುವ ರೈತ ನೂರಾರು ಸಂಕಷ್ಟಗಳನ್ನು ಅನುಭವಿಸುತ್ತಿದ್ದರು ಅಧಿಕಾರ ನಡೆಸುತ್ತಿರುವ ಸರ್ಕಾರಗಳು ಹಾಗೂ ಅಧಿಕಾರಿಗಳು ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯನ್ನು ತೋರಿಸುತ್ತಿಲ್ಲ. ಸಾಲದ ಹೊರೆಯಲ್ಲಿ ಬೆಂದು ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರ ಬಗ್ಗೆ ಯಾವುದೇ ಸರ್ಕಾರಗಳು ಚಿಂತಿಸುತ್ತಿಲ್ಲ, ಕಾರ್ಖಾನೆಯ ಮಾಲಿಕರು ಕಬ್ಬಿನ ಬಿಲ್ಲನ್ನು ರೈತರಿಗೆ ನೀಡುತ್ತಿಲ್ಲ. ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ನಾವಿಂದ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ನಾಡಿನ ಪ್ರತಿಯೊಂದು ಹಳ್ಳಿಗಳಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರನ್ನು ಸಂಘಟನೆಗೆ ಬರಮಾಡಿಕೊಂಡು ರೈತರನ್ನು ಜಾಗೃತಿಗೊಳಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಹೇಳಿದರು.
ಹಸಿರು ಸೇನೆಯ ಜಿಲ್ಲಾಧ್ಯಕ್ಷ ಗಣಪತಿ ಈಳಿಗೇರ ಅವರು ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಸರ್ಕಾರವು ವೈಜ್ಞಾನಿಕ ಬೆಲೆಯನ್ನು ನಿಗದಿಪಡಿಸುತ್ತಿಲ್ಲ, ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ರೈತರಿಗೆ ಸರಿಯಾಗಿ ಮಾಹಿತಿಯನ್ನು ನೀಡುತ್ತಿಲ್ಲ. ಚುನಾವಣೆಯ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಮಾಡುವದಾಗಿ ಹೇಳಿದ ಮುಖ್ಯಮಂತ್ರಿಗಳು, ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುವಲ್ಲಿ ಮುರ್ತುವರ್ಜಿಸಿಬೇಕೆಂದು ಒತ್ತಾಯಿಸಿದ ಅವರು ಸರ್ಕಾರ ಹಾಗೂ ಅಧಿಕಾರಿಗಳಿಗೆ ತಾವು ಮಾಡಿರುವ ತಪ್ಪಿನ ಅರಿವು ಮೂಡಿಸಲು ನಾವು ಸಂಘಟನೆ ಹೆಚ್ಚು ಒತ್ತು ನೀಡಿ ಹೋರಾಟ ನಡೆಸಬೇಕಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸಂಚಾಲಕರಾದ ಭೀಮಶಿ ಹುಲಕುಂದ, ಹಣಮಂತ ಬಿಳ್ಳೂರ, ಮಹಾದೇವ ಗುಡೇರ, ಅಶೋಕ ಮಡಿವಾಳ, ತಾಲೂಕಾಧ್ಯಕ್ಷ ಮುತ್ತೆಪ್ಪ ಬಾಗನ್ನವರ, ಉಪಾಧ್ಯಕ್ಷ ಸಿದ್ಲಿಂಗ ಪೂಜೇರಿ, ಕುಮಾರ ತಿಗಡಿ, ಯಲ್ಲಪ್ಪ ಅರಭಾಂವಿ, ಯಮನಪ್ಪ ಉಪ್ಪಾರ, ಪ್ರಕಾಶ ಹಾಲನ್ನವರ, ಕಲ್ಲಪ್ಪ ಉಪ್ಪಾರ, ಮುತ್ತೆಪ್ಪ ಕುರಬರ, ಶಿವಾನಂದ ಈಳಿಗೇರ, ನಾಗಪ್ಪ ಬಿಲಕುಂದಿ, ಮಲ್ಲಿಕಾರ್ಜುನ ಈಳಿಗೇರ, ಸಿದ್ದಪ್ಪ ತಪಸಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.