ಗೋಕಾಕ:ಅಪಸ್ವರ ಶಮನಕ್ಕೆ ಎಐಸಿಸಿ ಕಾರ್ಯದರ್ಶಿ ಸತೀಶ ಕಸರತ್ತು : ಒಕ್ಕಟ್ಟಿನಿಂದ ಕಾರ್ಯ ಮಾಡಿ ಪಕ್ಷದ ಅಭ್ಯರ್ಥಿಯ ಗೆಲ್ಲಿಸಲು ಮನವಿ

ಅಪಸ್ವರ ಶಮನಕ್ಕೆ ಎಐಸಿಸಿ ಕಾರ್ಯದರ್ಶಿ ಸತೀಶ ಕಸರತ್ತು : ಒಕ್ಕಟ್ಟಿನಿಂದ ಕಾರ್ಯ ಮಾಡಿ ಪಕ್ಷದ ಅಭ್ಯರ್ಥಿಯ ಗೆಲ್ಲಿಸಲು ಮನವಿ
ಗೋಕಾಕ ಏ 20 : ಜಿಲ್ಲೆಯಲ್ಲಿ ಕಾಂಗ್ರೆಸ ತಿಕೀಟು ಹಂಚಿಕೆ ನಂತರ ಕೆಲವು ಕಡೆಗೆ ಎದ್ದ ಅಪಸ್ವರವನ್ನು ಶಮನಗೊಳಿಸಲಾಗುವದು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಅವರು ಶುಕ್ರವಾರದಂದು ನಗರದ ತಮ್ಮ ಹಿಲ್-ಗಾರ್ಡನ್ ನಿವಾಸದಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತ ಪಕ್ಷದ ತಿಕೀಟು ನೀಡುವ ಸಂದರ್ಭದಲ್ಲಿ ಕೆಲವರಿಗೆ ಅಸಮಾಧಾನ ಆಗುವದು ಸ್ವಾಭಾವಿಕ. ಆದರೆ ಪಕ್ಷದ ಹಿತದೃಷ್ಟಿಯಿಂದ ಎಲ್ಲರ ಮನವೊಲಿಸಿ ಚುನಾವಣೆಯಲ್ಲಿ ಎಲ್ಲ ಕಾರ್ಯಕರ್ತರು ಒಕ್ಕಟ್ಟಿನಿಂದ ಕಾರ್ಯ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವರೆಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದರು.
ಯಮಕನಮರ್ಡಿ ಕ್ಷೇತ್ರದ ಬಗ್ಗೆ ಪ್ರಸ್ತಾಪಿಸಿದಾಗ ಕಳೆದ 10 ವರ್ಷಗಳಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಇದರಿಂದ ಕ್ಷೇತ್ರದ ಜನತೆ ತಮ್ಮ ಮೇಲೆ ಭರವಸೆಯನ್ನಿಟ್ಟಿದ್ದು ತಮ್ಮ ಜಯ ಖಚಿತ ಎಂದು ತಿಳಿಸಿದರು.
ಯಮಕನಮರ್ಡಿ ಕ್ಷೇತ್ರದ 70 ಗ್ರಾಮಗಳಲ್ಲಿ ಈಗಾಗಲೇ ಪ್ರಚಾರ ಕಾರ್ಯ ಮುಗಿಸಲಾಗಿದೆ. ಇನ್ನೂ 30 ಗ್ರಾಮಗಳು ಉಳಿದಿದ್ದು ಅವುಗಳಲ್ಲಿಯೂ ಇಷ್ಟರಲ್ಲಿಯೇ ಚುನಾವಣಾ ಕಾರ್ಯ ಪೂರ್ಣಗೊಳಿಸಿ ರಾಜ್ಯದ ಇತರ ಭಾಗಗಳಲ್ಲಿ ಪ್ರಚಾರಕ್ಕೆ ಹೋಗುವದಾಗಿ ಹೇಳಿದ ಸತೀಶ ಜಾರಕಿಹೊಳಿ ಅವರು ಚುನಾವಣೆಯ ಎಲ್ಲ ಕಾರ್ಯವನ್ನು ಕಾರ್ಯಕರ್ತರೇ ಮಾಡುತ್ತಾರೆಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ವದಂತಿ ಎಲ್ಲೆಡೆ ಹಬ್ಬಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸತೀಶ ಜಾರಕಿಹೊಳಿ ಬಹುಶಃ ಬಾದಾಮಿ ಕ್ಷೇತ್ರದಿಂದಲೂ ಮುಖ್ಯಮಂತ್ರಿಗಳು ಸ್ಪರ್ಧಿಸುವ ಸಾಧ್ಯತೆ ಇದೆ. ಈ ಬಗ್ಗೆ ಪಕ್ಷದ ವರಿಷ್ಠ ಮಂಡಳಿ ನಿರ್ಧಾರ ಕೈಗೊಳ್ಳುವದು ಎಂದು ತಿಳಿಸಿದರು.
ನೋಟು ಅಮಾನ್ಯದಿಂದ ಪ್ರಯೋಜನವಾಗಿಲ್ಲ: ದೇಶದಾದ್ಯಂತ ಬ್ಯಾಂಕುಗಳಲ್ಲಿ ನೋಟುಗಳ ಕೊರತೆ ಉಂಟಾಗಿ ಜನಸಾಮಾನ್ಯರು ಪರದಾಡುವಂತಾಗಿದ್ದರ ಬಗ್ಗೆ ಶಾಸಕ ಸತೀಶ ಜಾರಕಿಹೊಳಿ ಅವರ ಗಮನ ಸೆಳೆದಾಗ 500 ಹಾಗೂ 1000 ರೂ.ಗಳ ನೋಟು ಅಮಾನ್ಯದಿಂದ ಏನೂ ಪ್ರಯೋಜನ ಆಗಿಲ್ಲ. ಕಪ್ಪು ಹಣ ಹೊರಬೀಳುತ್ತದೆ ಎಂದು ಹೇಳುತ್ತ ಜನಸಾಮಾನ್ಯರಿಗೆ ತುಂಬಾ ತೊಂದರೆ ನೀಡಿದರು. ಅದರಿಂದ ಏನೂ ಪ್ರಯೋಜನ ಆಗಲಿಲ್ಲ. ಇಂದಿನ ದಿನಗಳಲ್ಲಿ ಮಧ್ಯಮ ವರ್ಗದ ಪ್ರತಿಯೊಬ್ಬರೂ ಒಂದೆರಡು ಲಕ್ಷ ರೂ. ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ಹಾಗೂ ರಿಜರ್ವ ಬ್ಯಾಂಕು ನಗದು ಹಣದ ಕೊರತೆ ಬಗ್ಗೆ ಮುಂದಾಲೋಚಿಸಿ ಸಾಕಷ್ಟು ನಗದು ಬ್ಯಾಂಕುಗಳಿಗೆ ಸರಬರಾಜು ಮಾಡಬೇಕಾಗಿತ್ತು. ಹಾಗೆ ಮಾಡದೆ ಇರುವದೇ ಇಂದಿನ ಸಮಸ್ಯೆಗೆ ಕಾರಣವಾಗಿದೆ. ಆದಷ್ಟು ಬೇಗನೆ ನಗದು ಹಣವನ್ನು ಬ್ಯಾಂಕುಗಳಿಗೆ ಪೂರೈಸಿ ಪರಿಸ್ಥಿತಿ ಸುಧಾರಿಸುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಮದುವೆ ಆದಿ ಇತರ ಸಮಾರಂಭಗಳು ಜರುಗುವ ಈ ಸಮಯದಲ್ಲಿ ನೋಟುಗಳ ಕೊರತೆ ಜನಸಾಮಾನ್ಯರಿಗೆ ಇನ್ನಷ್ಟು ನೋವು ಮಾಡುತ್ತದೆ ಎಂದು ಎಚ್ಚರಿಸಿದರು.
ಜಿಎಸ್‍ಟಿ ಬಗ್ಗೆ ಪ್ರಸ್ತಾಪಿಸಿದ ಶಾಸಕ ಸತೀಶ ಜಾರಕಿಹೊಳಿ ಅವರು ಸಾಕಷ್ಟು ಮುಂದಾಲೋಚನೆ ಇಲ್ಲದೆ ಜಾರಿಗೊಳಿಸಿದ್ದರಿಂದ ಅದರ ಗೊಂದಲಗಳು ಇನ್ನೂ ಬಗೆಹರಿದಿಲ್ಲ. ಅಲ್ಲದೆ ಜಿಎಸ್‍ಟಿ ಜಾರಿಯಿಂದಾಗಿ ಬೆಲೆಯೇರಿಕೆ ಹೆಚ್ಚಾಗುತ್ತಿದೆ ಇದರಿಂದ ಜನಸಾಮಾನ್ಯರ ಬದುಕು ಕಠಿಣವಾಗಿದೆ ಎಂದು ಹೇಳಿದರು.
ಕೊನೆಯಲ್ಲಿ ಯಮಕನಮರ್ಡಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವದು ಯಾವಾಗ ಎಂದು ಕೇಳಿದಾಗ ತಾವು ಸಮಯ, ಮುಹೂರ್ತ ನೋಡಿ ನಾಮಪತ್ರ ಸಲ್ಲಿಸುವದಿಲ್ಲ. ಒಂದೆರಡು ದಿನಗಳಲ್ಲಿ ಸಮಯ ತೆಗೆದು ನಾಮಪತ್ರ ಸಲ್ಲಿಸುವದಾಗಿ ಹೇಳಿದರು.