ಗೋಕಾಕ : ಜಾತಿ ಸಮೀಕ್ಷೆಯಲ್ಲಿ ಲಿಂಗಾಯತ ಎಂದು ಬರೆಸಿ : ಜಾಗತಿಕ ಲಿಂ.ಮಹಾಸಭಾದ ಅಧ್ಯಕ್ಷ ಈಶ್ವರ ಮನವಿ

ಜಾತಿ ಸಮೀಕ್ಷೆಯಲ್ಲಿ ಲಿಂಗಾಯತ ಎಂದು ಬರೆಸಿ : ಜಾಗತಿಕ ಲಿಂ.ಮಹಾಸಭಾದ ಅಧ್ಯಕ್ಷ ಈಶ್ವರ ಮನವಿ
ಗೋಕಾಕ ಅ 1 : ರಾಜ್ಯಾದ್ಯಂತ ಕಳೆದ ೨೨ರಿಂದ ಆರಂಭವಾಗಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿರುವ ಇತರೆ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ, ಸಮಾಜದ ಬಾಂಧವರಿಗೆ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಈಶ್ವರ ಭಾಗೋಜಿ ಮನವಿ ಮಾಡಿದ್ದಾರೆ.
ಬುಧವಾರದಂದು ನಗರದ ಶ್ರೀ ಶೂನ್ಯ ಸಂಪಾದನ ಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಉಳಿದಂತೆ ಜಾತಿಯ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ ಹಾಗೂ ಉಪ ಜಾತಿಯ ಕಾಲಂನಲ್ಲಿರುವ ತಮ್ಮ ತಮ್ಮ ಉಪಜಾತಿ ಹೆಸರು ಬರೆಸುವಂತೆ ಮನವಿ ಮಾಡಿದರು.
ಸರ್ಕಾರಕ್ಕೆ ನಾಡಿನ ಜನರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ನಿಖರ ಮಾಹಿತಿ ದೊರೆತರೆ, ನಾಡಿನ ಜನರೆಲ್ಲರ ಕಲ್ಯಾಣಕ್ಕೆ ಕಾರ್ಯಕ್ರಮ ರೂಪಿಸಲು ಅನುವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಈ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಮೀಸಲಾತಿಗಾಗಿ ನೀಡುವ ಜಾತಿ ಪ್ರಮಾಣ ಪತ್ರಕ್ಕೂ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೂ ಸಂಬಂಧವಿಲ್ಲ. ನೈಜ ಜಾತಿ, ಶಾಲಾ ದಾಖಲಾತಿ ಇತ್ಯಾದಿ ಪರಾಮರ್ಶಿಸಿದ ಬಳಿಕವಷ್ಟೇ ಜಾತಿ ಪ್ರಮಾಣ ಪತ್ರ ನೀಡಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ನೈಜ ಜಾತಿಯನ್ನೇ ಸಮೀಕ್ಷೆಯಲ್ಲಿ ಬರೆಸಬೇಕು, ನಮ್ಮ ಸಮುದಾಯದ ನೈಜ ಸಂಖ್ಯೆ ಹೊರಹೊಮ್ಮಲು ಸಹಕರಿಸಬೇಕು ಎಂದು ಸಮಸ್ತ ಲಿಂಗಾಯತ ಸಮಾಜದ ಬಾಂಧವರಿಗೆ ಸಭಾ ಪರಿವಾಗಿ ಮನವಿ ಮಾಡಿದರು.
ಬನಜಿಗ ಸಮಾಜದ ತಾಲೂಕು ಅಧ್ಯಕ್ಷ ಚನ್ನಪ್ಪ ಕೌಜಲಗಿ ಮಾತನಾಡಿ ಜಾತಿ ಸಮೀಕ್ಷೆಯಲ್ಲಿ ಲಿಂಗಾಯತ ಎಂದು ಬರೆಸುವದರಿಂದ ಕೇಂದ್ರ ಸರಕಾರದ ಮೇಲೆ ಒತ್ತಡ ಬಿಳುತ್ತದೆ. ಕರ್ನಾಟಕ ರಾಜ್ಯದಲ್ಲಿ ನಾವು ಬಹುಸಂಖ್ಯಾತ ಇದರೂ ರಾಷ್ಟ್ರ ಮಟ್ಟದಲ್ಲಿ ನಾವು ಅಲ್ಪಸಂಖ್ಯಾತರೇ ಧರ್ಮದ ಕಾಲಂನಲ್ಲಿ ಅದರಲ್ಲಿಯೂ ಇತರೆ ಕಾಲಂನಲ್ಲಿ ಲಿಂಗಾಯತ ಹಾಗೂ ಕೋಡ್ ನಂಬರ A0832 ಬರೆಸಬೇಕು ಉಪಜಾತಿ ಕಾಲಂನಲ್ಲಿ ನಿಮ್ಮ ಕಸಬುಗೆ ತಕ್ಕಂತೆ ಜಾತಿಯನ್ನು ಬರೆಯಿಸಬೇಕು ಎಂದು ಮನವಿ ಮಾಡಿದರು.
ಶೂನ್ಯ ಸಂಪಾದನ ಮಠದ ಬಸವ ಪ್ರಭು ದೇವರು ಮಾತನಾಡಿ ರಾಜ್ಯಾದ್ಯಂತ ನಡೆದಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮಾಜದ ಮುಖಂಡರು ಹೇಳಿರುವಂತೆ ಲಿಂಗಾಯತ ಎಂದು ಬರೆಸಬೇಕು. ವಿಶ್ವ ಗುರು ಬಸವಣ್ಣ ನವರಿಗೆ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಒಂದು ವರ್ಷ ಪೂರೈಸಿದ ನಿಮಿತ್ತವಾಗಿ ಬರುವ ಅಕ್ಟೋಬರ್ 5 ರಂದು ಬೆಂಗಳೂರಿನಲ್ಲಿ ಸಮಾಜ ಬಾಂಧವರು ಹಮ್ಮಿಕೊಂಡಿರುವ ಅಭಿನಂದನಾ ಸಮಾರಂಭದಲ್ಲಿ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿನಂದನಾ ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರುಗಳಾದ ಮಲ್ಲಿಕಾರ್ಜುನ ಈಟಿ, ಶಂಕರ ಅಮರಶೆಟ್ಟಿ, ನ್ಯಾಯವಾದಿ ಮಹಾಂತೇಶ ವಾಲಿ,ಶಿವಪುತ್ರ ಅಂಗಡಿ, ಕರುಡಸಾಗರ ಪ್ಯಾಟಿ ಉಪಸ್ಥಿತರಿದ್ದರು.
