ಗೋಕಾಕ:ಡಾ: ಸ್ವಾಮಿನಾಥನ್ ವರದಿ ಜಾರಿಗೆ ತರಲು ಮನವಿ
ಡಾ: ಸ್ವಾಮಿನಾಥನ್ ವರದಿ ಜಾರಿಗೆ ತರಲು ಮನವಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 8 :
ವಿವಿಧ ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಭಾರತ ಬಂದ್ ಕರೆ ಬೆಂಬಲಿಸಿ ಇಲ್ಲಿಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿ ತಹಶೀಲ್ದಾರ ಮುಖಾಂತರ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಿದರು.
ಡಾ: ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು. ರೈತರು ಕೃಷಿ ಕೂಲಿಕಾರರನ್ನು ಸಾಲದಿಂದ ಸಂಪೂರ್ಣ ಮುಕ್ತಗೊಳಿಸಲು ಋಣ ಮುಕ್ತ ಕಾಯ್ದೆ ಜಾರಿಗೆ ತರಬೇಕು. ಪ್ರವಾಹ ಪೀಡಿತರಿಗೆ ಕೂಡಲೇ ಸೂಕ್ತ ಪರಿಹಾರ ವಿತರಿಸಬೇಕು. ಬಗರ ಹುಕುಂ ಸಾಗುವಳಿ ಭೂಮಿಯ ಸಕ್ರಮ ಹಾಗೂ ರೈತರ ವಿರೋಧಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಕೈ ಬಿಡಬೇಕು ಮತ್ತು ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕ ಜಾರಿಗೆ ತರಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರುಗಳಾದ ಭೀಮಶಿ ಗದಾಡಿ, ಗಣಪತಿ ಈಳಿಗೇರ, ಮಹಾದೇವ ಗುಡೇರ, ಮುತ್ತೇಪ್ಪ ಬಾಗನ್ನವರ, ಪ್ರಕಾಶ ಆದನ್ನವರ, ಮುತ್ತೇಪ್ಪ ಕುರುಬರ, ಶಂಕರ ಮದಿಹಳ್ಳಿ, ಕುಮಾರ ತಿಗಡಿ, ಭೀಮಶಿ ಹುಲಕುಂದ,ರಾಯಪ್ಪ ಗೌಡಪ್ಪನವರ ಸೇರಿದಂತೆ ಅನೇಕರು ಇದ್ದರು.