ಗೋಕಾಕ:ಮನೆ ಕಳ್ಳತನ : ಮೂವರು ಆರೋಪಿಗಳ ಬಂಧನ, 7 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಮನೆ ಕಳ್ಳತನ : ಮೂವರು ಆರೋಪಿಗಳ ಬಂಧನ, 7 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಗೋಕಾಕ ನ 21 : ಗೋಕಾಕ ಶಹರ ಪೊಲೀಸರು ಮನೆ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರಿಂದ ಅಂದಾಜು 7 ಲಕ್ಷ ಮೌಲ್ಯದ 64 ಗ್ರಾಂ ಚಿನ್ನಾಭರಣಗಳು ಮತ್ತು 590 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಗೋಕಾಕ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀ ಬಡಾವಣೆಯಲ್ಲಿ ನವೆಂಬರ್ 2, 2025 ರಂದು ದಾಖಲಾದ ಮನೆ ಕಳ್ಳತನ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ನವೆಂಬರ್ 12, 2025 ರಂದು ನಂದೀಶ ಹನಮಂತಪ್ಪ ಸಕ್ರಪ್ಪನವರ ಎಂಬ ಒರ್ವ ಆರೋಪಿಯನ್ನು ಬಂಧಿಸಿದ್ದರು. ನಂತರ ಆತನ ಸಹಚರರನ್ನು ನವೆಂಬರ್ 13, 2025 ರಂದು ನವೀನ ಅಶೋಕ ಮುಂಡರಗಿ,ರಮೇಶ ಶಂಕರೆಪ್ಪ ಅಗಡಿ ಎಂಬ ಇಬ್ಬರೂ ಆರೋಪಿಗಳು ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸದರಿ ಪ್ರಕರಣದ ಪತ್ತೆಗಾಗಿ ಎಸ್.ಪಿ ಡಾ|| ಭೀಮಾಶಂಕರ ಎಸ್ ಗುಳೇದ ಅವರು ಸಿಪಿಐ ಸುರೇಶ ಬಾಬು ಆರ್.ಬಿ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ತನಿಖಾ ತಂಡವು ಎಸ್.ಪಿ.ಡಾ. ಭೀಮಾಶಂಕರ ಗಳೇದ, ರಾಮಗೊಂಡ ಬಸರಗಿ ಹೆಚ್ಚುವರಿ ಎಸ್.ಪಿ-01 ಬೆಳಗಾವಿ, ರವಿ ಡಿ ನಾಯ್ಕ ಡಿ.ಎಸ್.ಪಿ ಗೋಕಾಕ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಕಳ್ಳತನ ಪ್ರಕರಣದ ತನಿಖೆ ಕೈಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದರಿ ಪ್ರಕರಣದಲ್ಲಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿಪಿಐ ಸುರೇಶ ಬಾಬು ಆರ್.ಬಿ, ಪಿಎಸ್ಐಗಳಾದ ಕಿರಣ ಎಸ್ ಮೋಹಿತೆ, ನಿಖಿಲ ಕಾಂಬಳೆ ಸಿಬ್ಬಂದಿಗಳಾದ ಕೆ.ಎನ್.ಈಳಿಗೇರ, ಜೆ.ಎಚ್.ಗುಡ್ಲಿ, ಎ.ಸಿ ಕಾಪಶಿ, ಎಮ್ ಎಲ್ ಹುಚ್ಚಗೌಡರ, ಎಸ್ ಎಸ್ ಕುರಬೇಟ ಹಾಗೂ ಬೆಳಗಾವಿಯ ಟೆಕ್ನಿಕಲ್ ಸೆಲ್‍ನ ಸಚೀನ ಪಾಟೀಲ ಮತ್ತು ವಿನೋದ ಠಕ್ಕನ್ನವರ ಇವರ ಕಾರ್ಯವನ್ನು ಎಸ್.ಪಿ ಸಾಹೇಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದರಿ ಆರೋಪಿತರಿಂದ ಬಂಗಾರದ ಚೋಕರ ನಕ್ಲೇಸ್-01, ಬಂಗಾರದ ಸಣ್ಣ ಮಂಗಳ ಸೂತ್ರ-01, ಒಟ್ಟು ಬಂಗಾರದ ಬಳೆಗಳು-04, ಹೀಗೆ ಒಟ್ಟು ತೂಕ 64 ಗ್ರಾಂ. ಅ.ಕಿ= 7,68,000/- ರೂ., ಬೆಳ್ಳಿಯ ಆರಭರಣಗಳು ಒಟ್ಟು ತೂಕ 590 ಗ್ರಾಂ ಅ.ಕಿ=92,000/- ರೂ. ಕಳುವು ಮಾಡಿದ ಬಂಗಾರದ ಆಭರಣಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣ 5,600/-ರೂ. ಆರೋಪಿತರು ಅಟ್ಟಿಕಾ ಗೋಲ್ಡ್ ಕಂಪನಿ ಹುಬ್ಬಳ್ಳಿ ಬ್ರ್ಯಾಂಚ್‍ನಲ್ಲಿ ಮಾರಾಟ ಮಾಡಿದ 39 ಗ್ರಾಂ ಬಂಗಾರದ ಆಭರಣ ಅ.ಕಿ=4,68,000/-ರೂ ನೇದ್ದನ್ನು ವಶಪಡಿಸಿಕೊಳ್ಳುವುದು ಬಾಕಿ ಇರುತ್ತದೆ ಎಂದು ತಿಳಿದುಬಂದಿದೆ.
