RNI NO. KARKAN/2006/27779|Saturday, August 2, 2025
You are here: Home » breaking news » ಮೂಡಲಗಿ:ಹನಿ ನೀರಾವರಿ ಬಗ್ಗೆ ತಿಳುವಳಿಕೆ ನೀಡಲು ರೈತರ ಸಮಾವೇಶವನ್ನು ನಡೆಸಲು ಉದ್ಧೇಶಿಸಲಾಗಿದೆ : ಶಾಸಕ ಬಾಲಚಂದ್ರ

ಮೂಡಲಗಿ:ಹನಿ ನೀರಾವರಿ ಬಗ್ಗೆ ತಿಳುವಳಿಕೆ ನೀಡಲು ರೈತರ ಸಮಾವೇಶವನ್ನು ನಡೆಸಲು ಉದ್ಧೇಶಿಸಲಾಗಿದೆ : ಶಾಸಕ ಬಾಲಚಂದ್ರ 

ಹನಿ ನೀರಾವರಿ ಬಗ್ಗೆ ತಿಳುವಳಿಕೆ ನೀಡಲು ರೈತರ ಸಮಾವೇಶವನ್ನು ನಡೆಸಲು ಉದ್ಧೇಶಿಸಲಾಗಿದೆ : ಶಾಸಕ ಬಾಲಚಂದ್ರ

ಮೂಡಲಗಿ ಫೆ 19 : ನೀರನ್ನು ಮಿತವಾಗಿ ಸದ್ಬಳಕೆ ಮಾಡಿಕೊಳ್ಳಲು ರೈತರಲ್ಲಿ ಜಾಗೃತಿ ಮೂಡಿಸಲು ಚುನಾವಣೆ ಮುಗಿದ ಬಳಿಕ ರೈತರ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ನಾಗನೂರ ಪಟ್ಟಣದಲ್ಲಿ ಡಿ.ಎಲ್.ಬಬಲಿ ಪ್ರೌಢ ಶಾಲೆಯ ಆವರಣದಲ್ಲಿ ಭಾನುವಾರ ರಾತ್ರಿ ಜರುಗಿದ ಒಟ್ಟು 14 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿ ಅವರು ಮಾತನಾಡಿದರು.
ರೈತರು ನೀರನ್ನು ಹೇಗೆ ಬಳಕೆ ಮಾಡಬೇಕು. ಹನಿ ನೀರಾವರಿ ಬಗ್ಗೆ ತಿಳುವಳಿಕೆ ನೀಡುವ ಉದ್ಧೇಶದಿಂದಲೇ ರೈತರ ಸಮಾವೇಶವನ್ನು ನಡೆಸಲು ಉದ್ಧೇಶಿಸಲಾಗಿದೆ. ರೈತರು 4 ಅಡಿಯ ಸಾಲುಗಳನ್ನು ಮಾಡಿ ಹನಿ ನೀರಾವರಿ ಮಾಡಿದರೆ ಉತ್ತಮ ಬೆಳೆಯ ಜೊತೆಗೆ ಉತ್ತಮ ಇಳುವರಿ ಬರುತ್ತದೆ. ಇದರಿಂದ ನೀರು ಕೂಡ ಉಳಿತಾಯವಾಗುತ್ತದೆ. ಕಬ್ಬು ಕಟಾವು ಮಾಡಲು ಕೃಷಿ ಕಾರ್ಮಿಕರ ಕೊರತೆ ಎದುರಾಗುತ್ತಿರುವುದರಿಂದ ಕೃಷಿ ಯಂತ್ರೋಪಕರಣಗಳನ್ನು ಉಪಯೋಗಿಸಲು ನಾಲ್ಕು ಅಡಿಯ ಸಾಲುಗಳ ಅವಶ್ಯವಾಗಿದೆ. ರೈತರ ಸಮಾವೇಶದಲ್ಲಿ ವಿವಿಧ ಬೆಳೆಗಳ ತಜ್ಞರನ್ನು ಆಹ್ವಾನಿಸಿ ರೈತರಿಗೆ ಉಪಯುಕ್ತವಾದ ಸಲಹೆಗಳನ್ನು ಕೊಡಿಸುವ ಉದ್ಧೇಶವಿದೆ. ಈ ಸಮಾವೇಶದ ಯಶಸ್ಸಿಗೆ ಎಲ್ಲ ರೈತ ಬಾಂಧವರ ಸಹಕಾರ ಅಗತ್ಯವಾಗಿದೆ ಎಂದರು.
ನಾಗನೂರ ಪಟ್ಟಣದ ಅಭಿವೃದ್ಧಿಗೆ ಈಗಾಗಲೇ ಸರ್ಕಾರದಿಂದ ಸಾಕಷ್ಟು ಪ್ರಮಾಣದಲ್ಲಿ ಅನುದಾನವನ್ನು ತಂದು ಅಭಿವೃದ್ಧಿ ಮಾಡಲಾಗುತ್ತಿದೆ. ಈ ಹಿಂದೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಆರಂಭಿಸಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸಿ ಅದಕ್ಕೆ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ. ಜತ್ತ-ಜಾಂಬೋಟಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಹೊಸದಾಗಿ 110/11 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರವನ್ನು 9.04 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿದೆ. 5 ಕೋಟಿ ರೂ. ವೆಚ್ಚದ ನಗರೋತ್ಥಾನ ಯೋಜನೆಗೆ ಚಾಲನೆ ನೀಡುವ ಮೂಲಕ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಮನೆಗಳ ಹಂಚಿಕೆಗಾಗಿ ಸಮೀಕ್ಷೆ ಕಾರ್ಯ : ಚುನಾವಣೆ ಮುಗಿದ ನಂತರ ಅರಭಾವಿ ಮತಕ್ಷೇತ್ರದಲ್ಲಿ ಖಾಸಗಿ ಏಜೆನ್ಸಿ ಮೂಲಕ ಸಮೀಕ್ಷೆ ಮಾಡಿಸಿ ಅರ್ಹ ಬಡ ಕುಟುಂಬಗಳನ್ನು ಗುರುತಿಸಲಾಗುವುದು. ಮನೆಗಳ ವಿತರಣೆಯಲ್ಲಿ ಸಾಕಷ್ಟು ಗೊಂದಲ ಉಂಟಾಗುತ್ತಿದೆ. ಸಾರ್ವಜನಿಕರಿಂದ ದೂರುಗಳು ಬರುತ್ತಿರುವುದರಿಂದ ಅರ್ಹ ಬಡ ಕುಟುಂಬಗಳನ್ನು ಗುರುತಿಸಲಾಗುವುದು. ಖಾಸಗಿ ಸಂಸ್ಥೆಯಿಂದ ಜೂನ್ ತಿಂಗಳಿನಿಂದ ಸಮೀಕ್ಷೆ ಕಾರ್ಯ ನಡೆಸಲಾಗುವುದು. ನಿವೇಶನ ರಹಿತರಿಗೆ ನಿವೇಶನ ನೀಡಿ ಅವರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವುದಾಗಿ ಹೇಳಿದರು. ಜತ್ತ-ಜಾಂಬೋಟಿ ರಸ್ತೆ ಅಗಲೀಕರಣದಲ್ಲಿ ಮನೆಗಳನ್ನು ಕಳೆದುಕೊಂಡ ನಿರಾಶ್ರಿತರಿಗೆ ಮನೆಗಳನ್ನು ಸಹ ನೀಡಲಾಗುವುದು ಎಂದು ಹೇಳಿದರು.
ವಿರೋಧಿಗಳನ್ನು ನಂಬದಿರಿ : 2004 ರಿಂದ ಅರಭಾವಿ ಮತಕ್ಷೇತ್ರದ ಸರ್ವತೋಮುಖ ಪ್ರಗತಿಗೆ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇಷ್ಟಾಗಿಯೂ ಕೆಲ ವಿರೋಧಿಗಳು ಅಭಿವೃದ್ಧಿ ಕುರಿತಂತೆ ಇಲ್ಲಸಲ್ಲದ ಅಪಪ್ರಚಾರವನ್ನು ಮಾಡುತ್ತಿರುತ್ತಾರೆ. ಅಭಿವೃದ್ಧಿ ಕುರಿತಂತೆ ಒಂದೇ ವೇದಿಕೆಯಲ್ಲಿ ಚರ್ಚೆ ನಡೆಸುವ ಸವಾಲು ಹಾಕಿದ ಅವರು, ಅಭಿವೃದ್ಧಿಯನ್ನು ವಿರೋಧಿಸುತ್ತಿರುವ ಇಂತಹ ಡೋಂಗಿ ಮುಖಂಡರನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಜಾತ್ರೆಗಳು, ಮದುವೆ ಮತ್ತೀತರ ಕಾರ್ಯಗಳಿಗೆ ಟಾಟಾ ಮಾಡಿಕೊಂಡು ಜನರಿಗೆ ಬೈ ಬೈ ಹೇಳಿಕೊಂಡು ತಿರುಗಾಡುತ್ತಿರುವ ಇಂತಹವರಿಗೆ ನೀವೇ ಪಾಠ ಕಲಿಸುವಂತೆ ಕರೆ ನೀಡಿದ ಅವರು, ವಿರೋಧಿಗಳಿಗೆ ಈ ಚುನಾವಣೆಯಲ್ಲಿ ಎಲ್ಲಿಯೂ ಜಾಗ ಇರದಂತೆ ನೋಡಿಕೊಳ್ಳಿ ಎಂದರು.
ನೆನಪಿನ ದೋಣಿ ಬಿಚ್ಚಿಟ್ಟ ಬಾಲಚಂದ್ರ : ಪ್ರಭಾಶುಗರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ನನ್ನನ್ನು ಕಲ್ಲೋಳಿಗೆ ಹೆಬ್ಬಾಳ ಕುಟುಂಬದವರು ಆಮಂತ್ರಿಸಿ ಸಾರ್ವತ್ರಿಕ ಚುನಾವಣೆಗೆ ನಿಲ್ಲುವಂತೆ ಪ್ರೇರಣೆ ನೀಡಿದರು. ನಾಗನೂರಿನ ಕೆಂಚನಗೌಡರು ವಿಧಾನಸಭೆಗೆ ನಿಲ್ಲುವಂತೆ ಒತ್ತಾಯಿಸಿದರು. ಇದರಿಂದ ಜನರು ನೀಡುತ್ತಿರುವ ಪ್ರೀತಿ ಅಭಿಮಾನದಿಂದ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಿ ಜನಸೇವೆ ಮಾಡುತ್ತಿದ್ದೇನೆ ಎಂದು ಹಿಂದಿನ ಘಟನೆಗಳನ್ನು ನೆನಪಿಸಿಕೊಂಡರು. ಪಟ್ಟಣದಲ್ಲಿ ಸರ್ಕಾರಿ ಕಾಮಗಾರಿಗಳನ್ನು ನೆರವೇರಿಸಲು ಭೂದಾನ ಮಾಡಿದ ಮಾಜಿ ಸಚಿವ ಆರ್.ಎಂ. ಪಾಟೀಲ ಕುಟುಂಬದವರನ್ನು ಅಭಿನಂದಿಸಿದರು.
ಅಧ್ಯಕ್ಷತೆಯನ್ನು ನಾಗನೂರ ಪಟ್ಟಣ ಪಂಚಾಯತಿ ಅಧ್ಯಕ್ಷೆ ಶೋಭಾ ಬಬಲಿ ವಹಿಸಿದ್ದರು.
ರಾಜ್ಯ ಸಹಕಾರಿ ಮಾರಾಟ ಮಂಡಳ ಉಪಾಧ್ಯಕ್ಷ ಬಸಗೌಡ ಪಾಟೀಲ, ಮಾಜಿ ಸಚಿವ ಆರ್.ಎಂ. ಪಾಟೀಲ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ. ಢವಳೇಶ್ವರ, ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಪ್ರಭಾಶುಗರ ಅಧ್ಯಕ್ಷ ಅಶೋಕ ಪಾಟೀಲ, ಮೂಡಲಗಿ ಪುರಸಭೆ ಅಧ್ಯಕ್ಷೆ ಕಮಲವ್ವ ಹಳಬರ, ಯುವ ಧುರೀಣ ರಾವಸಾಬ ಬೆಳಕೂಡ, ಪಿಕೆಪಿಎಸ್ ಅಧ್ಯಕ್ಷ ಶಂಕರ ಹೊಸಮನಿ, ಭಗೀರಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರು ಬೆಳಗಲಿ, ಎಪಿಎಂಸಿ ನಿರ್ದೇಶಕ ಕೆಂಚಪ್ಪ ಸಕ್ರೆಪ್ಪಗೋಳ, ನಿಂಗಪ್ಪ ಫಿರೋಜಿ, ಅಲ್ಲಪ್ಪ ಗುಡೆನ್ನವರ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಸಂತೋಷ ಸೋನವಾಲ್ಕರ, ಪಪಂ ಉಪಾಧ್ಯಕ್ಷೆ ನಾಗವ್ವ ಪೂಜೇರಿ, ಬಸವಂತ ಕಮತಿ, ಹನಮಂತ ತೇರದಾಳ, ಎಂ.ಕೆ. ಕುಳ್ಳೂರ, ಅಶೋಕ ಖಂಡ್ರಟ್ಟಿ, ಸುಭಾಸ ಪಡದಲ್ಲಿ, ಸಿದ್ದಪ್ಪ ಯಾದಗೂಡ, ಯಲ್ಲಪ್ಪ ಹೊರಟ್ಟಿ, ಮಲ್ಲಪ್ಪ ಕರಿಹೊಳಿ, ಭೀಮಪ್ಪ ಹಳಿಗೌಡರ, ಮುತ್ತೆಪ್ಪ ಖಾನಪ್ಪಗೋಳ, ಗಜಾನನ ಯರಗಣ್ವಿ, ಮಾರುತಿ ಯಡ್ರಾಂವಿ, ಪ್ರವೀಣ ಜೋಕಿ, ಸತ್ತೆಪ್ಪ ಕರವಾಡಿ, ಬಸಪ್ಪ ಪೂಜೇರಿ, ಮಹ್ಮದಸಾಬ ಅತ್ತಾರ, ಯಶವಂತ ಗೊಂಧಳಿ, ಅಶೋಕ ಭಜಂತ್ರಿ, ಶಿವಪ್ಪ ಕರಬನ್ನವರ, ಸುರೇಶ ಬಂಡಿವಡ್ಡರ, ರಾಮಚಂದ್ರ ಪತ್ತಾರ, ತಿಪ್ಪಣ್ಣಾ ಗೋಪಾಳಿ, ಧರೆಪ್ಪ ನಾವಿ, ಭೀಮಪ್ಪ ಕಲಾಲ, ಹೆಸ್ಕಾಂನ ಅಧೀಕ್ಷಕ ಅಭಿಯಂತರ ಎಚ್.ಬಸಪ್ಪ, ಬೃಹತ್ ಕಾಮಗಾರಿ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಸ್. ಖರೆ, ಅಧಿಕಾರಿಗಳಾದ ಬಿರಡೆ, ಪಿ.ಬಿ. ಪಾಟೀಲ, ಕೆ.ಬಿ. ಸಣ್ಣಕ್ಕಿ, ಎಂ.ಎಸ್.ನಾಗನ್ನವರ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಬಾಬು ಕಮತಗಿ, ಯಮನಪ್ಪ ಕರಬನ್ನವರ, ಪಟ್ಟಣ ಪಂಚಾಯತ ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು 5 ಕೋಟಿ ರೂ. ವೆಚ್ಚದ ನಗರೋತ್ಥಾನ-3 ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. 9.04 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ 110/11 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರವನ್ನು ಉದ್ಘಾಟಿಸಿದರು.

Related posts: