ಗೋಕಾಕ:ಶಾಸಕ ರಮೇಶ್ ಜಾರಕಿಹೊಳಿ ಮನೆಗೆ ರೇಬಲ್ ನಾಯಕರ ದಂಡು

ಶಾಸಕ ರಮೇಶ್ ಜಾರಕಿಹೊಳಿ ಮನೆಗೆ ರೇಬಲ್ ನಾಯಕರ ದಂಡು
ಗೋಕಾಕ ಜು 7 : ಶಾಸಕ ರಮೇಶ ಜಾರಕಿಹೊಳಿ ಆಹ್ವಾನದ ಮೇರೆಗೆ ಗೋಕಾಕ ಗ್ರಾಮ ದೇವತೆಯ ಜಾತ್ರಾ ಮಹೋತ್ಸವಕ್ಕೆ ಬಿಜೆಪಿ ರೇಬಲ್ ನಾಯಕರ ದಂಡು ಗೋಕಾಕ ನಗರಕ್ಕೆ ಹರಿದು ಬಂದಿದೆ.
ಸೋಮವಾರದಂದು ಬಿಜೆಪಿ ನಾಯಕರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಶ್ರೀಮಂತ ಪಾಟೀಲ, ಮಾಜಿ ಸಂಸದ ಬಿವಿ ನಾಯಕ, ಶಾಸಕರಾದ ಬಿ ಪಿ ಹರೀಶ, ಮಾಜಿ ಶಾಸಕ ಮಹೇಶ ಕುಮಟಳ್ಳಿ, ಮುಖಂಡರಾದ ಕಿರಣ ಜಾಧವ ಸೇರಿದಂತೆ ಮಾಜಿ ಶಾಸಕರು, ಬಿಜೆಪಿ ಮುಖಂಡರು ನಗರಕ್ಕೆ ಆಗಮಿಸಿದ್ದರು.
ಶಾಸಕ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಗೆ ಆಗಮಿಸಿದ ಬಿಜೆಪಿ ನಾಯಕರು ಶಾಸಕ ರಮೇಶ ಹಾಗೂ ಪುತ್ರ ಅಮರನಾಥ ಜಾರಕಿಹೊಳಿ ಅವರೊಂದಿಗೆ ನಗರದ ಗುರುವಾರ ಪೇಠ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಮೆರಕನಟ್ಟಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದೇವಿಯರ ದರ್ಶನ ಪಡೆದರು. ಶಾಸಕ ರಮೇಶ ಜಾರಕಿಹೊಳಿ ಬಿಜೆಪಿ ನಾಯಕರನ್ನು ಸತ್ಕರಿಸಿ ಗೌರವಿಸಿದರು. ಬಿಜೆಪಿ ನಾಯಕರು ನೋಡುತ್ತಿದ್ದಂತೆ ದೇವಸ್ಥಾನದಲ್ಲಿಯ ಭಕ್ತರು ನಾಯಕರೊಂದಿಗೆ ಫೋಟೊ ತೆಗೆಸಿಕೊಳ್ಳಲು ಮುಗಿಬಿದ್ದರು.
ಬೆಳಗಾವಿ ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಅವರ ಆದಿತ್ಯ ನಗರದ ಮನೆಗೆ ಭೇಟಿ ನೀಡಿದ ಬಿಜೆಪಿ ನಾಯಕರು ಕೆಲಕಾಲ ಮಾತುಕತೆ ನಡೆಸಿ, ಉಪಾಹಾರ ಸವಿದರು. ಬಿಜೆಪಿ ನಾಯಕರೊಂದಿಗೆ ಶಾಸಕ ರಮೇಶ ಜಾರಕಿಹೊಳಿ ತಮ್ಮ ಸ್ವಗೃಹದಲ್ಲಿ ಕೆಲಕಾಲ ಸಭೆ ನಡೆಸಿದರು.