RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ವಾಜಪೇಯಿ ವಸತಿ ಶಾಲೆಗೆ 10 ಎಕರೆ ನಿವೇಶನದಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡಕ್ಕೆ ಅನುದಾನ ಮಂಜೂರು : ಶಾಸಕ ಬಾಲಚಂದ್ರ

ಗೋಕಾಕ:ವಾಜಪೇಯಿ ವಸತಿ ಶಾಲೆಗೆ 10 ಎಕರೆ ನಿವೇಶನದಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡಕ್ಕೆ ಅನುದಾನ ಮಂಜೂರು : ಶಾಸಕ ಬಾಲಚಂದ್ರ 

ವಾಜಪೇಯಿ ವಸತಿ ಶಾಲೆಗೆ 10 ಎಕರೆ ನಿವೇಶನದಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡಕ್ಕೆ ಅನುದಾನ ಮಂಜೂರು : ಶಾಸಕ ಬಾಲಚಂದ್ರ

ಗೋಕಾಕ ಫೆ 16 : ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯು ಆರಂಭಗೊಂಡಿದ್ದು, ಇದಕ್ಕಾಗಿ 10 ಎಕರೆ ನಿವೇಶನದಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡಕ್ಕಾಗಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ತಪಸಿ, ಕೆಮ್ಮನಕೋಲ ಹಾಗೂ ನಿಂಗಾಪೂರ ಗ್ರಾಮಗಳಲ್ಲಿ ಗುರುವಾರದಂದು ನಡೆದ ವಿವಿಧ ಪ್ರಗತಿಪರ ಕಾಮಗಾರಿಗಳನ್ನು ನೆರವೇರಿಸಿ ಅವರು ಮಾತನಾಡಿದರು.
ಕಟ್ಟಡದ ಸಮಸ್ಯೆಯಿಂದ ಕೌಜಲಗಿಯಲ್ಲಿ ವಸತಿ ಶಾಲೆಯನ್ನು ಆರಂಭಿಸಲಾಗಿದ್ದು, 2 ವರ್ಷದೊಳಗೆ ತಪಸಿಯಲ್ಲಿ ಸುಸಜ್ಜಿತವಾದ ಸ್ವಂತ ಕಟ್ಟಡವನ್ನು ವಸತಿ ಶಾಲೆಯು ಹೊಂದಲಿದೆ ಎಂದರು.
ಕೆಮ್ಮನಕೋಲ ಬಣದ ಹತ್ತಿರ ಬ್ರಿಡ್ಜ್-ಕಮ್-ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು 1.47 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 29 ಲಕ್ಷ ರೂ. ವೆಚ್ಚದಲ್ಲಿ ತಪಸಿಯಲ್ಲಿ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ. ತಪಸಿ ಗ್ರಾಮ ಪಂಚಾಯತಿಗೆ ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡಕ್ಕಾಗಿ 40 ಲಕ್ಷ ರೂ. ಅನುದಾನ ಮಂಜೂರಾಗಲಿದೆ. ತಪಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ಇನ್ನೂ ಹಲವು ಜನಪರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ರಸ್ತೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ಮನೆಗಳ ಸಮೀಕ್ಷೆ : ಚುನಾವಣೆ ಮುಗಿದ ಬಳಿಕ ಅರಭಾವಿ ಮತಕ್ಷೇತ್ರದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುವುದು. ಸರ್ಕಾರದಿಂದ ಬರುತ್ತಿರುವ ವಿವಿಧ ವಸತಿ ಯೋಜನೆಗಳು ಬಡ ಕುಟುಂಬಗಳಿಗೆ ದೊರಕುತ್ತಿಲ್ಲ. ಬಹುತೇಕ ಯೋಜನೆಗಳಿಂದ ಬಡ ಕುಟುಂಬಗಳು ವಂಚಿತಗೊಂಡಿವೆ. ಚುನಾವಣೆ ನಂತರ ಕ್ಷೇತ್ರದಾದ್ಯಂತ ಸಮೀಕ್ಷೆ ನಡೆಸಿ ಅರ್ಹ ಬಡ ಕುಟುಂಬಗಳಿಗೆ ಮನೆಗಳನ್ನು ಹಂಚುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಗ್ರಾಪಂ ಸದಸ್ಯರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡುವಲ್ಲಿ ಶ್ರಮಿಸಬೇಕು. ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ತಿಂಗಳೊಳಗೆ ನಾಯ್ಕರ ತೋಟದ ರಹವಾಸಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಹಾಗೂ ಎನ್‍ಜಿಓ ಮೂಲಕ ಸಾರ್ವಜನಿಕರಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬಡವ-ಶ್ರೀಮಂತ ಎಂಬ ಬೇಧ-ಭಾವ ಮಾಡದೇ ಎಲ್ಲರನ್ನೂ ಸಮಾನರಾಗಿ ಕಾಣುವ ವ್ಯಕ್ತಿತ್ವ ಹೊಂದಿದ್ದಾರೆ. ತಮ್ಮ ಬಳಿಗೆ ಯಾರೇ ಬಂದರೂ ಅವರ ಕಷ್ಟಗಳಿಗೆ ಸ್ಪಂದಿಸುವ ಹೃದಯವಂತರು. ಸದಾ ಬಡವರ ಏಳ್ಗೆಗಾಗಿ ಶ್ರಮಿಸುತ್ತ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟಿರುವ ಇಂತಹ ಶಾಸಕರು ನಮಗೆ ಸಿಕ್ಕಿರುವುದು ಪುಣ್ಯವೆಂದರು. ತಪಸಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಸುಮಾರು 30 ಕೋಟಿ ರೂ.ಗಳಷ್ಟು ಅನುದಾನದಲ್ಲಿ ಅಭಿವೃದ್ಧಿ ಕೈಗೊಂಡಿರುವ ಶಾಸಕರನ್ನು ಅಭಿನಂದಿಸಿದರು.
ತಪಸಿಯ ಸುರೇಶ ಮಹಾರಾಜರು ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ. ಬಾಲಚಂದ್ರ ಅವರು ಸಹಾಯ ಮಾಡದ ದೇವಸ್ಥಾನಗಳಿಲ್ಲ. ಇವರೊಬ್ಬ ಆಧುನಿಕ ಕರ್ಣ ಎಂದು ಬಣ್ಣಿಸಿದರು.
ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ರತ್ನವ್ವಾ ಗುಡದಾರ ವಹಿಸಿದ್ದರು.
ಯಲ್ಲಾಲಿಂಗ ಮಠದ ಜಾನಮ್ಮತಾಯಿ, ಎಪಿಎಂಸಿ ನಿರ್ದೇಶಕ ಬಸವರಾಜ ಸಾಯನ್ನವರ, ತಾಪಂ ಸದಸ್ಯರಾದ ಲಕ್ಷ್ಮಣ ನೀಲನ್ನವರ, ಲಕ್ಷ್ಮಣ ಮಸಗುಪ್ಪಿ, ತಾಪಂ ಮಾಜಿ ಸದಸ್ಯರಾದ ಮಲಕಾರಿ ವಡೇರ, ನಾಗಪ್ಪ ಮಂಗಿ, ಜಿಪಂ ಮಾಜಿ ಸದಸ್ಯ ವಿಠ್ಠಲ ಸವದತ್ತಿ, ಶಿವಲಿಂಗ ಬಳಿಗಾರ, ತಪಸಿಯ ರಾಯಪ್ಪ ತಿರಕನ್ನವರ, ಮುತ್ತೆಪ್ಪ ಮನ್ನಾಪೂರ, ಬಸಪ್ಪ ಬಣಜಿಗೇರ, ವಸಂತ ಗಲಗಲಿ, ಗುರುನಾಥ ಕುರೇರ, ಸಿದ್ದಪ್ಪ ಸುಳ್ಳನವರ, ವಕೀಲ ಎನ್.ಡಿ.ಗಲಗಲಿ, ಲಕ್ಷ್ಮಣ ಯಳ್ಳೂರ, ಗುರುನಾಥ ಪೊಲೀಸ್‍ನವರ, ವಸಂತ ದಾಬೋಜಿ, ಕೆಮ್ಮನಕೋಲದ ಲಕ್ಷ್ಮಣ ಅರಬನ್ನವರ, ಫಕೀರಪ್ಪ ಮಲ್ದೂರ, ಯಮನಪ್ಪ ವಾಳದ, ಮಾರುತಿ ಸಾಯನ್ನವರ, ತಮ್ಮಣ್ಣಾ ನಾಯಿಕ, ಲಕ್ಕಪ್ಪ ಕುರೇರ, ನಿಂಗಾಪೂರದ ತುಕಾರಾಮ ಯರಕನ್ನವರ, ಬಸವರಾಜ ಮಾಡಮಗೇರಿ, ಶಿವಾನಂದ ಮಾಡಮಗೇರಿ, ಮಾರುತಿ ಪಟ್ಟಿಹಾಳ, ಮಹಾದೇವ ನಾಯಿಕ, ಸಜ್ಜಿಹಾಳದ ಲಂಕೆಪ್ಪ ಯರಗುದ್ರಿ, ಅರ್ಜುನ ದೇಮನ್ನವರ, ತಾಪಂ ಇಓ ಎಫ್.ಜಿ. ಚಿನ್ನನ್ನವರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಾಯ್.ಎಂ. ಗುಜನಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ, ಪಾಂಡು ದೊಡಮನಿ, ರಾಜು ಬಳಿಗಾರ, ತಪಸಿ ಗ್ರಾಮ ಪಂಚಾಯತ ಸರ್ವ ಸದಸ್ಯರು ಉಪಸ್ಥಿತರಿದ್ದರು.
1.14 ಕೋಟಿ ರೂ. ವೆಚ್ಚದ ಕಾಮಗಾರಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಪಸಿಯಲ್ಲಿ ನರೇಗಾ ಯೋಜನೆಯಡಿ 16.25 ಲಕ್ಷ ರೂ. ವೆಚ್ಚದ ಗ್ರಾಮ ಪಂಚಾಯತಿ ಕಟ್ಟಡ, ಗಲಗಲಿ ತೋಟದಲ್ಲಿ 9.12 ಲಕ್ಷ ರೂ.ವೆಚ್ಚದ ಅಂಗನವಾಡಿ ಹಾಗೂ 7.25 ಲಕ್ಷ ರೂ. ವೆಚ್ಚದ ಶಾಲಾ ಕೊಠಡಿಯನ್ನು ಉದ್ಘಾಟಿಸಿದರು. 6.12 ಲಕ್ಷ ರೂ. ವೆಚ್ಚದ ರಂಗಮಂದಿರ, 15 ಲಕ್ಷ ರೂ. ವೆಚ್ಚದ ಪಿಎಂಜಿಎಸ್‍ವಾಯ್ ಯೋಜನೆಯಡಿ ಕಾಂಕ್ರೀಟ್ ರಸ್ತೆ ಕಾಮಗಾರಿ ಹಾಗೂ 15 ಲಕ್ಷ ರೂ. ವೆಚ್ಚದ ಸಮುದಾಯ ಭವನಕ್ಕೆ ತಪಸಿ ಕ್ರಾಸದಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.
ಕೆಮ್ಮನಕೋಲ ಗ್ರಾಮದಲ್ಲಿ ನರೇಗಾ ಯೋಜನೆಯಡಿ 16 ಲಕ್ಷ ರೂ. ವೆಚ್ಚದಲ್ಲಿ ಆಹಾರ ಧಾನ್ಯ ಶೇಖರಣ ಗೋಡಾವನ್ ಉದ್ಘಾಟನೆ, 12 ಲಕ್ಷ ರೂ. ವೆಚ್ಚದ ವಾಲ್ಮೀಕಿ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ನಿಂಗಾಪೂರ ಗ್ರಾಮದಲ್ಲಿ 7.25 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕೊಠಡಿ ಉದ್ಘಾಟನೆ ಹಾಗೂ 10 ಲಕ್ಷ ರೂ. ವೆಚ್ಚದ ರಂಗಮಂದಿರಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

Related posts: