ಗೋಕಾಕ:ಸಮಾಜದಲ್ಲಿ ಮೌಡ್ಯತೆ, ಕಂದಾಚಾರ, ಅಂಧಶ್ರದ್ಧೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ : ಡಾ.ಸಿ.ಕೆ.ನಾವಲಗಿ

ಸಮಾಜದಲ್ಲಿ ಮೌಡ್ಯತೆ, ಕಂದಾಚಾರ, ಅಂಧಶ್ರದ್ಧೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ : ಡಾ.ಸಿ.ಕೆ.ನಾವಲಗಿ
ಗೋಕಾಕ ಜು 28 : ಮೌಡ್ಯತೆ, ಕಂದಾಚಾರ, ಅಂಧಶ್ರದ್ಧೆ ಸಮಾಜದಲ್ಲಿ ಇಂದಿಗೂ ಬೇರೂರಿದ್ದು ಅವುಗಳ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಜನಪದ ತಜ್ಞ ಡಾ.ಸಿ.ಕೆ.ನಾವಲಗಿ ಹೇಳಿದರು.
ಸೋಮವಾರದಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ ಶ್ರೀ ಶೂನ್ಯ ಸಂಪಾದನ ಮಠ, ಬಸವ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ, ವಚನ ಸಾಹಿತ್ಯ ಚಿಂತನ ,ಮಂಥನ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಬಸವ ಪಂಚಮಿ ನಿಮಿತ್ತ ರೋಗಿಗಳಿಗೆ ಹಾಲನ್ನು ವಿತರಿಸಿ ಅವರು ಮತನಾಡುತ್ತಿದ್ಧರು.
‘ನಾಗರ ಪಂಚಮಿ ಹಬ್ಬದ ಹೆಸರಿನಲ್ಲಿ ಜನರು ಪ್ರತಿವರ್ಷ ಹುತ್ತ ಮತ್ತು ಕಲ್ಲು ನಾಗನಿಗೆ ಹಾಲು, ನೈವೇದ್ಯ ಅರ್ಪಿಸಿ ಪೋಷ್ಠಿಕವಾದ ಆಹಾರವನ್ನು ವ್ಯರ್ಥ ಮಾಡುತ್ತಿದ್ದಾರೆ. ಇದರಿಂದ ಲಕ್ಷಾಂತರ ಲೀಟರ್ ಹಾಲು ಮಣ್ಣು ಪಾಲು ಆಗುತ್ತಿದೆ. ಇದರಿಂದ ಯಾರಿಗೂ ಉಪಯೋಗವಿಲ್ಲ. ಇದರ ಬದಲಾಗಿ ಬಡ ಮಕ್ಕಳು, ರೋಗಿಗಳು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲು, ಹಣ್ಣು ನೀಡಿದರೆ ದೇವರಿಗೆ ನಿಜವಾದ ಪೂಜೆ ಸಲ್ಲಿಸಿದಂತಾಗುತ್ತದೆ. ಮೌಡ್ಯತೆ ವಿರುದ್ಧ ಸಮಾಜದಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲರಿಂದ ನಡೆಯಲಿ’ ಎಂದು ಆಶಿಸಿದರು.
ಬುದ್ಧ ಬಸವ, ಅಂಬೇಡ್ಕರ್ ಅವರು ಸಾರಿದ ಸಂದೇಶ ಪ್ರತಿಯೊಬ್ಬರು ನಿಜ ಜೀವನದಲ್ಲಿ ಆಚರಣೆಗೆ ತಂದಲ್ಲಿ ಮಾತ್ರ ಸಮಾಜದಲ್ಲಿ ಬೇರೂರಿರುವ ಮೌಡ್ಯತೆ ತೊಲಗಲಿದೆ. ಕಳೆದ ಹಲವು ದಶಕಗಳಿಂದ ಇಲ್ಲಿನ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಿವಿಧ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಮೌಡ್ಯದ ವಿರುದ್ಧ ಜಾಗೃತಿ ಸಾರುತ್ತಿರುವುದು ಶ್ಲಾಘನೀಯ’ ಎಂದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಡಾ.ಪವನಕುಮಾರ, ಡಾ.ಗೋಪಾಲ ಹೊಂಗಲ್. ಡಾ.ಕಿರಣ ಕುಮಾರ, ಡಾ.ಸಂಜೀವಿನಿ ಉಮರಾಣಿ,
ಬಸನಗೌಡ ಪಾಟೀಲ,ಬಸವರಾಜ ಖಾನಪ್ಪನವರ, ಎಸ್.ಕೆ.ಮಠದ, ಬಸವರಾಜ ಹತ್ತರಕಿ, ಮೈಲಾರಲಿಂಗ ಉಪ್ಪಿನ, ಶಂಕರ ಗೋರೋಶೀ, ಪ್ರಶಾಂತ್ ಕರುಬೇಟ್, ಭಾರತಿ ಮರೆನ್ನವರ, ಕಾಳಪ್ಪ ಗುರಾಣಿ, ಮಲ್ಲೇಶ ಆಡಿನ್ ,ನಾಗರಾಜ ಶಿಗಿಹಳ್ಳಿ ಮಲ್ಲಿಕಾರ್ಜುನ ಈಟಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.